ಪುತ್ತೂರು: ಉಪ್ಪಿನಂಗಡಿಯಲ್ಲಿ ನೂತನ ಬಸ್ಸು ನಿಲ್ದಾಣ ನಿರ್ಮಾಣದ ಅಗತ್ಯವಿದ್ದು ಈಗ ಇರುವ ನಿಲ್ದಾಣ ಸಮೀಪದಲ್ಲೇ ಜಾಗವನ್ನು ಗುರುತಿಸಲಾಗಿದ್ದು ಅದನ್ನು ಮಂಜೂರು ಮಾಡಿಸುವುದರ ಜೊತೆ ಅನುದಾನವನ್ನೂ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ರೈ ಅವರು ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮವು ತಾಲೂಕಿನಲ್ಲಿ ಹೋಬಲಿ ಕೇಂದ್ರವಾಗಿದ್ದು ಮಂಗಳೂರು-ಬೆಂಗಳೂರು, ಪುತ್ತೂರು-ಧರ್ಮಸ್ಥಳ, ಮಂಗಳೂರು- ಸುಬ್ರಹ್ಮಣ್ಯ ಮಾರ್ಗದಲ್ಲಿರುವ ಅತೀ ದೊಡ್ಡ ಪಂಚಾಯತ್ ಆಗಿದ್ದು ದಿನವೊಂದಕ್ಕೆ ಸರಿ ಸುಮಾರು 200 ಬಸ್ ಗಳು ಈ ಮಾರ್ಗದಲ್ಲಿ ಸಂಚರಿಸುತ್ತದೆ. ಉಪ್ಪಿನಂಗಡಿ ಗ್ರಾಮವು ಈ ಮಾರ್ಗದಲ್ಲಿರುವ ಅತೀ ಮುಖ್ಯ ಪಟ್ಟಣವಾಗಿರುತ್ತದೆ. ಈಗಾಗಲೇ ಸದರಿ ಜಾಗವನ್ನು ಉಪ್ಪಿನಂಗಡಿ ಬಸ್ ನಿಲ್ದಾಣ ಮಾಡಲು ಕಾಯ್ದಿರಿಸುವ ಬಗ್ಗೆ ಭೂ ಸ್ವಾಧೀನದ ಮೌಲ್ಯವಾಗಿ ರೂ 72.06.058 ನಿಗದಿ ಮಾಡಲಾಗಿತ್ತು . ತದನಂತರ ಜನವರಿ 2014 ರ ಹೊಸ ಭೂ ಸ್ವಾಧೀನ ಕಾಯ್ದೆಯ ನಿಯಮ ಜಾರಿಗೆ ಬಂದಿರುವ ಕಾರಣ ರೂ. 13.26ಕೋಟಿ ಮೊತ್ತವನ್ನು ನಿಗದಿಪಡಿಸಿ ರೂ. 9 ಕೋಟಿಗಳನ್ನು ಠೇವಣಿಯಾಗಿಡುವ ಬಗ್ಗೆ ಸಹಾಯಕ ಆಯುಕ್ತರು ಸೂಚಿಸಿರುತ್ತಾರೆ. ಈ ಜಾಗವು ಬಸ್ಸು ನಿಲ್ದಾಣಕ್ಕೆ ಸೂಕ್ತವಾಗಿರುವುದರಿಂದ ಹಾಗೂ ಭೂ ಮಾಲೀಕರು ಜಾಗವನ್ನು ಪ್ರಸ್ತುತ ದರ ಸಿಕ್ಕಿದಲ್ಲಿ, ಬಸ್ಸು ನಿಲ್ದಾಣಕ್ಕೆ ಜಾಗವನ್ನು ನೀಡಲು ಅನುಮತಿಸಿರುತ್ತಾರೆ. ಉಪ್ಪಿನಂಗಡಿಯಲ್ಲಿರುವ ಮಾರುಕಟ್ಟೆಯ ದರವನ್ನು ನಿಗದಿಪಡಿಸಿ ಜಮೀನನ್ನು ವಶ ಪಡಿಸಿಕೊಂಡು ಸದರಿ ಜಮೀನಿನ ಮಾಲಕರಿಗೆ ಭೂಸ್ವಾಧಿನದ ಮೌಲ್ಯದ ಮೊತ್ತವನ್ನು ಪಾವತಿಸಿ, ಸದರಿ ಜಾಗದಲ್ಲಿ ಉಪ್ಪಿನಂಗಡಿ ಬಸ್ ನಿರ್ಮಾಣ ಮಾಡಲು ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಸಾರಿಗೆ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂಧರ್ಭದಲ್ಲಿ ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಮೆಸ್ಕಾಂ ಸಮಿತಿ ಸದಸ್ಯರಾದ ಚಂದ್ರ ಕಲ್ಲಗುಡ್ಡೆ, ರಾಕೇಶ್ ರೈ ಕುದ್ಕಾಡಿ ಹಾಗೂ ಸತೀಶ್ ನಿಡ್ಪಳ್ಳಿ ಉಪಸ್ಥಿತರಿದ್ದರು.