ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ವಿಶ್ವಕರ್ಮ ಜಯಂತಿ ದಿನಾಚರಣೆ

0

ವಿಶ್ವಕರ್ಮ ಸಮಾಜದ ಕುಲಕಸುಬುಗಳ ಅಭಿವೃದ್ಧಿಗೆ ಅಧ್ಯಯನ ಕೇಂದ್ರ ಪ್ರಾರಂಭಿಸಬೇಕು, ಒಳ ಮೀಸಲಾತಿ ಒದಗಿಸಬೇಕು-ರಾಜೇಶ್

ಪುತ್ತೂರು: ಪಂಚ ಕುಲಕಸುಬುಗಳನ್ನು ನಿರ್ವಹಿಸುವ ವಿಶ್ವಕರ್ಮ ಸಮಾಜದ ಕುಲ ಕಸುಬುಗಳ ಅಭಿವೃದ್ಧಿಗೆ ಪೂರಕವಾಗಿ ಅಧ್ಯಯನ ಕೇಂದ್ರ ಪ್ರಾರಂಭಿಸಬೇಕು. ವಿಶ್ವಕರ್ಮ ಸಮಾಜಕ್ಕೆ ಒಳ ಮೀಸಲಾತಿ ಒದಗಿಸಬೇಕು. ವಿಶ್ವಕರ್ಮ ಜಯಂತಿ ಆಚರಣೆಯ ಮೂಲಕ ಸಮಾಜವನ್ನು ಮೇಲಕ್ಕೆತ್ತುವ ಕಾರ್ಯಕ್ರಮವಾಗಬೇಕು ಎಂದು ಗುರುವಾಯಮಕೆರೆ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ರಾಜೇಶ್ ಹೇಳಿದರು.


ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸೆ.17ರಂದು ತಾಲೂಕು ಆಡಳಿತ ಸೌಧದಲ್ಲಿ ನಡೆದ ವಿಶ್ವಕರ್ಮ ಜಯಂತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ವಿಶ್ವಕರ್ಮ ಸಮಾಜವು ಜಗತ್ತಿಗೆ ಅನನ್ಯ ಕೊಡುಗೆ ನೀಡಿದ ಸಮಾಜ. ದೇಶದ ಬೆನ್ನೆಲುಬಾಗಿರುವ ರೈತರಿಗೆ ಕೃಷಿಕ ಪೂರಕವಾದ ಸಾಮಾಗ್ರಿಗಳನ್ನು ಒದಗಿಸುವ ವಿಶ್ವಕರ್ಮ ಸಮಾಜ ರೈತರ ಬೆನ್ನೆಲುಬು ಆಗಿದ್ದಾರೆ. ಪಂಚಕುಲಕಸುಬಗಳನ್ನು ನಿರ್ವಹಿಸಲು ಯುವ ಸಮಾಜ ಮುಂದೆ ಬರುತ್ತಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆಗಳನ್ನು ಹಿನ್ನಡೆಯಾಗುತ್ತಿದೆ. ಉತ್ತಮ ಶಿಕ್ಷಣ ದೊರೆಯುತ್ತಿದ್ದರೆ ಕುಲಕಸುಬುಗಳು ಇಂದಿಗೂ ಉಳಿಯುತ್ತಿತ್ತು. ಕುಲ ಕಸುಬು ನಶಿಸಿದರೆ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಲಿದ್ದು, ಕುಲ ಕಸುಬುಗಳಿಗೆ ಪೂರಕವಾದ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು. ಕುಶಲ ಕರ್ಮಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು. ಸರಕಾರದ ಯೋಜನೆಗಳನ್ನು ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿ ನೇರವಾಗಿ ತಳಮಟ್ಟದ ಫಲಾನುಭವಿಗಳಿಗೆ ತಲುಪಿಸಬೇಕು. ವಿಶ್ವಕರ್ಮ ಸಮಾಜವನ್ನು ವಿಶ್ವಾಸಕ್ಕೆ ಪಡೆದುಕೊಂಡು ಯೋಜನೆಗಳನ್ನು ರೂಪಿಸಬೇಕು. ಯಂತ್ರೋಪಕರಣಗಳ ಖರೀದಿಗೆ ಸಹಕಾರ ನೀಡಬೇಕು. ಇದಕ್ಕಾಗಿ ಕಾರ್ಯಾಗಾರಗಳನ್ನು ನಡೆಸಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಪುರಂದರ ಮಾತನಾಡಿ, ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಹಲವು ಯೋಜನೆಗಳನ್ನು ಜಾರಿ ತಂದಿದೆ. ನಿಗಮ ಮಂಡಳಿ, ಸಹಾಯಧನದಲ್ಲಿ ಸಾಲ ಸೌಲಭ್ಯ, ವಿದ್ಯಾರ್ಥಿ ವೇತನ, ಮನೆಗಳನ್ನು ನೀಡುವ ಮುಖಾಂತರ ವಿಶ್ವಕರ್ಮ ಸಮಾಜವನ್ನು ಗುರುತಿಸಿದೆ. ಸರಕಾರ ಇನ್ನಷ್ಟು ಯೋಜನೆಗಳನ್ನು ಜಾರಿ ಮಾಡಲಿ, ಅದು ಕಟ್ಟ ಕಡೆಯ ವ್ಯಕ್ತಿಗೂ ತಲುಪುವ ಮೂಲಕ ಯೋಜನೆಗಳು ಫಲಪ್ರದವಾಗಲಿ ಎಂದರು.


ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಕೊಕ್ಕಡ, ನಗರ ಸಭಾ ಸದಸ್ಯೆ ಇಂದಿರಾ ಪುರುಷೋತ್ತಮ ಆಚಾರ್ಯ, ಪೌರಾಯುಕ್ತ ಮಧು ಎಸ್ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಅಕ್ಷರದಾಸೋಹದ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್ ಸಿ., ತಾ.ಪಂ ಸಹಾಯಕ ನಿರ್ದೇಶಕಿ ಶೈಲಜಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಲ ಕಾಳೆ, ವಲಯಾರಣ್ಯಾಧಿಕಾರಿ ಕಿರಣ್ ಬಿ.ಎಂ., ವಿಶ್ವಕರ್ಮ ಸಮಾಜದ ಪ್ರಮುಖರಾದ ಭೋಜರಾಜ ಆಚಾರ್ಯ, ಸುರೇಶ್, ನಲ್ಕ ಗೋಪಾಲಕೃಷ್ಣ ಆಚಾರ್ಯ ಸೇರಿದಂತೆ ಹಲವು ಮಂದಿ ಪ್ರಮುಖರು ಹಾಗೂ ವಿವಿಧ ಇಲಾಖಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಲೂಕು ಕಚೇರಿಯ ಚೈತ್ರಾ ಪ್ರಾರ್ಥಿಸಿದರು. ದಯಾನಂದ ಸ್ವಾಗತಿಸಿ, ವಂದಿಸಿದರು. ಗ್ರಾಮ ಆಡಳಿತಾಧಿಕಾರಿ ಶರಣ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here