ಉಪ್ಪಿನಂಗಡಿ: ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಬರುವ ಇಲ್ಲಿನ ನೇತ್ರಾವತಿ ಸೇತುವೆಯ ಸಂಪರ್ಕ ರಸ್ತೆಯಲ್ಲಿ ಅಪಾಯಕಾರಿಯಾಗಿದ್ದ ಹೊಂಡ ಗುಂಡಿಗಳನ್ನು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯಾದ ಕೆಎನ್‌ಆರ್‌ನ ಅಧಿಕಾರಿಗಳ ಸಹಕಾರದಿಂದ ಮುಚ್ಚುವ ಕಾರ್ಯ ನಡೆದಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ತೋರಿದ ಸ್ಪಂದನೆಗೆ ನಾಗರಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯಲ್ಲಿ ಬರುವ ನೇತ್ರಾವತಿ ಸೇತುವೆಯ ಉಪ್ಪಿನಂಗಡಿ ಪಾರ್ಶ್ವದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡುವ ಮಟ್ಟದಲ್ಲಿ ರಸ್ತೆಯಲ್ಲಿ ಬೃಹತ್ ಹೊಂಡಗುಂಡಿಗಳು ಕಾಣಿಸಿಕೊಂಡು ದ್ವಿಚಕ್ರ ವಾಹನ ಸವಾರರನ್ನು ಬಹಳಷ್ಟು ಸಂಕಷ್ಟಕ್ಕೆ ಸಿಲುಕಿಸಿತ್ತು. ಇದನ್ನರಿತ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಕಾಮಗಾರಿ ನಿರತ ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳು ಸದ್ರಿ ರಸ್ತೆಯ ಹೊಂಡಗಳನ್ನು ಸಿಮೆಂಟ್ ಮಿಶ್ರಿತ ಜಲ್ಲಿ ಹಾಕಿ ಮುಚ್ಚುವ ಮೂಲಕ ರಸ್ತೆಯನ್ನು ಸಂಚಾರಯೋಗ್ಯವನ್ನಾಗಿಸಿದ್ದಾರೆ.
ನಾಗರಿಕರ ಕೋರಿಕೆಗೆ ಸಂದಿಸಿದ ಅಧಿಕಾರಿ:
ಉಪ್ಪಿನಂಗಡಿ -ಗುರುವಾಯನಕೆರೆ ರಾಜ್ಯ ಹೆದ್ದಾರಿಯ ನೇತ್ರಾವತಿ ನದಿ ಸೇತುವೆಯ ಉಪ್ಪಿನಂಗಡಿ ಪಾರ್ಶ್ವದ ನೂರು ಮೀಟರ್ ರಸ್ತೆಯ ನಿರ್ವಹಣೆಯ ಹೊಣೆ ಯಾರದ್ದೆನ್ನುವುದು ಇನ್ನೂ ಬಹಿರಂಗ ಗೊಂಡಂತಿಲ್ಲ. ಹೀಗಾಗಿ ಈ ರಸ್ತೆಯ ದುಸ್ಥಿತಿಯನ್ನು ನಿವಾರಿಸಲು ಯಾರೂ ಮುಂದಾಗುತ್ತಿಲ್ಲ. ಇಲ್ಲಿ ಹೊಂಡ- ಗುಂಡಿಗಳು ಬಿದ್ದು ವಾಹನ ಸವಾರರು ಸಂಕಷ್ಟ ಪಡುವುದನ್ನು ಕಂಡ ಉಪ್ಪಿನಂಗಡಿಯ ಸಾಮಾಜಿಕ ಕಾರ್ಯಕರ್ತ ನಾಗೇಶ್ ಪ್ರಭು ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಪ್ರಸಕ್ತ ನಡೆಯುತ್ತಿರುವ ಹೆದ್ದಾರಿ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿಯ ವೇಳೆ ಹೆಚ್ಚುವರಿಯಾಗಿ ಉಳಿಕೆಯಾದ ಕಾಂಕ್ರೀಟ್ ಮಿಶ್ರಣವನ್ನು ಈ ರಸ್ತೆಯ ಹೊಂಡಗಳಿಗೆ ಹಾಕಲು ವಿನಂತಿಸಿದ್ದರು. ಈ ವಿನಂತಿಗೆ ಮಾನವೀಯ ಕಾಳಜಿಯೊಂದಿಗೆ ಸ್ಪಂದಿಸಿದ ಕೆಎನ್‌ಆರ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ನಂದಕುಮಾರ್ , ತಮ್ಮ ಸಂಸ್ಥೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಅಗತ್ಯ ಸ್ಪಂದನೆ ನೀಡುವಂತೆ ಸೂಚಿಸಿದ್ದರು. ಅದರಂತೆ ಕೆಎನ್‌ಆರ್ ಸಂಸ್ಥೆಯ ಸಿಬ್ಬಂದಿಯು ಇಲ್ಲಿ ಸಿಮೆಂಟ್ ಮಿಶ್ರಿತ ಜಲ್ಲಿ ಹಾಕಿ ಇಲ್ಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಡಾಮರ್ ಹಾಕುವ ಬಗ್ಗೆ ಭರವಸೆಯನ್ನು ನೀಡಿದ್ದಾರೆ. ಈ ಮೂಲಕ ತಮ್ಮ ಕಾರ್ಯ ವ್ಯಾಪ್ತಿಗೆ ಒಳಪಡದಿದ್ದರೂ ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ, ಊರಿನ ರಸ್ತೆಯ ಹೊಂಡಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ಸ್ಪಂದನೆ ನೀಡಿದ ಕೆಎನ್‌ಆರ್ ಸಂಸ್ಥೆಯ ನಡೆಯು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.
ಪೋಟೋ: ರಸ್ತೆ