ಭಜರಂಗದಳ-ವಿಎಚ್.ಪಿ ಯಿಂದ ಬಿ‌.ಸಿ.ರೋಡ್ ಚಲೋ ಕರೆ ಹಿನ್ನಲೆ – ಸ್ಥಳದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಜಮಾವಣೆ

0

ಪ್ರಕ್ಷುಬ್ದ ಪರಿಸ್ಥಿತಿ – ಉನ್ನತ ಪೊಲೀಸ್ ಅಧಿಕಾರಿಗಳ ಮೊಕ್ಕಂ

ವಿಟ್ಲ: ಭಜರಂಗದಳ-ವಿಎಚ್.ಪಿ ಯಿಂದ ಬಿ‌.ಸಿ.ರೋಡ್ ಚಲೋ ಕರೆ ಹಿನ್ನಲೆಯಲ್ಲಿ ಬಿಸಿರೋಡಿನ ರಕ್ತೇಶ್ವರಿ ದೇವಸ್ಥಾನದ ಮುಂಭಾಗಕ್ಕೆ ಕಾರ್ಯಕರ್ತರ ಜೈಕಾರ ಘೋಷಣೆಯ ನಡುವೆ ಬಂದಿಳಿದ ಹಿಂದೂ ನಾಯಕ, ವಿಶ್ವಹಿಂದೂ ಪರಿಷತ್ ಪ್ರಾಂತ ಸಹಕಾರ್ಯವಾಹ ಶರಣ್ ಪಂಪ್ ವೆಲ್ ಜೈಕಾರ ಘೋಷಣೆ ಕೂಗಿದ ಕಾರ್ಯಕರ್ತರು ಪೋಲೀಸರ ತಡೆಯನ್ನು ಲೆಕ್ಕಿಸದೆ ಮುಂದೆ ಸಾಗಿದರು. ಈ ವೇಳೆ ಪೋಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆಯಿತು. ಪರಿಸ್ಥಿತಿ ಕೈ ಮೀರಿಹೋಗುವ ಹಂತಕ್ಕೆ ತಲುಪಿದಾಗ ಪೋಲೀಸರು ಬಸ್ ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಕಾರ್ಯಕರ್ತರಿಗೆ ತಡೆಯೊಡ್ಡಿದರು. ಬಳಿಕ ಹೆದ್ದಾರಿಯಲ್ಲಿ ಕೆಲಹೊತ್ತು ಕಾರ್ಯಕರ್ತರು ಘೋಷಣೆ ಕೂಗಿದರು. ಶರಣ್ ಪಂಪ್ ವೆಲ್ಅವರಿಗೆ ಸವಾಲು ಹಾಕಿರುವ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ವಿರುದ್ದ ಘೋಷಣೆ ಕೂಗಿದರು.


ಬಳಿಕ ವಿಶ್ವಹಿಂದೂ ಪರಿಷತ್ ಪ್ರಾಂತ ಸಹಕಾರ್ಯವಾಹ ಶರಣ್ ಪಂಪ್ ವೆಲ್ ರವರು ಮಾತನಾಡಿ, ಬಿಸಿರೋಡಿನ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ಸವಾಲು ಸ್ವೀಕರಿಸಿ ಬಿಸಿರೋಡಿಗೆ ಬಂದಿದ್ದೇನೆ. ಇನ್ನೂ ಮುಂದೆಯೂ ಇಂತಹ ಸವಾಲು ಸ್ವೀಕರಿಸಲು ತಯಾರಾಗಿದ್ದೇವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಮೂಲಕ ಹಿಂದುತ್ವಕ್ಕೆ ಜಯಸಿಕ್ಕಿದೆ. ಇಂತಹ ಸವಾಲುಗಳು ಹಿಂದೂ ಕಾರ್ಯಕರ್ತರಿಗೆ ಇದೇ ಮೊದಲಲ್ಲ,ಸಾಕಷ್ಟು ಕಾರ್ಯಕರ್ತರು ಪ್ರಾಣವನ್ನು ಕೊಟ್ಟಿದ್ದಾರೆ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಜೈಲಿಗೂ ಹೋಗಿದ್ದಾರೆ. ನಾಗಮಂಗಲದ ಗಣೇಶ ಚತುರ್ಥಿಯ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಹಿಂಸೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಹೇಳಿಕೆಯನ್ನು ಕೊಟ್ಟಿದ್ದೇವೆ. ಆದರೆ ಆತ ಅದಕ್ಕೆ ಬಿಸಿರೋಡಿಗೆ ಆಗಮಿಸುವಂತೆ ಸವಾಲು ಹಾಕಿದ್ದ. ಆತನ ಸವಾಲಿಗೆ ಉತ್ತರವಾಗಿ ನಾವು ಇಂದು ಬಿಸಿರೋಡಿನಲ್ಲಿ ಸೇರಿದ್ದೇವೆ. ಮುಂದೆ ಅವಶ್ಯಕತೆ ಬಿದ್ದರೆ ಆತ ಹೇಳಿದಂತೆ ಮಸೀದಿಗೆ ಹೋಗುವುದಕ್ಕೂ ಸಿದ್ದರಿದ್ದೇವೆ. ಇದು ಶರಣ್ ಒಬ್ಬನಿಗೆ ಹಾಕಿದ ಸಾವಲು ಅಲ್ಲ‌ ಇಡೀ ಹಿಂದೂ ಕಾರ್ಯಕರ್ತರಿಗೆ ಹಾಕಿದ ಸವಾಲು ಎಂದು ಅವರು ತಿಳಿಸಿದರು.


ಸವಾಲಿಗೆ ಪ್ರತಿ ಸವಾಲು ಹಾಕಿದ್ದ ಹಿಂದೂ ಸಂಘಟನೆಯ ಪ್ರಮುಖ ಪುನೀತ್ ಅತ್ತಾವರ ಕೂಡ ಬಿಸಿರೋಡಿನ ಚಲೋ ಕಾರ್ಯಕ್ರಮದಲ್ಲಿ ಶರಣ್ ಪಂಪ್ ವೆಲ್ ಜೊತೆ ಆಗಮಿಸಿದ್ದರು.

ಐಜಿಪಿ ಅಮಿತ್ ಸಿಂಗ್,ಎಸ್.ಪಿ.ಯತೀಶ್ ಎನ್ .ಎ.ಸಿ.ಹರ್ಷವರ್ದನ್,ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಬಿ.ಸಿ.ರೋಡ್ ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.
ಹಿಂದೂ ಸಂಘಟನೆಯ ಪ್ರಮುಖರಾದ ಪ್ರಸಾದ್ ಕುಮಾರ್ ರೈ ಬಂಟ್ವಾಳ, ಭಾಸ್ಕರ್ ಧರ್ಮಸ್ಥಳ, ನವೀನ್ ನೆರಿಯಾ,ಭುಜಂಗ ಕುಲಾಲ್, ಗುರುರಾಜ್ ಬಂಟ್ವಾಳ, ನರಸಿಂಹ ಮಹೇಶ್ ಬೈಲೂರು, ಕೃಷ್ಣಪ್ರಸಾದ್, ಮಿಥುನ್ ಕಲ್ಲಡ್ಜ,ನವೀನ್ ಮೂಡುಶೆಡ್ಡೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here