ಮಕ್ಕಳ ಬೇಡಿಕೆಗಳನ್ನು ಪೂರೈಸಲು ಅನುದಾನದ ಅವಶ್ಯಕತೆ ಇದೆ: ತ್ರಿವೇಣಿ ಪಲ್ಲತ್ತಾರು
ಪುತ್ತೂರು: ಮಕ್ಕಳ ಗ್ರಾಮಸಭೆಗಳಲ್ಲಿ ಮಕ್ಕಳಿಂದ ಬರುವ ಬೇಡಿಕೆಗಳನ್ನು ಪೂರೈಸಲು ಬಹಳಷ್ಟು ಅನುದಾನದ ಅವಶ್ಯಕತೆ ಇರುತ್ತದೆ. ಶಾಲೆ, ಕಾಲೇಜುಗಳ ದುರಸ್ತಿ, ಪೀಠೋಪಕರಣಗಳು, ಆಟಿಕೆ ಸಾಮಾಗ್ರಿಗಳು, ಶೌಚಾಲಯ ದುರಸ್ತಿ ಇತ್ಯಾದಿ ಸೇರಿದಂತೆ ಮಕ್ಕಳು ತಮ್ಮ ಬೇಡಿಕೆಗಳನ್ನು ಗ್ರಾಮಸಭೆಗಳಲ್ಲಿ ಇಟ್ಟಾಗ ಅವುಗಳನ್ನು ಪೂರೈಸಲು ಅನುದಾನದ ಕೊರತೆ ಎದ್ದು ಕಾಣುತ್ತಿದೆ. ಸರಿಯಾದ ಅನುದಾನ ಇಲ್ಲದೇ ಇರುವುದರಿಂದ ಮಕ್ಕಳ ಬೇಡಿಕೆಗಳನ್ನು ಪೂರೈಸಲು ಕಷ್ಟವಾಗುತ್ತಿದೆ. ಆದ್ದರಿಂದ ಮಕ್ಕಳ ಗ್ರಾಮಸಭೆಗಳಲ್ಲಿ ಕೇಳಿಬರುವ ಬೇಡಿಕೆಗಳನ್ನು ಪೂರೈಸಲು ಸರಕಾರ ವಿಶೇಷ ಅನುದಾನವನ್ನು ನೀಡಬೇಕು ಎಂದು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ತಮ್ಮ ಅಭಿಪ್ರಾಯ ಮಂಡಿಸಿದರು.
ಅವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ ಆಯುಕ್ತಾಲಯ, ಎಡುಕೋ ಮತ್ತು ಚೈಲ್ಡ್ ರೈಟ್ಸ್ ಟ್ರಸ್ಟ್ ಇದರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಪರಿಣಾಮಕಾರಿಯಾಗಿ ಆಯೋಜನೆ ಮತ್ತು ಜಾರಿ ಮಾಡುವ ಕುರಿತು ಬೆಂಗಳೂರು ಗಾಂಧಿನಗರದಲ್ಲಿರುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಭಾಂಗಣದಲ್ಲಿ ಸೆ.18 ರಂದು ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಪ್ರಸ್ತುತ ನಡೆಯುತ್ತಿರುವ ಮಕ್ಕಳ ಗ್ರಾಮಸಭೆಗಳಲ್ಲಿ ಕೇವಲ ಕೆಲವೊಂದು ಇಲಾಖೆಯ ಅಧಿಕಾರಿಗಳು ಮಾತ್ರ ಭಾಗವಹಿಸುತ್ತಿದ್ದಾರೆ ಇದು ಸರಿಯಲ್ಲ ಗ್ರಾಮಸಭೆಯ ನಡಾವಳಿಯಂತೆ ಮಕ್ಕಳ ಗ್ರಾಮಸಭೆಗೂ ಸರಕಾರದ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಕೂಡ ಭಾಗವಹಿಸುವಂತಿರಬೇಕು ಏಕೆಂದರೆ ಮಕ್ಕಳ ಬೇಡಿಕೆಗಳು ಹಲವು ಇಲಾಖೆಗಳಿಗೆ ಸಂಬಂಧಿಸಿದ್ದು ಆಗಿರುತ್ತದೆ ಎಂದು ತ್ರಿವೇಣಿ ಪಲ್ಲತ್ತಾರು ಹೇಳಿದರು.
ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಆಯುಕ್ತರಾದ ಡಾ.ಆರುಂಧತಿ ಚಂದ್ರಶೇಖರ್ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿದರು. ಇಲಾಖೆಯ ಉಪ ನಿರ್ದೇಶಕಿ ನಾಗವೇಣಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಎಡುಕೋ ರಾಷ್ಟ್ರೀಯ ನಿರ್ವಾಹಕ ಗುರುಪ್ರಸಾದ್ ಅತಿತಿಗಳಾಗಿ ಹಾಗೇ ಚೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವಾಸುದೇವ ಶರ್ಮಾ ಎನ್.ವಿ, ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಪಂ ಅಧ್ಯಕ್ಷ ಕುಮಾರ್, ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ವಿದ್ಯಾರ್ಥಿನಿ ಚಿತ್ರಾ, ವಿದ್ಯಾರ್ಥಿ ಆತ್ಮೀಯ ಕೆ ಉಪಸ್ಥಿತರಿದ್ದರು. ಇದಲ್ಲದೆ ಸಭೆಯಲ್ಲಿ ರಾಜ್ಯದ ಬಳ್ಳಾರಿ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ ಮತ್ತು ಗದಗ ಜಿಲ್ಲೆಗಳ 11 ತಾಲೂಕುಗಳ 108 ಗ್ರಾಮ ಪಂಚಾಯತಿಗಳನ್ನು ಪ್ರತಿನಿಧಿಸುವ ಮಕ್ಕಳು, ಪಂಚಾಯತ್‌ನ ಚುನಾಯಿತಿ ಪ್ರತಿನಿಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ನಡೆದ ಸಭೆ
ಜಿಲ್ಲೆಯಿಂದ ಪುತ್ತೂರಿನ ಮೂವರು ಭಾಗಿ
ರಾಜ್ಯಮಟ್ಟದ ಸಮಾಲೋಚನಾ ಸಭೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪುತ್ತೂರಿನ ಮೂವರು ಭಾಗಿಯಾಗಿದ್ದಾರೆ. ಪಂಚಾಯತ್ ಚುನಾಯಿತ ಪ್ರತಿನಿಧಿಯಾಗಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಪರವಾಗಿ ನೆಕ್ಕಿಲಾಡಿ 34 ಗ್ರಾಪಂ ಅಭಿವೃದ್ಧಿ ಅಧಿಕಾರಿ ಸತೀಶ್, ಮಕ್ಕಳ ಪ್ರತಿನಿಧಿಯಾಗಿ ಕೊಂಬೆಟ್ಟು ಪ.ಪೂ.ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಹಸ್ತಾ ಬೆಳ್ಳಿಪ್ಪಾಡಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ವಿಶೇಷವಾಗಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಸಭಾ ವೇದಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ ಮಂಡಿಸಿದರು.
ಸಭೆಯ ಪ್ರಮುಖ ಶಿಫಾರಸುಗಳು
ಮಕ್ಕಳ ಹಕ್ಕುಗಳ ಗ್ರಾಮಸಭೆಯು ವರ್ಷಕ್ಕೆ ಎರಡು ಸಲ ನಡೆಯಬೇಕು, ಗ್ರಾಮೀಣ ಮಕ್ಕಳ ದಿನ ಆಚರಿಸಬೇಕು, ಶಾಲಾ ಪಠ್ಯಕ್ಕೆ ಮಕ್ಕಳ ಹಕ್ಕುಗಳ ಗ್ರಾಮಸಭೆ ವಿಷಯ ಸೇರ್ಪಡೆ ಮಾಡಬೇಕು, ಮಕ್ಕಳ ಬಗೆಗಿನ ದತ್ತಾಂಶವನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಪ್ಡೇಟ್ ಮಾಡಬೇಕು, ಮಕ್ಕಳ ಹಕ್ಕುಗಳ ಗ್ರಾಮಸಭೆಯ ಬಗ್ಗೆ ನಿಗಾ ವ್ಯವಸ್ಥೆ ರೂಪಿಸಬೇಕು, ಶಾಲೆ ಬಿಡುತ್ತಿರುವುದು, ವಲಸೆ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆಯಬೇಕು.