ಸೆ.25ರೊಳಗೆ ಪ್ರಶಸ್ತಿಗೆ ಅರ್ಹರ ಆಯ್ಕೆ-ಜುಬಿನ್ ಮೊಹಾಪಾತ್ರ
ಪುತ್ತೂರು:ಪರ್ಲಡ್ಕದ ಬಾಲವನದಲ್ಲಿ ಅ.10ರಂದು ನಡೆಯುವ ಡಾ|ಶಿವರಾಮ ಕಾರಂತರ 123ನೇ ಜನ್ಮದಿನೋತ್ಸವ ಮತ್ತು ಕಾರಂತ ಪ್ರಶಸ್ತಿಗೆ ಆಯ್ಕೆ ಕುರಿತು ಸೆ.18ರಂದು ಪುತ್ತೂರು ತಾಲೂಕು ಆಡಳಿತ ಸೌಧದ ಸಹಾಯಕ ಕಮಿಷನರ್ ಕಚೇರಿ ಹಾಲ್‌ನಲ್ಲಿ ಪೂರ್ವಭಾವಿ ಸಭೆ ನಡೆಯಿತು.ಡಾ|ಶಿವರಾಮ ಕಾರಂತ ಬಾಲವನದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅಧ್ಯಕ್ಷತೆ ವಹಿಸಿದ್ದರು.
ಡಾ|ಶಿವರಾಮ ಕಾರಂತರ ಜನ್ಮದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಅವರು ಪೂರ್ವ ಭಾವಿ ಸಭೆಗೆ ಆಗಮಿಸಿದ ಸದಸ್ಯರಿಂದ ಸಹಾಯಕ ಆಯುಕ್ತರು ಸಲಹೆಯನ್ನು ಪಡೆದುಕೊಂಡರು.ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು, ಅ.10ಕ್ಕೆ ಬೆಳಿಗ್ಗೆ ಗಂಟೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ಕೊಂಬೆಟ್ಟು ಇಲ್ಲಿನ ವಿದ್ಯಾರ್ಥಿಗಳಿಂದ ಕಾರಂತ ನಮನ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.ಗಂಟೆ.10.15 ರಿಂದ ಡಾ| ಶಿವರಾಮ ಕಾರಂತರ ಜನ್ಮದಿನಾಚರಣೆ ಸಭಾ ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.ಆಯ್ಕೆ ಸಮಿತಿ ರಚನೆ ಬಳಿಕ ಪ್ರಶಸ್ತಿಗೆ ಅರ್ಹರ ಆಯ್ಕೆ ನಡೆಯಲಿದೆ.ಪೂರ್ವಭಾವಿ ಸಭೆಯಲ್ಲಿ ಬೇರೆ ಬೇರೆ ಹೆಸರುಗಳನ್ನು ಸೂಚಿಸಲಾಗಿದೆ.
ಸೆ.21ರೊಳಗೆ ಶಾಸಕರೊಂದಿಗೆ ಚರ್ಚಿಸಿ ಆಯ್ಕೆ ಸಮಿತಿ ನೇಮಕವಾಗಲಿದೆ.ಬಳಿಕ ಆಯ್ಕೆ ಸಮಿತಿಯವರು ಸೆ.25ರೊಳಗೆ ಪ್ರಶಸ್ತಿಗೆ ಅರ್ಹರ ಹೆಸರನ್ನು ಸೂಚಿಸುತ್ತಾರೆ.ಅಂತಿಮವಾಗಿ ಪ್ರಶಸ್ತಿಗೆ ಆಯ್ಕೆಯಾದವರ ಹೆಸರನ್ನು ಮಾಧ್ಯಮದ ಮೂಲಕ ಪ್ರಚಾರ ಮಾಡಲಿದ್ದೇವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಾರಂತರ ಜೀವನ ಮತ್ತು ಅವರ ಚಿಂತನೆಯ ಕುರಿತು ಉಪನ್ಯಾಸ ನಡೆಯಲಿದೆ.ಮಧ್ಯಾಹ್ನ ಮಂಗಳೂರಿನ ವಯಲಿನ್ ವಾದಕ ವಿಶ್ವಾಸ್ ಕೃಷ್ಣ ಅವರ ನೇತೃತ್ವದಲ್ಲಿ ಸುಮಾರು 30 ಮಕ್ಕಳಿಂದ ವಯೋಲಿನ್ ಕಾರ್ಯಕ್ರಮ ನಡೆಯಲಿದೆ.ಬಳಿಕ ಯಕ್ಷಬಳಗ ಬಾಲವನ ಪುತ್ತೂರು ಇವರಿಂದ ಯಕ್ಷಗಾನ ಪ್ರಸಂಗ ನಡೆಯಲಿದೆ ಎಂದವರು ತಿಳಿಸಿದರು.
ಈ ನಡುವೆ ವಿಶೇಷ ಅತಿಥಿಗಳನ್ನು ಬರಮಾಡಿಕೊಂಡು ಅವರಿಂದ ಮಕ್ಕಳಿಗೆ ಪ್ರಯೋಜನವಾಗುವ ಸಂವಾದ ಕಾರ್ಯಕ್ರಮ ಏರ್ಪಡಿಸುವ ಚಿಂತನೆ ಕುರಿತು ಸಭೆಯಲ್ಲಿ ಸದಸ್ಯರು ಮತ್ತು ಪತ್ರಕರ್ತರಿಂದ ಸಲಹೆ ಪಡೆಯಲಾಯಿತು.ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರಂತರ ಕುರಿತು ವಿಶೇಷವಾಗಿ ಮಾತನಾಡಲು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ|ಮಾಧವ ಭಟ್ ಅವರನ್ನು ಸಭೆಯಲ್ಲಿ ಸೂಚಿಸಲಾಯಿತು.
ಆಯ್ಕೆ ಸಮಿತಿಗೆ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಕೋಶಾಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಮತ್ತು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ಅವರನ್ನು ಸೇರಿಸುವಂತೆಯೂ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್, ಹಿರಿಯ ಸಾಹಿತಿ ಪ್ರೊ|ವಿ.ಬಿ.ಅರ್ತಿಕಜೆ, ರಂಗಕರ್ಮಿ ಐ.ಕೆ.ಬೊಳುವಾರು, ಡಾ|ವರದರಾಜ ಚಂದ್ರಗಿರಿ, ಡಾ|ಮಾಧವ ಭಟ್, ನಗರಸಭಾ ಸದಸ್ಯೆ ವಿದ್ಯಾ ಗೌರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ಡಿವೈಎಸ್ಪಿ ಅರುಣ್ ನಾಗೇಗೌಡ, ತಹಸೀಲ್ದಾರ್ ಪುರಂದರ ಹೆಗ್ಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಕೋಶಾಧ್ಯಕ್ಷ ಬಿ.ಐತ್ತಪ್ಪ ನಾಯ್ಕ್, ವಿಜಯಕುಮಾರ್ ಮೊಳೆಯಾರ್, ತಾ.ಪಂ ವಿಷಯ ನಿರ್ವಾಹಕ ಜಯಪ್ರಕಾಶ್, ಪ್ರೊ|ದತ್ತಾತ್ರೆಯ ರಾವ್, ಡಾ|ನರೇಂದ್ರ ರೈ ದೇರ್ಲ, ಪ್ರಭಾರ ಸಿಡಿಪಿಒ ಮಂಗಳ ಕಾಲೆ, ಅಗ್ನಿಶಾಮಕ ದಳದ ಠಾಣಾಧಿಕಾರಿ, ನಗರಸಭೆ ಸಮುದಾಯ ಅಭಿವೃದ್ದಿ ಅಧಿಕಾರಿ ಕರುಣಾಕರ ವಿ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಕನಿಷ್ಕ, ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜಾನ್ಸನ್ ಡಿ’ಸೋಜ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಕೊಂಬೆಟ್ಟು ಶಾಲೆಯ ಚಿತ್ರಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ, ಬಾಲವನದ ಆಶೋಕ್ ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಶಸ್ತಿ ಮೊತ್ತ ರೂ.50 ಸಾವಿರಕ್ಕೆ ಏರಿಸಬೇಕು
ಪ್ರತಿ ವರ್ಷ ನೀಡಲಾಗುವ ಬಾಲವನ ಪ್ರಶಸ್ತಿ ಮೊತ್ತ ರೂ.25 ಸಾವಿರ ಇದೆ.ಅದನ್ನು ರೂ.50 ಸಾವಿರಕ್ಕೆ ಏರಿಸಬೇಕು.ಹಿಂದೆ ಸುಳ್ಯ ಕೆ.ವಿ.ಜಿ ಅವರು ಪ್ರಶಸ್ತಿ ಮೊತ್ತದ ಪ್ರಾಯೋಜಕರಾಗಿದ್ದರು. ಪ್ರಸ್ತುತ ದಿನಗಳಲ್ಲಿ ಪ್ರಶಸ್ತಿ ಮೊತ್ತ ಹೆಚ್ಚಿಸುವ ಕುರಿತು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ಪ್ರಸ್ತಾಪಿಸಿದರು.ಈ ಕುರಿತು ಎಲ್ಲರೂ ಸಹಮತ ವ್ಯಕ್ತಪಡಿಸಿದರು.ಸುಳ್ಯ ಕೆ.ವಿ.ಜಿ ಯ ದಿ.ವೆಂಕಟ್ರಮಣ ಗೌಡ ಅವರ ಪುತ್ರರಲ್ಲಿ ಈ ಕುರಿತು ಪ್ರಸ್ತಾಪ ಮಾಡಿ ಮುಂದಿನ ನಡೆ ಇಡುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು.ಸಹಾಯಕ ಕಮಿಷನರ್ ಅವರು ಈ ಕುರಿತು ಸದಸ್ಯರ ತೀರ್ಮಾನದಂತೆ ಮಾತನಾಡುವ ಭರವಸೆ ವ್ಯಕ್ತಪಡಿಸಿದರು.