ಕುಂಬ್ರ ವರ್ತಕರ ಸಂಘದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಂದರ ರೈ ಮಂದಾರರಿಗೆ ಸನ್ಮಾನ

0

ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷ, ರಂಗಭೂಮಿ, ಸಿನಿಮಾ ಕಲಾವಿದ, ನಿರ್ದೇಶಕ, ನಟ ಸುಂದರ ರೈ ಮಂದಾರರವರಿಗೆ ಕುಂಬ್ರ ವರ್ತಕರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನ.10 ರಂದು ಕುಂಬ್ರ ಅಶ್ವತ್ಥ ಕಟ್ಟೆಯ ಬಳಿ ನಡೆಯಿತು. ಸುಂದರ ರೈ ಮಂದಾರ ಅವರ ಪತ್ನಿ ಮಲ್ಲಿಕಾ ರೈ ಮಂದಾರರವರಿಗೆ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು, ಕುಂಬ್ರದ ಹೆಸರನ್ನು ಹತ್ತೂರಿನಲ್ಲಿ ಪಸರಿಸಿದ ಸುಂದರ ರೈ ಮಂದಾರರವರು ಓರ್ವ ಅದ್ಭುತ ಕಲಾವಿದರಾಗಿದ್ದಾರೆ. ಒಬ್ಬ ಅರ್ಹ ವ್ಯಕ್ತಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇದು ಹುಟ್ಟೂರಿನ ಜನತೆಗೆ ಗೌರವ ತಂದುಕೊಟ್ಟಿದೆ ಈ ನಿಟ್ಟಿನಲ್ಲಿ ಅವರಿಗೆ ಹುಟ್ಟೂರಿನ ಜನರು ಸನ್ಮಾನಿಸಿ ಗೌರವಿಸಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಸಂಘದ ಗೌರವ ಸಲಹೆಗಾರ ಅರಿಯಡ್ಕ ಅಬ್ದುಲ್ ರಹೀಮಾನ ಹಾಜಿಯವರು ಮಾತನಾಡಿ, ಸಿನಿಮಾ, ರಂಗಭೂಮಿ ಕಲಾವಿದರಾಗಿರುವ ಸುಂದರ ರೈಯವರಿಗೆ ಹತ್ತೂರಿನಲ್ಲೂ ಅಭಿಮಾನಿ ಬಳಗವಿದೆ. ಇಂತಹ ಓರ್ವ ಅರ್ಹ ಕಲಾವಿದರಿಗೆ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ ಎಂದು ಹೇಳಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಪುತ್ತೂರು ಅಗ್ನಿ ಶಾಮಕ ದಳದ ಶಂಕರ್, ಲೀಲಾಧರ್ ಹಾಗೂ ಸಿಬ್ಬಂದಿಗಳು, ವರ್ತಕರ ಸಂಘದ ಉಪಾಧ್ಯಕ್ಷ ಸದಾಶಿವ ಕುಂಬ್ರ, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ದಿವಾಕರ ಶೆಟ್ಟಿ, ರೇಷ್ಮಾ ಮೆಲ್ವಿನ್, ನಿಶ್ಮಿತಾ ಕಾಂಪ್ಲೆಕ್ಸ್ ಮಾಲಕ ಪುರಂದರ ರೈ ಕೋರಿಕ್ಕಾರು ಸಹಿತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ ಸ್ವಾಗತಿಸಿ, ಕಾರ್ಯದರ್ಶಿ ಭವ್ಯ ರೈ ವಂದಿಸಿದರು.


ಶಾಸಕರಿಗೆ ಹಾಗೂ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ.
ಸನ್ಮಾನ ಸ್ವೀಕರಿಸಿದ ನಟ ಸುಂದರ ರೈ ಮಂದಾರ ಮಾತನಾಡಿ, ಕುಂಬ್ರ ಅಶ್ವತ್ಥ ಕಟ್ಟೆಯ ಅಡಿಯಲ್ಲಿ ನನಗೆ ಸಿಕ್ಕಿರುವ ಈ ಸನ್ಮಾನ ಎಲ್ಲಾ ಸನ್ಮಾನಕ್ಕಿಂತಲೂ ಹೆಚ್ಚಿನ ಗೌರವ ತಂದು ಕೊಟ್ಟಿದೆ. ಯಾವುದೇ ಅರ್ಜಿ ಹಾಕದೆ ನನಗೆ ಪ್ರಶಸ್ತಿ ಬಂದಿದೆ ನನ್ನ ಸಾಧನೆಯನ್ನು ಗುರುತಿಸಿ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಹಾಗೇ ನನ್ನ ಮೇಲೆ ಪ್ರೀತಿ ಇಟ್ಟು ನನ್ನನ್ನು ಬೆಳೆಸುತ್ತಿರುವ ಎಲ್ಲಾ ಕಲಾಭಿಮಾನಿಗಳಿಗೆ, ಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಪ್ರಶಸ್ತಿಯನ್ನು ನಾನು ಕಲಾಭಿಮಾನಿಗಳಿಗೆ ಸಮರ್ಪಿಸುತ್ತಿದ್ದೇನೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.


‘ ಸಂಘದ ಮಾಜಿ ಅಧ್ಯಕ್ಷರಾಗಿ ಬಹಳಷ್ಟು ಕೆಲಸ ಮಾಡಿದವರು ರಂಗಭೂಮಿ, ಸಿನಿಮಾ ಕಲಾವಿದರಾಗಿ ರಾಜ್ಯದಲ್ಲೇ ಹೆಸರು ಮಾಡಿದ ಸುಂದರ ರೈ ಮಂದಾರರವರಿಗೆ ಪ್ರಶಸ್ತಿ ಬಂದಿರುವುದು ಸಂಘಕ್ಕೆ ಹಾಗೂ ಊರಿಗೆ ಹೆಮ್ಮೆಯ ಸಂಗತಿ, ಈ ನಿಟ್ಟಿನಲ್ಲಿ ಅವರಿಗೆ ಸನ್ಮಾನಿಸಿದ್ದೇವೆ ಮುಂದೆ ರಾಜ್ಯ ಮಟ್ಟದ ಪ್ರಶಸ್ತಿ ದೊರೆಯಲಿ ಎಂಬುದೇ ನಮ್ಮ ಆಶಯ.’
-ಪಿ.ಕೆ ಮಹಮ್ಮದ್ ಕೂಡುರಸ್ತೆ, ಅಧ್ಯಕ್ಷರು ವರ್ತಕರ ಸಂಘದ ಕುಂಬ್ರ

LEAVE A REPLY

Please enter your comment!
Please enter your name here