ಪುತ್ತೂರು: ಸೆ.10 ರಂದು ವಿಟ್ಲ ಸಾಲೆತ್ತೂರು ರಸ್ತೆಯ ಕೊಳ್ನಾಡು ಬಳಿ ಸ್ಕೂಟರ್ ಸ್ಕಿಡ್ ಆಗಿ ಗಂಭೀರ ಗಯಗೊಂಡು ಮಂಗಳೂರಿನ ದೇರಳಕಟ್ಟೆಯ ಕೆಎಸ್ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದ ಕೋಡಿಂಬಾಡಿಯ ಸುಂದರಿ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸೆ.16 ರಂದು ಮೃತಪಟ್ಟಿದ್ದರು.
ಆಸ್ಪತ್ರೆಯಲ್ಲಿ ಮೃತಪಟ್ಟ ಕಾರಣ ಆಸ್ಪತ್ರೆಯಿಂದ ಮೃತದೇಹವನ್ನು ತರುವಲ್ಲಿ ಸುಂದರಿಯವರ ಕುಟುಂಬಕ್ಕೆ ಯಾರೂ ನೆರವು ನೀಡಿರಲಿಲ್ಲ. ಈ ವಿಚಾರ ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಅವರಿಗೆ ತಡವಾಗಿ ಗೊತ್ತಾಗಿದೆ. ವಿಷಯ ಗೊತ್ತಾಗಿ ಸುಂದರಿಯವರ ಮನೆಗೆ ತೆರಳಿದ ಉಪಾಧ್ಯಕ್ಷರು, ಮೃತದೇಹ ಮನೆಗೆ ತರುವಲ್ಲಿ ಆಗಿರುವ ಲೋಪವನ್ನು ತಿಳಿದುಕೊಂಡಿದ್ದಾರೆ. ತಕ್ಷಣ ದೇರಳಕಟ್ಟೆಯ ಆಸ್ಪತ್ರೆಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅಪಘಾತದಿಂದ ಮಹಿಳೆ ಮೃತಪಟ್ಟಿರುವ ಕಾರಣ ಆಸ್ಪತ್ರೆಯಿಂದ ಮೃತದೇಹವನ್ನು ತರಬೇಕಾದಲ್ಲಿ ಪೊಲೀಸ್ ಎಫ್ಐಆರ್ ದಾಖಲಾಗಬೇಕು, ಪೊಲೀಸರು ಮಹಜರು ನಡೆಸಬೇಕಿತ್ತು. ಇದರ ಬಗ್ಗೆ ಏನೂ ಮಾಹಿತಿ ಇಲ್ಲದ ಸುಂದರಿ ಮನೆಯವರು ದಿಕ್ಕೇ ತೋಚದಂತಾಗಿದ್ದರು. ಇದನ್ನರಿತ ಜಯಪ್ರಕಾಶ್ ಬದಿನಾರ್ ರವರು ವಿಟ್ಲ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ತನ್ನ ಹೆಸರಲ್ಲೇ ದೂರೊಂದನ್ನು ದಾಖಲಿಸುತ್ತಾರೆ. ಬಳಿಕ ರಾತ್ರಿ ವೇಳೆಯೇ ಪೊಲೀಸರನ್ನು ಕರೆದುಕೊಂಡು ಮಂಗಳೂರಿಗೆ ತೆರಳಿ ಮಹಜರು ನಡೆಸುತ್ತಾರೆ. ಮೃತದೇಹವನ್ನು ಆಸ್ಪತ್ರೆಯವರು ಬಿಟ್ಟುಕೊಡುವಲ್ಲಿ ಏನೆಲ್ಲಾ ಕಾನೂನು ಪ್ರಕ್ರಿಯೆಗಳು ಅಗತ್ಯವಿತ್ತೋ ಅದೆಲ್ಲವನ್ನೂ ಮನೆ ಮಗನಂತೆ ಮಾಡಿ ಮುಗಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಗ್ರಾಪಂ ಉಪಾಧ್ಯಕ್ಷರ ಈ ಮಾನವೀಯ ಸೇವೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಸಂಕಷ್ಟಕ್ಕೆ ಸಿಲುಕಿದ್ದ ಬಡ ಕುಟುಂಬವೊಂದಕ್ಕೆ ಮನೆ ಮಗನಂತೆ ನಿಂತು ನೆರವು ನೀಡುವ ಮೂಲಕ ಮೃತರ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.