479.69 ಕೋಟಿ ರೂ.ವ್ಯವಹಾರ ; 1.54 ಕೋಟಿ ರೂ.ನಿವ್ವಳ ಲಾಭ, ಶೇ.10 ಡಿವಿಡೆಂಡ್ ಘೋಷಣೆ
ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ವರ್ಷದ 65ನೇ ವಾರ್ಷಿಕ ಮಹಾಸಭೆ ಸೆ.12ರಂದು ಸಂಘದ ನೆಲ್ಯಾಡಿಯಲ್ಲಿರುವ ಪ್ರಧಾನ ಕಚೇರಿಯ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಯಸ್. ಉಮೇಶ್ ಶೆಟ್ಟಿ ಪಟ್ಟೆ ಅವರು ಮಾತನಾಡಿ, ಕಳೆದ 64 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಕಾಣುತ್ತಿದೆ. ಸದಸ್ಯರ ಆರ್ಥಿಕ ಅವಶ್ಯಕತೆಯನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಪಡಿತರ ವಿತರಣೆಯಿಂದ ಯಾವುದೇ ಲಾಭವಿಲ್ಲದಿದ್ದರೂ ಸಮರ್ಪಕವಾಗಿ ವಿತರಣೆ ಮಾಡುತ್ತಿದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಕೃಷಿಕರಿಗೆ ಸಿಗುವಂತೆ ಮಾಡಲು ಸಾಕಷ್ಟ ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ ಎಂದರು. ಕೇಂದ್ರ ಕಚೇರಿ ಮತ್ತು ಗೋಳಿತ್ತೊಟ್ಟು ಶಾಖೆಯೂ ಸ್ವಂತ ಕಟ್ಟಡವನ್ನು ಹೊಂದಿದ್ದು ಬಾಡಿಗೆ ಕಟ್ಟಡದಲ್ಲಿದ್ದ ಶಿರಾಡಿ ಶಾಖೆಗೂ ಸ್ವಂತ ನಿವೇಶನ ಖರೀದಿಸಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಮುಂದಿನ ತಿಂಗಳು ಅಕ್ಟೋಬರ್ 7ರಂದು ಉದ್ಘಾಟಿಸಲಾಗುವುದು. ಬೆಳೆವಿಮೆ ಯೋಜನೆಯ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದು ಹೇಳಿದ ಅವರು, ಸಂಘದ ಉತ್ತಮ ವ್ಯವಹಾರವನ್ನು ಗಮನಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸತತ 5 ವರ್ಷಗಳಿಂದ ವಿಶೇಷ ಪ್ರೋತ್ಸಾಹ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. 2020ನೇ ಸಾಲಿನಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ ಸಂಘಕ್ಕೆ ಜಿಲ್ಲೆಯಲ್ಲಿಯೇ ಉತ್ತಮ ಕೃಷಿ ಪತ್ತಿನ ಸಹಕಾರ ಸಂಘ ಎಂಬ ಪ್ರಶಸ್ತಿಯೂ ಲಭಿಸಿದೆ. ಪ್ರಸ್ತುತ ವರ್ಷ ಸಂಘವು ಕಳೆದ 23 ವರ್ಷಗಳ ಬಳಿಕ ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ ಮಾಡಿದ್ದು ದ.ಕ.ಜಿಲ್ಲಾ ಕೇಂದ್ರ ಬ್ಯಾಂಕ್‌ನಿAದ ವಿಶೇಷ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ನಿರಂತರ 30 ವರ್ಷಗಳಿಂದ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷನಾಗಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
1.54 ಕೋಟಿ ರೂ.ಲಾಭ:
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಂ.ದಯಾಕರ ರೈಯವರು ವರದಿ ಮಂಡಿಸಿ, 2023-24ನೇ ಸಾಲಿನಲ್ಲಿ ಸಂಘವು ಒಟ್ಟು 479,69,97,518 ರೂ. ವ್ಯವಹಾರ ಮಾಡಿದ್ದು 1,54,98,888.16 ರೂ.ನಿವ್ವಳ ಲಾಭಗಳಿಸಿದೆ. ವರ್ಷದ ಕೊನೆಗೆ 6259 ಸದಸ್ಯರಿದ್ದು 8,73,30,150 ಪಾಲುಬಂಡವಾಳ, 29,82,48,296 ಠೇವಣಾತಿ ಹೊಂದಿದೆ. ಮುಂದಿನ ವರ್ಷಕ್ಕೆ ಪಾಲು ಬಂಡವಾಳವನ್ನು ರೂ.900 ಲಕ್ಷಕ್ಕೆ ಹಾಗೂ ಠೇವಣಿಯನ್ನು 3,000 ಲಕ್ಷಕ್ಕೆ ಹಾಗೂ ಹೊರಬಾಕಿ ಸಾಲವನ್ನು ರೂ.8,500ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಶೇ.10 ಡಿವಿಡೆಂಡ್:
1.54 ಕೋಟಿ ರೂ.ಲಾಭಾಂಶದಲ್ಲಿ ನಿಬಂಧನೆಯಂತೆ ವಿಂಗಡಣೆ ಮಾಡಲಾಗಿದ್ದು ಸದಸ್ಯರಿಗೆ ಶೇ.9 ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಅಧ್ಯಕ್ಷ ಉಮೇಶ್ ಶೆಟ್ಟಿ ತಿಳಿಸಿದರು. ಸದಸ್ಯ ಜನಾರ್ದನ ಬಾಣಜಾಲು ಅವರು ಮಾತನಾಡಿ ಡಿವಿಡೆಂಡ್ ಶೇ.10ರಷ್ಟು ನೀಡಬೇಕೆಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಉಮೇಶ್ ಶೆಟ್ಟಿ ಅವರು, ಈ ವರ್ಷ ಶಿರಾಡಿಯಲ್ಲಿ 1.52 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಆಗಿದೆ. ಆದ್ದರಿಂದ ಈ ವರ್ಷ ಡಿವಿಡೆಂಡ್ ಹೆಚ್ಚಳ ಸಾಧ್ಯವಿಲ್ಲ ಎಂದರು. ಸದಸ್ಯರಾದ ಎನ್.ವಿ.ವ್ಯಾಸ, ಸುಂದರ ಗೌಡ ಅತ್ರಿಜಾಲು, ಕೆ.ಪಿ. ಪ್ರಸಾದ್ ಸುಲ್ತಾಜೆ ಸೇರಿದಂತೆ ಇತರೇ ಸದಸ್ಯರೂ ಡಿವಿಡೆಂಡ್ ಹೆಚ್ಚಳಕ್ಕೆ ಒತ್ತಾಯಿಸಿದರು. ಬಳಿಕ ಅಧ್ಯಕ್ಷರು ಶೇ.10 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.
ಲಿಫ್ಟ್ ಅಳವಡಿಸಿ:
ಕೇಂದ್ರ ಕಚೇರಿಗೆ ಲಿಫ್ಟ್ ಅಳವಡಿಸಬೇಕು ಹಾಗೂ ಕೌಕ್ರಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಸ್ವಂತ ಕಟ್ಟಡಕ್ಕೆ ನಿವೇಶನ ಖರೀದಿಗೆ ಪ್ರಯತ್ನಿಸಬೇಕೆಂದು ಸಂಘದ ಕಾನೂನು ಸಲಹೆಗಾರರಾದ ನ್ಯಾಯವಾದಿ ಶಿವಪ್ರಸಾದ್‌ರವರು ಹೇಳಿದರು. ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಶಿರಾಡಿಯಲ್ಲಿ ನಿವೇಶನ ಖರೀದಿಸಿ ಸ್ವಂತ ಕಟ್ಟಡ ನಿರ್ಮಾಣ ಮಾಡಿರುವುದಕ್ಕೆ ಅವರು ಸಂಘಕ್ಕೆ ಅಭಿನಂದನೆ ಸಲ್ಲಿಸಿದರು. ಇದಕ್ಕೆ ಜೋಸೆಫ್ ಗೋಳಿತ್ತೊಟ್ಟು ಹಾಗೂ ಇತರರೂ ಬೆಂಬಲ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈ ವಿಚಾರದ ಬಗ್ಗೆ ಆಡಳಿತ ಮಂಡಳಿ ಪ್ರಯತ್ನದಲ್ಲಿದೆ ಎಂದರು.
ಶಿರಾಡಿ, ಗೋಳಿತ್ತೊಟ್ಟುಗೆ ಸಂಘ ಬೇಕು:
ಸಂಘದ ಸದಸ್ಯರು, ಶಿರಾಡಿ ಗ್ರಾ.ಪಂ.ಸದಸ್ಯರೂ ಆದ ಎಂ.ಕೆ.ಪೌಲೋಸ್ ಅವರು ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸಹಕಾರ ಸಂಘ ಸ್ಥಾಪನೆಯಾಗಬೇಕೆಂದು ಕೇಂದ್ರ ಸರಕಾರದ ಸುತ್ತೋಲೆ ಇದೆ. ಆದ್ದರಿಂದ ಶಿರಾಡಿಯಲ್ಲಿ ಸಹಕಾರ ಸಂಘ ಆಗಬೇಕೆಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಘದ ಕಾನೂನು ಸಲಹೆಗಾರ ಶಿವಪ್ರಸಾದ್ ಅವರು, ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಸಹಕಾರಿ ಸಂಘ ಇಲ್ಲವೇ ಶಾಖೆ ಇರಬೇಕೆಂಬ ಸುತ್ತೋಲೆ ಬಂದಿತ್ತು. ಆದರೆ ಇದಕ್ಕೆ ಈಗ ತಾತ್ಕಾಲಿಕ ತಡೆ ನೀಡಲಾಗಿದೆ. ಇಲಾಖೆ ಆದೇಶ ನೀಡಿ ಈ ಯೋಜನೆ ರಾಜ್ಯದಲ್ಲೇ ಜಾರಿಗೆ ಬಂದಲ್ಲಿ ಇಲ್ಲಿಗೂ ಅನ್ವಯವಾಗಲಿದೆ ಎಂದರು. ಎಪಿಎಂಸಿ ಮಾಜಿ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ ಮಾತನಾಡಿ, ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಮೂರು ಗ್ರಾಮಗಳ ವ್ಯಾಪ್ತಿ ಹೊಂದಿದ್ದು ಗೋಳಿತ್ತೊಟ್ಟಿನಲ್ಲಿ ಸಂಘದ ಪ್ರಧಾನ ಕಚೇರಿ ಇರಬೇಕೆಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಪ್ರಸಾದ್ ಅವರು ಹಿಂದೆ ಗೋಳಿತ್ತೊಟ್ಟು, ಶಿರಾಡಿ, ನೆಲ್ಯಾಡಿಗೆ ಪ್ರತ್ಯೇಕ ಸಹಕಾರ ಸಂಘ ಇತ್ತು. ಆದರೆ ವ್ಯವಹಾರದ ಕೊರತೆಯಿಂದಾಗಿ ಗೋಳಿತ್ತೊಟ್ಟು,ಶಿರಾಡಿ ಶಾಖೆಗಳನ್ನು ನೆಲ್ಯಾಡಿಯೊಂದಿಗೆ ವಿಲೀನಗೊಳಿಸಲಾಯಿತು. ಈಗ ನೆಲ್ಯಾಡಿ ಸಹಕಾರ ಸಂಘವು 7 ಗ್ರಾಮಗಳ ವ್ಯಾಪ್ತಿ ಹೊಂದಿದೆ. ಒಟ್ಟಾಗಿ ಇದ್ದಲ್ಲಿ ಹೆಚ್ಚು ಲಾಭ ಸಿಗುತ್ತದೆ ಎಂದು ಹೇಳಿದರು.
ಗೋಳಿತ್ತೊಟ್ಟು ಶಾಖೆ ಆಧುನೀಕರಣಗೊಳಿಸಿ:
ಗೋಳಿತ್ತೊಟ್ಟು ಶಾಖೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಕಚೇರಿಗೆ ಎಸಿ ಅಳವಡಿಸಬೇಕು. ಎಟಿಎಂ ಸೇರಿದಂತೆ ಹೆಚ್ಚಿನ ಸೌಲಭ್ಯ ನೀಡಬೇಕೆಂದು ನಾಸೀರ್ ಸಮರಗುಂಡಿ ಒತ್ತಾಯಿಸಿದರು. ಶತಮಾನೋತ್ಸವ ಆಚರಿಸುತ್ತಿರುವ ಗೋಳಿತ್ತೊಟ್ಟು ಶಾಲೆಗೆ ನೆರವು ನೀಡಬೇಕೆಂದು ನಾಸೀರ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ದಯಾಕರ ರೈಯವರು, ಕೇಂದ್ರ ಕಚೇರಿಯಲ್ಲಿ ಮಿನಿ ಎಟಿಎಂ ಆರಂಭಿಸಲಾಗಿದೆ. ಮುಂದೆ ಶಾಖೆಗಳಿಗೂ ವಿಸ್ತರಿಸಲಾಗುವುದು. ಉಳಿದ ವಿಚಾರಗಳ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗೋಳಿತ್ತೊಟ್ಟು ಶಾಖೆಯಲ್ಲಿ ರಾಸಾಯನಿಕ ಗೊಬ್ಬರ ವಿತರಿಸಿ:
ಸಂಘದ ಗೋಳಿತ್ತೊಟ್ಟು ಶಾಖೆಯಲ್ಲಿ ರಾಸಾಯನಿಕ ಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇದರಿಂದ ಆಲಂತಾಯ ಭಾಗದ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೇ ಸಂಘದ ವ್ಯವಹಾರವೂ ಜಾಸ್ತಿಯಾಗಲಿದೆ ಎಂದು ಸಂಜೀವ ಪೂಜಾರಿ ಬಟ್ಲಡ್ಕ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಗೋಳಿತ್ತೊಟ್ಟಿನಲ್ಲಿ ಸಂಘಕ್ಕೆ ಸರಿಯಾದ ಗೋದಾಮು ವ್ಯವಸ್ಥೆ ಇಲ್ಲ. ಅಲ್ಲದೇ ಸೇಲ್ಸ್ ಸಹ ಜಾಸ್ತಿ ಆಗಬೇಕಾಗಿದೆ. ಆದರೂ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಚಾರ ಚರ್ಚಿಸುತ್ತೇವೆ ಎಂದರು.
ನಿರಾಕ್ಷೇಪಣಾ ಪತ್ರಕ್ಕೆ ಶುಲ್ಕ ಪಡೆಯುವಂತಿಲ್ಲ:
ಸಹಕಾರ ಸಂಘಗಳಿಂದ ಕೃಷಿ ಸಾಲ ಪಡೆಯಲು ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ತರುವ ನಿರಾಕ್ಷೇಪಣಾ ಪತ್ರಗಳಿಗೆ ಶುಲ್ಕ ಪಾವತಿಸುವಂತಿಲ್ಲ. ಆದರೂ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಂದ ಶುಲ್ಕ ಪಡೆಯುತ್ತಿವೆ. ಈ ಬಗ್ಗೆ ಆಡಳಿತ ಮಂಡಳಿ ಗಮನಹರಿಸಬೇಕೆಂದು ಯೂನಿಯನ್ ಬ್ಯಾಂಕ್‌ನ ನಿವೃತ್ತ ಅಧಿಕಾರಿಯೂ ಆಗಿರುವ ಸಂಘದ ಸದಸ್ಯ ರಾಮಚಂದ್ರ ಪುಚ್ಚೇರಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಘದ ಕಾನೂನು ಸಲಹೆಗಾರ ಶಿವಪ್ರಸಾದ್ ಅವರು, ಈ ಬಗ್ಗೆ ಸಂಘದಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತೀ ತಿಂಗಳೂ ಲೀಡ್ ಬ್ಯಾಂಕ್‌ನ ಅಧಿಕಾರಿಗಳ ಸಭೆ ನಡೆಯುತ್ತದೆ. ಆ ಸಭೆಯ ದಿನದಂದೂ ಸಂಘದ ಪ್ರತಿನಿಧಿಯೂ ಅಲ್ಲಿಗೆ ಹೋಗಿ ಈ ವಿಚಾರವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಕೃಷಿ ಸಾಲದ ಮಿತಿ ಹೆಚ್ಚಿಸಿ:
ರೈತರ ಆರ್‌ಟಿಸಿಯಲ್ಲಿ ಕೃಷಿ ಸಾಲ ದಾಖಲು ಆಗುವುದರಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಪಡೆಯಲು ತೊಂದರೆಯಾಗುತ್ತದೆ. ಆದ್ದರಿಂದ ಸಹಕಾರ ಸಂಘದಲ್ಲಿ ಇರುವ ಕೃಷಿ ಸಾಲದ ಮಿತಿಯನ್ನು ರೂ.5 ಲಕ್ಷಕ್ಕೆ ಏರಿಸಬೇಕೆಂದು ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಒತ್ತಾಯಿಸಿದರು. ಆಡಳಿತ ಮಂಡಳಿ, ಸಿಬ್ಬಂದಿಗಳಿಂದ ಉತ್ತಮ ಸೇವೆ ಸಿಗುತ್ತಿದೆ ಎಂದು ಗಂಗಾಧರ ಶೆಟ್ಟಿಯವರು ಶ್ಲಾಘಿಸಿದರು.
ಅನುಕಂಪದ ಆಧಾರದಲ್ಲಿ ಉದ್ಯೋಗ:
ಸಂಘದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ಸೇವಾ ಅವಧಿಯಲ್ಲಿ ಮೃತಪಟ್ಟಲ್ಲಿ ಅವರ ಕುಟುಂಬದ ಸದಸ್ಯರಿಗೆ ಅನುಕುಂಪ ಆಧಾರದಲ್ಲಿ ಉದ್ಯೋಗ ನೀಡಬೇಕು. ಈ ವಿಚಾರವನ್ನು ಬೈಲಾದಲ್ಲಿ ಸೇರಿಸಬೇಕೆಂದು ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ ಪಿ.ಹೆಗ್ಡೆ ಹೇಳಿದರು.
ಸೂಪರ್‌ಮಾರ್ಕೆಟ್ ಆರಂಭಿಸಿ:
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನೆಲ್ಯಾಡಿಯಲ್ಲಿ ಸೂಪರ್ ಮಾರ್ಕೆಟ್ ಆರಂಭಿಸಬೇಕೆಂದು ರಮೇಶ್ ಶೆಟ್ಟಿ ಬೀದಿಮನೆ ಒತ್ತಾಯಿಸಿದರು. ಬೆಳೆವಿಮೆ ಸೇರಿದಂತೆ ಇತರೇ ವಿಚಾರಗಳ ಬಗ್ಗೆ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದರು.
ಸಂಘದ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಬಾಲಕೃಷ್ಣ ಬಾಣಜಾಲು, ಸರ್ವೋತ್ತಮ ಗೌಡ, ಪ್ರಶಾಂತ ರೈ ಅರಂತಬೈಲು, ಸುದರ್ಶನ್ ಶಿರಾಡಿ, ಉಷಾ ಅಂಚನ್, ಸುಲೋಚನಾ ಡಿ., ಅಣ್ಣು ಬಿ., ಸುಮಿತ್ರಾ, ಗುರುರಾಜ ಭಟ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ವಸಂತ ಯಸ್.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಯಸ್.ಉಮೇಶ್ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ಬಾಲಕೃಷ್ಣ ಬಾಣಜಾಲು ವಂದಿಸಿದರು. ನಿರ್ದೇಶಕ ಜಯಾನಂದ ಬಂಟ್ರಿಯಾಲ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಸುಲೋಚನಾ ಡಿ. ಪ್ರಾರ್ಥಿಸಿದರು. ಸಂಘದ ಮೇನೇಜರ್‌ಗಳಾದ ಪಿ.ರತ್ನಾಕರ, ರಮೇಶ ನಾಯ್ಕ್, ಯಂ.ಟಿ.ಮಹೇಶ್, ಗುಮಾಸ್ತರಾದ ಅನಿಶ್ ಕೆ.ಜೆ., ಸಂದೀಪ್‌ಕುಮಾರ್, ಅಶೋಕ ಎಸ್., ಮುಕುಂದ ಪ್ರಸಾದ್ ಎಸ್., ರೋಶನ್‌ಕುಮಾರ್ ಬಿ.ಜೆ., ವಿಶ್ವನಾಥ ಕೆ., ಧನುಷ್ ಜೆ., ಪ್ರಜ್ಞಾ ಬಿ., ವನಿತ ಡಿ., ಜವಾನರಾದ ಪಿ.ನಾಗೇಶ, ತಾರಾನಾಥ, ಪ್ರಮೋದ್, ವಸಂತ ಕೆ., ಪಿಗ್ಮಿ ಸಂಗ್ರಾಹಕ ಕೆ.ರಘುನಾಥ ಸಹಕರಿಸಿದರು. ಮಧ್ಯಾಹ್ನ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಸ್ಮರಣಿಕೆ, ಪ್ರಮಾಣಪತ್ರ ಹಾಗೂ ನಗದು ನೀಡಿ ಗೌರವಾರ್ಪಣೆ ಮಾಡಲಾಯಿತು. ಸುಮಾರು 27 ವಿದ್ಯಾರ್ಥಿಗಳು ಗೌರವಾರ್ಪಣೆ ಪಡೆದುಕೊಂಡರು. ಸಂಘದ ನಿರ್ದೇಶಕಿ ಉಷಾ ಅಂಚನ್ ಅವರು ವಿದ್ಯಾರ್ಥಿಗಳ ಹೆಸರು ವಾಚಿಸಿದರು.
ಮಿನಿ ಎಟಿಎಂ ಉದ್ಘಾಟನೆ:
ಸಂಘದಲ್ಲಿ ಹೊಸದಾಗಿ ಆರಂಭಿಸಿದ ಮಿನಿ ಎಟಿಎಂನ ಉದ್ಘಾಟನೆಯನ್ನು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ ಅವರು ನೆರವೇರಿಸಿದರು.
ಆಮಂತ್ರಣ ಪತ್ರ ಬಿಡುಗಡೆ:
ಸಂಘದ ಶಿರಾಡಿ ಶಾಖೆಗೆ ಶಿರಾಡಿಯಲ್ಲಿ ಸ್ವಂತ ನಿವೇಶನದಲ್ಲಿ ನಿರ್ಮಾಣಗೊಂಡಿರುವ ’ಕಲ್ಪತರು ಸಹಕಾರಿ ಸೌಧ’ ಕಟ್ಟಡದ ಉದ್ಘಾಟನೆ ಅ.7ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಮಹಾಸಭೆಯಲ್ಲಿ ಬಿಡುಗಡೆಗೊಳಿಸಿ ಸದಸ್ಯರಿಗೆ ಹಂಚಲಾಯಿತು.