ಉಪ್ಪಿನಂಗಡಿಯ ಸ.ಪ್ರ.ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ

0

ಸೇವಾ ಮನೋಭಾವನೆ ಬೆಳೆಸಿಕೊಳ್ಳಿ: ಡಾ. ಅರುಣ್ ಪ್ರಕಾಶ್
ಉಪ್ಪಿನಂಗಡಿ: ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಯುವಜನತೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ಔದ್ಯೋಗಿಕ ಬದುಕಿನಲ್ಲಿ ಸಮಾಜಮುಖಿ ನಿರ್ಧಾರಗಳನ್ನು ತೆಗೆದುಕೊಂಡು ಪರಿಸರಪರ ಜೀವನ ಸಾಗಿಸಬೇಕು ಎಂದು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿ ಡಾ. ಅರುಣ್ ಪ್ರಕಾಶ್ ಹೇಳಿದರು.


ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೌಲ್ಯಯುತ ಜೀವನವನ್ನು ಸಾಗಿಸಲು ಎನ್.ಎಸ್.ಎಸ್. ಸಹಕಾರಿಯಾಗುತ್ತದೆ. ಸ್ವ ಅರಿವು ಪಡೆಯುವುದರ ಜೊತೆಗೆ ಇತರರಲ್ಲಿ ಅರಿವು ಮೂಡಿಸುವ ಕೆಲಸವನ್ನು ಎನ್.ಎಸ್.ಎಸ್. ಸ್ವಯಂಸೇವಕರು ಮಾಡಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಶೇಖರ ಎಂ.ಬಿ., ವಿದ್ಯಾರ್ಥಿಗಳು ತಾವು ವಾಸಿಸುವ ಪರಿಸರವನ್ನು ಶುಚಿಯಾಗಿಟ್ಟುಕೊಂಡು ಆರೋಗ್ಯಪೂರ್ಣ ವಾತಾವರಣವನ್ನು ನಿರ್ಮಿಸಬೇಕು ಎಂದು ಹೇಳಿದರು. ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿ ಡಾ. ಹರಿಪ್ರಸಾದ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಶ್ರಮದಾನದ ಜೊತೆ ಜೊತೆಗೆ ಸ್ವಯಂಸೇವಕರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ಎನ್.ಎಸ್.ಎಸ್. ಘಟಕಗಳು ಆಯೋಜಿಸುತ್ತಿದ್ದು, ಸ್ವಯಂಸೇವಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.


ನೂತನವಾಗಿ ಆಯ್ಕೆಗೊಂಡ ಎನ್.ಎಸ್.ಎಸ್. ಘಟಕ ನಾಯಕರಾದ ಲಾವಣ್ಯ, ಮನೀಶ್ ಯು., ದೀಕ್ಷಾ ಎನ್. ಎಸ್., ಪ್ರಸನ್ನ ಅವರಿಗೆ ಹಾಗೂ ಎನ್.ಎಸ್.ಎಸ್. ನ ವಿವಿಧ ಸಮಿತಿಗಳ ಸದಸ್ಯರುಗಳಿಗೆ ಜವಾಬ್ದಾರಿ ಹಸ್ತಾಂತರಿಸುವ ಕಾರ್ಯಕ್ರಮವನ್ನು ಎನ್.ಎಸ್.ಎಸ್. ಅಧಿಕಾರಿ ಕೇಶವ ಕುಮಾರ್ ಬಿ. ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕ ಬಾಲಾಜಿ ಎಂ.ಪಿ., ಕನ್ನಡ ವಿಭಾಗದ ಮುಖ್ಯಸ್ಥ ಹುಚ್ಚೇಗೌಡ ಉಪಸ್ಥಿತರಿದ್ದರು.
ಸ್ವಯಂಸೇವಕರಾದ ಹರ್ಷಿತಾ ಸ್ವಾಗತಿಸಿದರು, ಅನುಷಾ ವಂದಿಸಿದರು. ಅಂಜಲಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here