ರಾಮಕುಂಜ: ತಾಲೂಕು ಮಟ್ಟದ ಯುವ ಸಂಸತ್ತು ಸ್ಪರ್ಧೆ

0

ರಾಮಕುಂಜ: ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು, ತಾಲೂಕು ಪಂಚಾಯತ್ ಪುತ್ತೂರು ಹಾಗೂ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ರಾಮಕುಂಜ ಇವರ ಆಶ್ರಯದಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು ಸ್ಪರ್ಧೆ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸೆ.17ರಂದು ನಡೆಯಿತು.


ಭಾರತ ಸರ್ಕಾರದ ಲೋಕಸಭೆಯ ಕನ್ಸಲ್ಟೆಂಟ್ ಇಂಟಪ್ರೆಟರ್, ವಿಶ್ರಾಂತ ಪ್ರಾಂಶುಪಾಲ ಡಾ.ಎನ್.ಎಸ್.ಗೋವಿಂದ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ, ಸರಕಾರದ ವ್ಯವಸ್ಥೆ ಹಾಗೂ ಲೋಕಸಭೆಯ ಅಧಿವೇಶನದ ಚಿತ್ರಣವನ್ನು ಮೂಡಿಸಿದರು. ಅಧ್ಯಕ್ಷತೆ ವಹಿಸಿದ್ದ ರಾಮಕುಂಜ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಶಾಂತ್ ಆರ್.ಕೆ. ಶುಭಹಾರೈಸಿದರು. ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರೂ, ನೋಡಲ್ ಅಧಿಕಾರಿಯೂ ಆದ ಹರಿಪ್ರಸಾದ್, ಜಿಲ್ಲಾ ಪ್ರಶಸ್ತಿ ಪುರಸ್ಕೃತರೂ, ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಲಲಿತಾ, ಸ್ಪರ್ಧೆಯ ತೀರ್ಪುಗಾರರಾದ ಗುಡ್ಡಪ್ಪ ಬಲ್ಯ, ವಿಜಯಕುಮಾರ್, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ., ಶಾಲಾ ಮುಖ್ಯಗುರು ಸತೀಶ್ ಭಟ್, ಶಾಲಾ ನೋಡಲ್ ಅಧಿಕಾರಿ, ಶಿಕ್ಷಕ ದಿನೇಶ್ ಬಿ., ಉಪಸ್ಥಿತರಿದ್ದರು. ಅತಿಥಿಗಳನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.


ಶಾಲಾ ಮುಖ್ಯಗುರು ಸತೀಶ್ ಭಟ್ ಸ್ವಾಗತಿಸಿದರು. ಶಿಕ್ಷಕ ದಿನೇಶ್ ಬಿ. ವಂದಿಸಿದರು. ಶಿಕ್ಷಕ ಪ್ರವೀಣ್ ಕುಮಾರ್ ನಿರೂಪಿಸಿದರು. ವಿದ್ಯಾರ್ಥಿ ಯಕ್ಷಿತ್ ಪ್ರಾರ್ಥಿಸಿದರು.


ಸಮಾರೋಪ ಸಮಾರಂಭ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯ ತೀರ್ಪುಗಾರರಾದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಗುಡ್ಡಪ್ಪ ಬಲ್ಯರವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು. ತೀರ್ಪುಗಾರರಾದ ವಿಜಯಕುಮಾರ್, ಲಲಿತಾ, ಶಾಲಾ ಮುಖ್ಯಗುರು ಸತೀಶ್ ಭಟ್, ಹಿರಿಯ ವಿದ್ಯಾರ್ಥಿ ಪ್ರಜ್ವಲ್‌ಕೃಷ್ಣ ಉಪಸ್ಥಿತರಿದ್ದರು. ಶಾಲಾ ನೋಡಲ್ ಅಧಿಕಾರಿ, ಶಿಕ್ಷಕ ದಿನೇಶ್ ಬಿ.ನಿರೂಪಿಸಿದರು. ಶಿಕ್ಷಕಿ ನಿಶ್ಚಿತ ಎಸ್.ಜಿ ವಂದಿಸಿದರು.

ಐವರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ:
ತಾಲೂಕು ಮಟ್ಟದ ಯುವಸಂಸತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪೈಕಿ ತಾಲೂಕಿನ ವಿವಿಧ ಶಾಲೆಗಳ ಐವರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಪ್ಪಿನಂಗಡಿ ಸರಕಾರಿ ಪ.ಪೂ.ಕಾಲೇಜಿನ ಸಮೀಕ್ಷಾ, ಕಾಂಚನ ಕೆವಿಎಸ್‌ಎಂ ಪ್ರೌಢಶಾಲೆಯ ರೂಪಶ್ರೀ ಬಿ., ಹಿರೆಬಂಡಾಡಿ ಸರ್ಕಾರಿ ಪ್ರೌಢಶಾಲೆಯ ಸಾಜಿದ, ಶ್ರೀ ರಾಮಕುಂಜೇಶ್ವರ ಕ.ಮಾ.ಪ್ರೌಢಶಾಲೆಯ ಪ್ರಣಮ್ಯ ಎಚ್.ಕೆ., ಹಾಗೂ ಕೆಯ್ಯೂರು ಕೆಪಿಎಸ್‌ನ ಆಸ್ಮಿತಾ ಎಸ್., ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here