ವರದಿ: ಹರೀಶ್ ಬಾರಿಂಜ
ನೆಲ್ಯಾಡಿ: 50 ವರ್ಷಕ್ಕೂ ಹೆಚ್ಚು ಹಳೆಯದಾದ ನೆಲ್ಯಾಡಿಬೈಲು ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು ಕಾಂಕ್ರಿಟ್ ಎದ್ದು ಕಬ್ಬಿಣದ ರಾಡ್‌ಗಳು ಕಾಣುತ್ತಿವೆ. ಈ ಸೇತುವೆಯಲ್ಲಿ ಸಂಚಾರ ಮಾಡುವುದು ಅಪಾಯಕಾರಿಯಾಗಿದೆ.
ನೆಲ್ಯಾಡಿ ಪೇಟೆಯಿಂದ ಅನತಿ ದೂರದಲ್ಲಿ ನೆಲ್ಯಾಡಿಬೈಲು ಎಂಬಲ್ಲಿ ಅಂದಾಜು 50 ವರ್ಷದ ಹಿಂದೆ ಈ ಕಿರುಸೇತುವೆ ನಿರ್ಮಾಣಗೊಂಡಿದೆ. ಸೇತುವೆ ಅಂದಾಜು 30ಕ್ಕೂ ಹೆಚ್ಚು ಅಡಿ ಉದ್ದ ಹಾಗೂ ಐದಾರು ಅಡಿ ಅಗಲವಿದೆ. ಘನ ವಾಹನ ಹೊರತುಪಡಿಸಿ ರಿಕ್ಷಾ, ಜೀಪು, ದ್ವಿಚಕ್ರವಾಹನಗಳು ಈ ಸೇತುವೆಯಲ್ಲಿ ಓಡಾಟ ನಡೆಸುತ್ತಿವೆ. ದಿನದಲ್ಲಿ ನೂರಕ್ಕೂ ಹೆಚ್ಚು ವಾಹನಗಳು ಈ ರಸ್ತೆ ಮೂಲಕ ಸಂಚಾರ ಮಾಡುತ್ತಿವೆ. ಆದರೆ ರಸ್ತೆ ಈಗ ಸಂಪೂರ್ಣ ಶಿಥಿಲಗೊಂಡಿದ್ದು ಮೇಲ್ಭಾಗದಲ್ಲಿ ವಾಹನಗಳು ಓಡಾಟ ಮಾಡುತ್ತಿರುವಂತೆ ಅಡಿಭಾಗದಲ್ಲಿ ಕಾಂಕ್ರಿಟ್ ಎದ್ದು ಕೆಳಕ್ಕೆ ಬೀಳುತ್ತಿದೆ. ಕಬ್ಬಿಣದ ರಾಡ್‌ಗಳು ಕಾಣಿಸಿಕೊಂಡಿವೆ. ಮೇಲ್ಭಾಗದಲ್ಲೂ ಸೇತುವೆಯ ಅಲ್ಲಲ್ಲಿ ಹೊಂಡ ಬಿದ್ದು ಮಣ್ಣುಹೊಯಿಗೆ ತುಂಬಿಕೊಂಡಿದೆ. ಈ ಸೇತುವೆಯ ಮೇಲೆ ಸಂಚಾರ ಮಾಡುವುದು ಅಪಾಯಕಾರಿಯಾಗಿದೆ.
ಜೋತಾಡುತ್ತಿದೆ ತಡೆಗೋಡೆ ಪೈಪು:
ಸೇತುವೆಯ ಎರಡೂ ಬದಿಗಳಿಗೆ ತಡೆಗೋಡೆಯಾಗಿ ಕಬ್ಬಿಣದ ಪೈಪು ಹಾಕಲಾಗಿತ್ತು. ಆದರೆ ಇದು ಬಿದ್ದುಹೋಗಿದ್ದು ಜೋತಾಡುತ್ತಿವೆ. ಮಳೆಗಾಲದಲ್ಲಿ ರಸ್ತೆ ಮೂಲಕ ಹರಿದು ಬರುತ್ತಿರುವ ನೀರು ಸೇತುವೆಯ ಮೇಲೆಯೇ ನಿಲ್ಲುತ್ತಿದೆ. ಈ ವೇಳೆ ಸೇತುವೆ ಮೇಲೆ ಸಂಚಾರಕ್ಕೆ ಬೈಕ್ ಸವಾರರು ಸರ್ಕಸ್ ಮಾಡಬೇಕಾಗುತ್ತದೆ. ಕೆಲ ದಿನಗಳ ಹಿಂದೆ ಬೈಕ್ ಸವಾರರೊಬ್ಬರು ಸೇತುವೆಯಿಂದ ಕೆಳಕ್ಕೆ ಬಿದ್ದ ಘಟನೆಯೂ ನಡೆದಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸಂಪರ್ಕ ರಸ್ತೆಯೂ ಹೊಂಡಮಯ:
ಸೇತುವೆಯನ್ನು ಸಂಪರ್ಕಿಸುವ ಎರಡೂ ಬದಿಯ ರಸ್ತೆಯೂ ಹೊಂಡಗಳಿಂದ ತುಂಬಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಎದ್ದು ಸಂಚಾರ ಮಾಡುತ್ತಿದ್ದಾರೆ. ಪಡುಬೆಟ್ಟುನಿಂದ ಕಲ್ಲಚಡವು ಮೂಲಕ ಸಂಪರ್ಕ ಕಲ್ಪಿಸುವ ಈ ರಸ್ತೆ ಹಲವು ವರ್ಷದ ಹಿಂದೆ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿ ಡಾಮರೀಕರಣಗೊಂಡಿತ್ತು. ಈಗ ಡಾಮರು ಎದ್ದುಹೋಗಿ ರಸ್ತೆಯಲ್ಲಿ ಹೊಂಡ ನಿರ್ಮಾಣಗೊಂಡಿದ್ದು ವಾಹನ ಸಂಚಾರಕ್ಕೆ ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಭರವಸೆ ಮಾತ್ರ:
ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ನೆಲ್ಯಾಡಿಬೈಲು ಎಂಬಲ್ಲಿರುವ ಈ ಕಿರು ಸೇತುವೆ ಶಿಥಿಲಗೊಂಡಿದ್ದು ದುರಸ್ತಿಗೊಳಿಸುವಂತೆ ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಈ ಭಾಗದ ಜನರು ಸಚಿವರು, ಸಂಸದರು, ಶಾಸಕರಿಗೆ ಮನವಿ ಮಾಡುತ್ತಲೇ ಬರುತ್ತಿದ್ದಾರೆ. ಸಚಿವರು, ಶಾಸಕರಿಂದ ಭರವಸೆ ಸಿಗುತ್ತಿದೆಯೇ ಹೊರತು ಈ ತನಕ ಅನುದಾನ ಬಂದಿಲ್ಲ. ಚುನಾವಣೆ ಸಂದರ್ಭದಲ್ಲಿ ಬರುವ ಜನಪ್ರತಿನಿಧಿಗಳು ಆ ಬಳಿಕ ಇಲ್ಲಿನ ಸಮಸ್ಯೆ ಬಗ್ಗೆ ಗಮನವೇ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಹೋರಾಟ ಸಮಿತಿ ರಚನೆ:
ನೆಲ್ಯಾಡಿಬೈಲು ಎಂಬಲ್ಲಿ ಹೊಸ ಸೇತುವೆ ನಿರ್ಮಾಣಕ್ಕಾಗಿ ಪಕ್ಷಾತೀತವಾಗಿ ಹೋರಾಟ ಸಮಿತಿಯೂ ರಚನೆಗೊಂಡಿತ್ತು. ಸಮಿತಿಯ ಮೂಲಕ ಸಚಿವರು, ಶಾಸಕರು, ಸಂಸದರಿಗೆ ಮನವಿ ಮಾಡಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಈ ಭಾಗದ ಜನರು ಮಾಡಿದ್ದರು. ಈ ವೇಳೆ ಎರಡೂ ಪಕ್ಷದ ಪ್ರಮುಖರು, ಅಧಿಕಾರಿಗಳು ಬಂದು ಗ್ರಾಮಸ್ಥರ ಮನವೊಲಿಕೆ ಮಾಡಿ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು.
ಸುತ್ತು ಬಳಸುವುದು ಅನಿವಾರ್ಯ:
ಇಲ್ಲಿ ಸಂಪರ್ಕ ಕಡಿತಗೊಂಡಲ್ಲಿ ಸೇತುವೆಯ ಇನ್ನೊಂದು ಭಾಗದ ಗ್ರಾಮಸ್ಥರು ನೆಲ್ಯಾಡಿ ಪೇಟೆಗೆ ಬರಬೇಕಾದಲ್ಲಿ ಸುತ್ತುಬಳಸಿ ಬರಬೇಕಾಗುವುದು ಅನಿವಾರ್ಯವಾಗಲಿದೆ. ಈ ರೀತಿಯಾದಲ್ಲಿ ದಿನಂಪ್ರತಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ, ಹಾಲು ಉತ್ಪಾದಕರು, ಕೃಷಿಕರು, ಸಾರ್ವಜನಿಕರು ಸಂಕಷ್ಟ ಪಡಬೇಕಾಗುತ್ತದೆ. ಆದ್ದರಿಂದ ಈ ಭಾಗದ ಗ್ರಾಮಸ್ಥರ ಬಹು ವರ್ಷದ ಬೇಡಿಕೆಯಾಗಿರುವ ನೆಲ್ಯಾಡಿಬೈಲು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ತುರ್ತು ಸ್ಪಂದನೆ ನೀಡಬೇಕಾಗಿದೆ.
ಪಂಚಾಯತ್‌ನಿಂದ ಸಾಧ್ಯವಿಲ್ಲ
ಪಡುಬೆಟ್ಟು ಭಾಗದ ಜನರಿಗೆ ನೆಲ್ಯಾಡಿ ಪೇಟೆಗೆ ಸಂಪರ್ಕ ಕಲ್ಪಿಸುವ ಅತೀ ಸಮೀಪದ ರಸ್ತೆ ಇದಾಗಿದೆ. ಶಾಲಾ ಮಕ್ಕಳು, ಕೃಷಿಕರು ದಿನನಿತ್ಯ ಓಡಾಟ ಮಾಡುತ್ತಾರೆ. ಇತ್ತೀಚೆಗೆ ಬೈಕ್ ಸವಾರರೊಬ್ಬರು ಸೇತುವೆಯಿಂದ ತೋಡಿಗೆ ಬಿದ್ದ ಘಟನೆಯೂ ನಡೆದಿದೆ. ಇಲ್ಲಿ ಹೊಸ ಸೇತುವೆ ನಿರ್ಮಿಸಬೇಕೆಂಬುದು ಈ ಭಾಗದ ಜನರ ಬಹುವರ್ಷದ ಬೇಡಿಕೆಯಾಗಿದೆ. ಇದು ಗ್ರಾಮ ಪಂಚಾಯತ್‌ನಿಂದ ಸಾಧ್ಯವಿಲ್ಲ. ಸರಕಾರದ ಮಟ್ಟದಲ್ಲಿ ಆಗಬೇಕಿದೆ. ಗ್ರಾಮಸಭೆ, ಸಾಮಾನ್ಯ ಸಭೆಯಲ್ಲೂ ನಿರ್ಣಯ ಕೈಗೊಂಡು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ದುರಸ್ತಿಗೆ ಪ್ರತಿವರ್ಷ ಪಂಚಾಯತ್‌ನಿಂದ ಅನುದಾನ ಬಳಕೆ ಮಾಡುತ್ತಿದ್ದೇವೆ. ಚುನಾವಣೆ ವೇಳೆ ಎರಡು ಪಕ್ಷದವರೂ ಬಂದು ಭರವಸೆ ನೀಡುತ್ತಾರೆ. ಆದರೆ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ.
ಸಂಪೂರ್ಣ ಕಡೆಗಣನೆಯಾಗಿದೆ
ಸೇತುವೆ ನಿರ್ಮಾಣ ವಿಚಾರದಲ್ಲಿ ಜನಪ್ರತಿನಿಽಗಳು, ಅಽಕಾರಿಗಳು ಸಂಪೂರ್ಣ ಕಡೆಗಣನೆ ಮಾಡಿದ್ದಾರೆ. ಎಸ್.ಅಂಗಾರ ಅವರು ಶಾಸಕರಾಗಿದ್ದ ವೇಳೆ ಸೇತುವೆಗಾಗಿ ಮನವಿ ಮಾಡಲಾಗಿದೆ. ಅವರು ಸಚಿವರಾದ ಬಳಿಕ ಖುದ್ದು ಮನೆಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದೇನೆ. ಹೋರಾಟ ಸಮಿತಿಯಿಂದ ಚುನಾವಣೆ ಬಹಿಷ್ಕಾರ ನಿರ್ಧಾರ ತೆಗೆದುಕೊಂಡ ವೇಳೆ ಅಭ್ಯರ್ಥಿಯಾಗಿದ್ದ ಭಾಗೀರಥಿ ಮುರುಳ್ಯ ಅವರು ಸ್ಥಳಕ್ಕೆ ಬಂದು ಗೆದ್ದು ಬಂದಲ್ಲಿ ಸೇತುವೆ ರಚನೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ನಾಲ್ಕು ತಿಂಗಳ ಹಿಂದೆ ಬಿಜೆಪಿ ಬೂತ್ ಸಮಿತಿ ನೆಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಮಾಡಿದ್ದೆವು. ಈಗಿನ ಸರಕಾರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ. ಶಾಸಕರ ನಿಧಿಯ ಅನುದಾನವೂ ಬಂದಿಲ್ಲ ಎಂದು ಹೇಳಿದ್ದಾರೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ
ಸದ್ರಿ ಸೇತುವೆ ಮೂಲಕ ದಿನಂಪ್ರತಿ ನೂರಾರು ವಾಹನ, ಜನರು ಓಡಾಟ ನಡೆಸುತ್ತಿದ್ದಾರೆ. ಅಡಿಭಾಗ ಸಂಪೂರ್ಣ ಶಿಥಿಲಗೊಂಡಿರುವುದರಿಂದ ಸಂಚಾರ ಅಪಾಯಕಾರಿಯಾಗಿದೆ. ಇಲ್ಲಿ ಹೊಸ ಸೇತು ವೆಗಾಗಿ ಹೋರಾಟ ಸಮಿತಿ ವತಿಯಿಂದ ಶಾಸಕರು, ಜನಪ್ರ ತಿನಿಽಗಳಿಗೆ ಮನವಿ ಮಾಡುತ್ತಲೇ ಇದ್ದೇವೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣೆ ಬಹಿಷ್ಕಾರ ನಿರ್ಧಾರ ಕೈಗೊಳ್ಳಲಾಗಿತ್ತು. ಈ ವೇಳೆ ಎರಡೂ ಪಕ್ಷದ ಮುಖಂಡರು ಭರವಸೆ ನೀಡಿದ್ದರು. ಆದರೆ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಗಮನಹರಿಸಿ ಶೀಘ್ರದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.