ರೂ.247.75 ಕೋಟಿ ವ್ಯವಹಾರ; ರೂ.1.38 ಕೋಟಿ ಲಾಭ; ಶೇ.16 ಡಿವಿಡೆಂಡ್
ಪುತ್ತೂರು: ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ ರೂ.247.75 ಕೋಟಿ ವ್ಯವಹಾರ ಮಾಡಿ ರೂ.138.80 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.16 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಹೇಳಿದರು.
ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಸೆ.14ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಸಂಘವು ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೃಷಿಕ ಕುಟುಂಬಗಳ ಸದಸ್ಯರು ಮತ್ತು ಕೃಷಿಯೇತರ ಕುಟುಂಬದ ಸದಸ್ಯರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುತ್ತಿದ್ದು ಸದಸ್ಯರ ಹಿತ ಕಾಪಾಡುವುದು ಸಂಘದ ಮುಖ್ಯ ಧ್ಯೇಯವಾಗಿದೆ. ಬೆಳೆ ವಿಮೆ ಮಾಡಿಸುವುದರಲ್ಲಿ ನಮ್ಮ ಸಂಘ ಮೊದಲನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
ನಮ್ಮ ಸಂಘದಿಂದ ಸಾಲ ಪಡೆದ ಅದೆಷ್ಟೋ ಮಂದಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದು ಕೃಷಿ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಸಂಘವು ಈ ಮಟ್ಟದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಅದಕ್ಕೆ ಸದಸ್ಯರೇ ಮುಖ್ಯ ಕಾರಣ ಎಂದು ಸುರೇಶ್ ಕುಮಾರ್ ಸೊರಕೆ ಹೇಳಿದರು.
ಠೇವಣಿ ಇಟ್ಟವರು ಸ್ಪಂದನೆ ಮಾಡಬೇಕು:
ಸಂಘದಲ್ಲಿ ಠೇವಣಿ ಇಟ್ಟವರು ರಿನೀವಲ್ ಮಾಡಿಸಿಕೊಳ್ಳಬೇಕು, ಠೇವಣಿ ಇಟ್ಟವರು ನಿಧನ ಹೊಂದಿದರೆ ಅವರ ನಾಮಿನಿ ಸ್ಪಂದನೆ ಕೊಡಬೇಕು ಎಂದು ಹೇಳಿದ ಸುರೇಶ್ ಕುಮಾರ್ ಸೊರಕೆಯವರು ಠೇವಣಿ ಇಟ್ಟ ವ್ಯಕ್ತಿಯೊಬ್ಬರು ನಿಧನ ಹೊಂದಿದ ಬಳಿಕ ಉಂಟಾದ ಸಣ್ಣ ಸಮಸ್ಯೆಯ ಬಗ್ಗೆ ಸಭೆಗೆ ವಿವರಿಸಿದರು.
ಕಂಪೆನಿಯವರಲ್ಲಿ ಸಹಕಾರ ಪಡೆದುಕೊಳ್ಳಬೇಕು:
ಟಿ ಸ್ಟೇನ್ ಕಂಪೆನಿಯವರು ನಮ್ಮ ಸಂಘದ ಮಹಾಸಭೆಯಲ್ಲಿ ಮಾಹಿತಿ ಕೊಡ್ತಾರೆ ಮತ್ತು ಅವರ ಬ್ಯಾನರ್ ಅಳವಡಿಸುವುದರಿಂದ ಅವರಿಗೆ ಒಳ್ಳೆಯ ಪ್ರಚಾರವೂ ಸಿಗುತ್ತದೆ, ಹಾಗಾಗಿ ಅವರು ಖಾಸಗೀ ಕಂಪೆನಿ ಆದ ಕಾರಣ ಅವರಿಂದ ಸಂಘದ ಅಭಿವೃದ್ಧಿಗೆ ಪೂರಕವಾಗಿ ಆರ್ಥಿಕ ಸಹಕಾರ ಪಡೆದುಕೊಳ್ಳಬೇಕು ಎಂದು ಸದಸ್ಯ ಆನಂದ ರೈ ಸೂರಂಬೈಲು ಹೇಳಿದರು. ಸದಸ್ಯ ಬಾಲಕೃಷ್ಣ ಕಣ್ಣಾರಾಯ ಧ್ವನಿಗೂಡಿಸಿದರು. ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಉತ್ತರಿಸಿ ಟಿ ಸ್ಟೇನ್ ಕಂಪೆನಿಯವರು ನಮ್ಮ ಸಂಘದ ಜೊತೆ ನಿಕಟ ಸಂಪರ್ಕ ಹೊಂದಿದ್ದು ಒಳ್ಳೆಯ ಸಹಕಾರ ನೀಡುತ್ತಾ ಬಂದಿದ್ದಾರೆ, ನೀವು ಹೇಳಿರುವ ವಿಚಾರವನ್ನು ಮುಂದಕ್ಕೆ ಅವರ ಜೊತೆ ಮಾತನಾಡುತ್ತೇವೆ ಎಂದು ಹೇಳಿದರು.
ಎಲ್ಲರ ಸಹಕಾರವೇ ನಮ್ಮ ಯಶಸ್ಸು-ಜಯಪ್ರಕಾಶ್ ರೈ
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಸಿ ಮಾತನಾಡಿ ಸಂಘವು ವರ್ಷದಿಂದ ವರ್ಷಕ್ಕೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಸಾಲ ನೀಡುವಿಕೆ ಮತ್ತು ವಸೂಲಾತಿ ಉತ್ತಮವಾಗಿ ನಡೆಯುತ್ತಿದೆ. ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಕಾರ್ಯಕ್ಷಮತೆ ಮತ್ತು ಸಂಘದ ಸದಸ್ಯರ ಸಹಕಾರದಿಂದಾಗಿ ಸಂಘ ಯಶಸ್ಸಿನ ಪಥದಲ್ಲಿ ಮುನ್ನಡೆಯುತ್ತಿದೆ, ಇದೇ ರೀತಿಯ ಸಹಕಾರವನ್ನು ಸದಸ್ಯರು ಮುಂದಕ್ಕೂ ನೀಡಬೇಕು ಎಂದು ಅವರು ಹೇಳಿದರು. ತಾಂತ್ರಿಕ ಸಮಸ್ಯೆಯಿಂದಾಗಿ ಬೆಳೆ ಸಮೀಕ್ಷೆ ವಿಚಾರ ಅಲ್ಪ ಗೊಂದಲವಿದ್ದು ಮುಂದಕ್ಕೆ ಅದು ಸರಿಯಾಗಲಿದೆ ಎಂದು ಅವರು ಹೇಳಿದರು.
ಅಭಿವೃದ್ಧಿಯ ದಿಸೆಯಲ್ಲಿ ಸಂಘ ಸಾಗುತ್ತಿದೆ-ಯಾಕೂಬ್ ಮುಲಾರ್
ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್ ಮಾತನಾಡಿ ನಮ್ಮ ಸಂಘವು ಬೆಳೆ ವಿಮೆ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಅಭಿವೃದ್ಧಿಯ ದಿಸೆಯಲ್ಲಿ ಸಾಗುತ್ತಿದ್ದು ಇದಕ್ಕೆ ಸದಸ್ಯರ ಪೂರ್ಣ ಸಹಕಾರವೇ ಕಾರಣ. ಸದಸ್ಯರ ಅಭಿವೃದ್ಧಿಯೂ ಸಂಘದ ಗುರಿಯಾಗಿದ್ದು ಪರಸ್ಪರ ಸಹಕಾರ ತತ್ವದಡಿ ಸಾಗಿದಾಗ ಎಲ್ಲರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು. ಬೆಳೆವಿಮೆ ವಿಚಾರದಲ್ಲಿ ರೈತರ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದ ಶಾಸಕ ಅಶೋಕ್ ಕುಮಾರ್ ಅವರಿಗೆ ಅವರು ಅಭಿನಂದನೆ ಸಲ್ಲಿಸಿದರು.
ಜಿಲ್ಲೆಗೆ ಮಾದರಿ ಸಂಘ-ಶರತ್ ಡಿ
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರತಿನಿಧಿ ಶರತ್ ಡಿ ಮಾತನಾಡಿ ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಬಹಳ ಮುಖ್ಯ. ಸದಸ್ಯರು ತಾವು ಪಡೆದ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡಬೇಕು. ಸಹಕಾರ ರಂಗದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದ್ದು ಇದು ಸಂಘಕ್ಕೆ ಇನ್ನಷ್ಟು ಶಕ್ತಿ ನೀಡಲಿದೆ. ಯುವಕರು ಸಂಘದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವ ಮೂಲಕ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. ಸುರೇಶ್ ಕುಮಾರ್ ಸೊರಕೆ ನೇತೃತ್ವದ ಮುಂಡೂರು ಪ್ರಾ.ಕೃ.ಪ.ಸ.ಸಂಘವು ಜಿಲ್ಲೆಯಲ್ಲೇ ಮಾದರಿ ಸಂಘವಾಗಿ ಗುರುತಿಸಿಕೊಂಡಿದೆ ಎಂದು ಅವರು ಶ್ಲಾಘಿಸಿದರು.
ಸಂಘದ ನಿರ್ದೇಶಕರಾದ ವಸಂತ ಎಸ್.ಡಿ, ಸುಧೀರ್‌ಕೃಷ್ಣ ಎಂ ಪಡ್ಡಿಲ್ಲಾಯ, ವಸಂತ ಬಿ.ಎನ್, ಪದ್ಮಯ್ಯ ಪಿ ಬಂಡಿಕಾನ, ಆನಂದ ಪೂಜಾರಿ ಕೆ, ಮೋಹಿನಿ ಪಜಿಮಣ್ಣು, ಗುಲಾಬಿ ಯನ್ ಶೆಟ್ಟಿ ಕಂಪ, ಆನಂದ ಪೂಜಾರಿ ಕೆ, ಕೊರಗಪ್ಪ ಸೊರಕೆ, ಶರಣ್ ರೈ ಎಂ ಉಪಸ್ಥಿತರಿದ್ದರು.
ಸಭೆಯಲ್ಲಿ ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಹಾಗೂ ಗ್ರಾ.ಪಂ ಸದಸ್ಯರು, ಸಂಘದ ಸದಸ್ಯರು ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ಗತ ವರ್ಷದಲ್ಲಿ ನಿಧನ ಹೊಂದಿದ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆ ನಡೆಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಸಿ ಸಭಾ ಕಾರ್ಯಕಲಾಪದ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸಂಘದ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ಸ್ವಾಗತಿಸಿದರು. ಉಪಾಧ್ಯಕ್ಷ ಯಾಕೂಬ್ ಮುಲಾರ್ ವಂದಿಸಿದರು. ಸಿಬ್ಬಂದಿಗಳಾದ ವತ್ಸಲಾ ಎಸ್, ಗಣೇಶ್ ಪಜಿಮಣ್ಣು, ರಿತೇಶ್ ರೈ, ಲಿಂಗಪ್ಪ ನಾಯ್ಕ, ಮೋಹನ ನಾಯ್ಕ ಪಿ, ಗಣೇಶ್ ಪಿ ಸಾಲ್ಯಾನ್ ಸಹಕರಿಸಿದರು.