ಉಪ್ಪಿನಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ “ಮಹಿಳಾ ಸುರಕ್ಷತಾ ಕಾರ್ಯಾಗಾರ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿ, ವಕೀಲರಾದ ಹರಿಣಾಕ್ಷಿ ಶೆಟ್ಟಿ ಮಾತನಾಡಿ, “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಮಾತಿನೊಂದಿಗೆ ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣ ಪಡೆದುಕೊಂಡಾಗ ರಕ್ಷಣೆಯ ಜ್ಞಾನ ತಾನಾಗಿಯೇ ಉಂಟಾಗುತ್ತದೆ. ಪೋಕ್ಸೋ ಕಾಯಿದೆ ಮುಖಾಂತರ ವಿದ್ಯಾರ್ಥಿನಿಯರಿಗೆ ಆಗುವ ಕಿರುಕುಳವನ್ನು ತಪ್ಪಿಸಬಹುದು. ಅಂತೆಯೇ ಅಪರಾಧಿಯನ್ನು ಶಿಕ್ಷೆಗೆ ಒಳಪಡಿಸಬಹುದು. ಮೌಲ್ಯಾಧಾರಿತ ಶಿಕ್ಷಣದಿಂದ ಯಾರೂ ಕೂಡ ವಂಚಿತರಾಗಬಾರದು ಎಂದು ತಿಳಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಮುಹಮ್ಮದ್ ಬಡಗನ್ನೂರು ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಜೊತೆಗೆ ಒಳ್ಳೆಯ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಜೀಜ್ ಬಸ್ತಿಕ್ಕಾರ್, ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೀತಿಸಿ. ಆ ಪ್ರೀತಿ ವಿದ್ಯಾರ್ಥಿಗಳನ್ನು ಒಳ್ಳೆಯ ಹಾದಿಯೆಡೆಗೆ ಕೊಂಡೊಯ್ಯಬಹುದು. ತಪ್ಪು ಸಂಭವಿಸುವುದು ಸ್ವಾಭಾವಿಕ. ಆ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಬಾಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಇಬ್ರಾಹೀಂ ಎಂ. ಮಾತನಾಡಿ, ಉತ್ತಮ ಬದುಕಿನ ಪಾಠಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿನಿ ರಶ್ಮಿ ಪ್ರಾರ್ಥಿಸಿದರು. ಉಪನ್ಯಾಸಕಿ ಉಷಾ ಸ್ವಾಗತಿಸಿದರು. ರಮೇಶ್ ಎಚ್.ಜೆ. ವಂದಿಸಿದರು. ಡಾ. ಮಂಜುಳಾ ಬನಾಕರ್ ಕಾರ್ಯಕ್ರಮ ನಿರೂಪಿಸಿದರು.