ತ್ಯಾಜ್ಯ ಬಳಸಿ ಬಯೋ ಸಿಎನ್‌ಜಿ ಉತ್ಪಾದನೆ -ಝೀರೋ ಡಂಪಿಂಗ್ ಯಾರ್ಡ್ ದೇಶದಲ್ಲೇ ಪ್ರಥಮ

0

ಪುತ್ತೂರು:ತ್ಯಾಜ್ಯವನ್ನು ಬಳಸಿಕೊಂಡು ಬಯೋ ಸಿಎನ್‌ಜಿ ಗ್ಯಾಸ್ ಉತ್ಪಾದನೆ ಮಾಡುವ ಮೂಲಕ ಝೀರೋ ಡಂಪಿಂಗ್ ಯಾರ್ಡ್ ಮಾಡುವುದಲ್ಲದೆ ದೇಶದಲ್ಲೇ ನಗರಸಭೆ ವ್ಯಾಪ್ತಿಯಲ್ಲಿ ಪ್ರಥಮ ಘಟಕವಾಗಿ ಹೊರಹೊಮ್ಮಲಿರುವ, ಪುತ್ತೂರು ಬನ್ನೂರಿನ ನೆಕ್ಕಿಲು ಎಂಬಲ್ಲಿನ ನೆಲಭರ್ತಿ ಸ್ಥಳ(ಲ್ಯಾಂಡ್‌ಫಿಲ್ ಸೈಟ್)ದಲ್ಲಿ ಗ್ಯಾಸ್ ಉತ್ಪಾದನೆ ಆರಂಭಿಸಲಾಗಿದೆಯಾದರೂ ಮಾರಾಟಕ್ಕೆ ಕೇಂದ್ರ ಸರಕಾರದ ಲೈಸನ್ಸ್ ಸಿಗಬೇಕಾಗಿದೆ.


ಕೃಷ್ಣನಾರಾಯಣ ಮುಳಿಯ ಸಾರಥ್ಯದ ಕೃಷ್ಣಮುಳಿಯ ಗ್ರೀನ್ ಎನರ್ಜಿ ಎಲ್‌ಎಲ್‌ಪಿ ಸಂಸ್ಥೆಯಿಂದ ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಸ್ವಚ್ಛ ಭಾರತ ಟ್ರಸ್ಟ್ ಸಂಸ್ಥೆಯು 2021ರಲ್ಲಿ ನಗರಸಭೆ ಜತೆ ಈ ಕುರಿತು ಒಪ್ಪಂದ ಮಾಡಿಕೊಂಡಿತ್ತು. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬನ್ನೂರು ಘನತ್ಯಾಜ್ಯ ಸಂಸ್ಕರಣಾ ಘಟಕ, ಸಮಗ್ರ ಘನತ್ಯಾಜ್ಯ ಸಂಸ್ಕಾರಣಾ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು.ಒಪ್ಪಂದ ಪ್ರಕಾರ ಅಲ್ಲಿ ಬಯೋ ಸಿಎನ್‌ಜಿ ಘಟಕ ಸ್ಥಾಪಿಸಲಾಗಿದೆ.‘ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಎಲ್‌ಎಲ್‌ಪಿ ಸಂಸ್ಥೆ’ಇದಕ್ಕೆ ಕೈ ಜೋಡಿಸಿದ್ದು, ಮಂಗಳೂರಿನ ರೀಟ್ಯಾಪ್ ಸೊಲ್ಯೂಶನ್ಸ್ ಸಂಸ್ಥೆ ಘಟಕ ಸ್ಥಾಪಿಸಿ ನಿರ್ವಹಣೆ ಮಾಡಲಿದೆ.ಘಟಕಕ್ಕಾಗಿ ಟ್ರಸ್ಟ್ ಮತ್ತು ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಎಲ್‌ಎಲ್‌ಪಿ ಸಂಸ್ಥೆ ವತಿಯಿಂದ ರೂ.3 ಕೋಟಿ ವೆಚ್ಚ ಮಾಡಲಾಗಿದೆ.ಸರಕಾರದ ಅನುದಾನ ಇದರಲ್ಲಿಲ್ಲ.ನಗರಸಭೆಯ ಜಾಗದಲ್ಲಿ 15 ವರ್ಷಗಳ ಲೀಸ್ ಆಧಾರದಲ್ಲಿ ಟ್ರಸ್ಟ್ ಇದನ್ನು ನಡೆಸಲಿದೆ.ಈಗಾಗಲೇ ಕಳೆದ ಫೆಬ್ರವರಿ ತಿಂಗಳಲ್ಲಿ ಗ್ಯಾಸ್ ಉತ್ಪಾದನೆಗೆ ಪ್ರಥಮ ಹಂತದ ಚಾಲನೆ ನೀಡಲಾಗಿದ್ದು, ಅಲ್ಲಿ ಗ್ಯಾಸ್ ಉತ್ಪಾದನೆ ನಡೆಯುತ್ತಿದೆ.ಆದರೆ ಮಾರಾಟ ಮಾಡಲು ಆಗುತ್ತಿಲ್ಲ.ಇದಕ್ಕೆ ಕೇಂದ್ರದ ಲೈಸನ್ಸ್ ಬೇಕಾಗಿದೆ.


ಪ್ರತಿ ದಿನ 12 ಟನ್ ಹಸಿ ತ್ಯಾಜ್ಯ ಬಳಸಿ ಗ್ಯಾಸ್ ಉತ್ಪಾದನೆ:
ಪ್ರತೀ ದಿನ 12 ಟನ್ ಹಸಿ ತ್ಯಾಜ್ಯ ಬಳಸಿಕೊಂಡು ಗ್ಯಾಸ್ ಉತ್ಪಾದನೆ ಮಾಡುವ ಸಾಮರ್ಥ್ಯ ಘಟಕಕ್ಕಿದೆ.ಈಗ ಪ್ರತೀ ದಿನ 7 ಟನ್ ತ್ಯಾಜ್ಯ ಬಳಸಿಕೊಂಡು ಪ್ರಾಯೋಗಿಕ ಉತ್ಪಾದನೆ ನಡೆಸಲಾಗುತ್ತಿದೆ.8 ಟನ್ ತ್ಯಾಜ್ಯ ಬಳಸಿದಾಗ 350 ಕೆ.ಜಿ ಗ್ಯಾಸ್ ಉತ್ಪಾದನೆಯಾಗಿದೆ.ಮನೆ ಮನೆ ಕಸ ಸಂಗ್ರಹದಲ್ಲಿ ಬೇರ್ಪಡಿಸಿ ಬರುವ ಹಸಿ ತ್ಯಾಜ್ಯವನ್ನು ಯಂತ್ರಕ್ಕೆ ಹಾಕಿ ಅಲ್ಲಿಂದ ಕೊಳವೆ ಮೂಲಕ ಪ್ರೀಡೈಜೆಸ್ಟ್‌ರ್‌ಗೆ ಸೇರುತ್ತದೆ.ಅಲ್ಲಿ ಸಮಗ್ರವಾಗಿ ಕಳಸಿದ ಮೇಲೆ ಡೈಜೆಸ್ಟರ್ ಯಂತ್ರಕ್ಕೆ ಹೋಗುತ್ತದೆ.ಅಲ್ಲಿಂದ ಲಿಕ್ವಿಡ್ ಅನಿಲವು ಗ್ಯಾಸ್ ಕಲೆಕ್ಷನ್ ಬಲೂನ್ ಸೇರುತ್ತದೆ.ಅಲ್ಲಿ ಮಿಥೇನ್ ಗ್ಯಾಸ್ ಪ್ರತ್ಯೇಕಗೊಳಿಸಿ ಸಿಲಿಂಡರ್‌ಗೆ ತುಂಬಿಸಲಾಗುತ್ತದೆ.


ಸಮಸ್ಯೆಗಳ ಆಗರಕ್ಕೆ ಮುಕ್ತಿ:
ಸುಮಾರು 32 ವರ್ಷಗಳ ಹಿಂದೆ ಬನ್ನೂರು ನೆಕ್ಕಿಲು ಎಂಬಲ್ಲಿ ನಿರ್ಮಿಸಲಾದ ನೆಲಭರ್ತಿ (ಲ್ಯಾಂಡ್ ಫಿಲ್ ಸೈಟ್) ಕ್ರಮೇಣ ಸಮಸ್ಯೆಯ ಆಗರವಾಗಿ ಬೆಳೆದಿತ್ತು.ಅವೈಜ್ಞಾನಿಕ ತ್ಯಾಜ್ಯ ಸಂಗ್ರಹ, ನಿರ್ವಹಣೆ, ಸಂಸ್ಕರಣೆಯಿಲ್ಲದ ವ್ಯವಸ್ಥೆ, ಪಾಳುಬಿದ್ದಿರುವ ಎರೆಗೊಬ್ಬರ ತಯಾರಿ ವ್ಯವಸ್ಥೆ, ಸ್ಥಳೀಯರಿಗೆ ಪದೇಪದೆ ಕಾಡುತ್ತಿರುವ ಅನಾರೋಗ್ಯ ಸಮಸ್ಯೆ ಹೀಗೆ ಸಮಸ್ಯೆಗಳ ಆಗರವಾಗಿ ಬೆಳೆದು ನಗರಾಡಳಿತಕ್ಕೂ ತಲೆನೋವಾಗಿ ಪರಿಣಮಿಸಿತ್ತು.ಈ ನಡುವೆ 2017ರಲ್ಲಿ ಒಮ್ಮೆ ಡಂಪಿಂಗ್ ಯಾರ್ಡ್‌ನ ಕಸದ ಒತ್ತಡದಿಂದ ಬೆಂಕಿಯೂ ತಗುಲಿತ್ತು.ಆದರೆ ಇದೀಗ ಘಟಕದಲ್ಲಿ ಹಲವು ಯೋಜನೆಯಲ್ಲಿ ಝೀರೋ ಲ್ಯಾಂಡ್‌ಫಿಲ್ ಸೈಟ್ ಮಾಡುವ ಗುರಿ ಹೊಂದಿದೆ.ಇದರ ಜೊತೆಗೆ ಪುತ್ತೂರು ರೋಟರಿ ಕ್ಲಬ್ ಈಸ್ಟ್‌ನ ಸ್ವಚ್ಛ ಭಾರತ್ ಟ್ರಸ್ಟ್ ವತಿಯಿಂದ ಬಯೋಗ್ಯಾಸ್ ಪ್ಲಾಂಟ್ ನಿರ್ಮಿಸಿ ತ್ಯಾಜ್ಯ ಮರುಬಳಕೆಯ ಮೂಲಕ ದೇಶಕ್ಕೆ ಮಾದರಿಯಾಗಿದೆ.

ಪ್ರಾಯೋಗಿಕ ಹಂತವಾಗಿ ಸಿಎನ್‌ಜಿ ಉತ್ಪಾದನೆ
ಪ್ರಸ್ತುತ ಘಟಕದಲ್ಲಿ ಪ್ರತೀ ದಿನ 350 ಕೆ.ಜಿ. ಸಿಎನ್‌ಜಿ ಉತ್ಪಾದನೆಯಾಗುತ್ತಿದೆ.ಪ್ರಾಯೋಗಿಕ ನೆಲೆಯಲ್ಲಿ ಉರಿಸಿ ಮುಗಿಸಲಾಗುತ್ತಿದೆ.ಅಧಿಕೃತ ಉತ್ಪಾದನೆ ಆರಂಭಗೊಂಡ ಬಳಿಕ ಟ್ರಸ್ಟ್‌ನವರು ಗ್ಯಾಸ್‌ನ್ನು ವಾಹನಗಳಿಗೆ ಸಿಎನ್‌ಜಿ ಇಂಧನವಾಗಿ ಮಾರಬಹುದು.ಪ್ರತೀ 1 ಕೆ.ಜಿ. ಅನಿಲಕ್ಕೆ 1 ರೂಪಾಯಿ ರಾಜಸ್ವವನ್ನು ಅವರು ನಗರಸಭೆಗೆ ಪಾವತಿಸಲಿದ್ದಾರೆ-
ಮಧು ಎಸ್. ಮನೋಹರ್, ಪೌರಾಯುಕ್ತರು, ಪುತ್ತೂರು ನಗರಸಭೆ.

ಪುತ್ತೂರಿಗೆ ಹೆಮ್ಮೆ ನಮ್ಮ ಪರಿಸರದ ತ್ಯಾಜ್ಯ ಬಳಸಿಕೊಂಡು ಬಯೋ ಸಿಎನ್‌ಜಿ ಘಟಕ ಸ್ಥಾಪಿಸುತ್ತಿರುವುದು ದೇಶದಲ್ಲೇ ಮೊದಲ ಬಾರಿ.ಇದು ಪುತ್ತೂರಿಗೆ ಹೆಮ್ಮೆ-
ಲೀಲಾವತಿ ಅಣ್ಣು ನಾಯ್ಕಅಧ್ಯಕ್ಷರು,ಬಾಲಚಂದ್ರ ಉಪಾಧ್ಯಕ್ಷರು ನಗರಸಭೆ ಪುತ್ತೂರು

10 ವರ್ಷಗಳ ಕನಸು ನನಸಾಗುತ್ತಿದೆ
ಕೃಷ್ಣನಾರಾಯಣ ಮುಳಿಯ ಅವರು ಈ ಕನಸಿಗೆ ಮೆಘಾ ರೂಪ ಕೊಟ್ಟು ಪುತ್ತೂರಿನಲ್ಲಿ ದೊಡ್ಡ ಮಟ್ಟದ ಘಟಕ ಸ್ಥಾಪನೆಗೆ ಮುಂದಾದರು.ನಗರಸಭೆ ಸಹಕಾರ ನೀಡಿದ ಕಾರಣ ಸಾಕಾರಗೊಂಡಿದ್ದು, 10 ವರ್ಷಗಳ ಕನಸು ನನಸಾಗುತ್ತಿದೆ.ಆರಂಭದಲ್ಲಿ ಪುರಸಭೆ ಅಧ್ಯಕ್ಷರಾಗಿದ್ದ ವಾಣಿಶ್ರೀಧರ್ ಬಳಿಕ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ನಗರಸಭೆಯ ಪ್ರಥಮ ಅಧ್ಯಕ್ಷರಾಗಿದ್ದ ಸಂದರ್ಭ ಘಟಕದ ಕುರಿತು ಪ್ರಸ್ತಾಪ ಆಗಿತ್ತು.ನಂತರ ಕೆ.ಜೀವಂಧರ್ ಜೈನ್ ಅವರ ಅವಽಯಲ್ಲಿ ಶಿಲಾನ್ಯಾಸ ಆಯಿತು.ಹೀಗೊಂದು ಘಟಕ ಸ್ಥಾಪನೆ ಆಗಬೇಕೆಂದು ಹಿಂದಿನ ಪುರಸಭೆ ಮುಖ್ಯಾಽಕಾರಿ ಸುಧಾಕರ್ ಹೆಚ್ಚಿನ ಮುತುವರ್ಜಿ ವಹಿಸಿದ್ದರು –
ಡಾ|ರಾಜೇಶ್ ಬೆಜ್ಜಂಗಳ,
ಘಟಕದ ಯೋಜನಾ ನಿರ್ದೇಶಕರು

ಪರಿಸರಕ್ಕೆ ಪೂರಕ
ಘಟಕ ಪರಿಸರಕ್ಕೆ ಪೂರಕ ಮತ್ತು ಆರ್ಥಿಕತೆಯನ್ನು ಹೆಚ್ಚಿಸುತ್ತದೆ.ಇದರಿಂದ ಡಿಸೇಲ್ ಆಮದು ಕಡಿಮೆ ಮಾಡಬಹುದು.ಪ್ರಸ್ತುತ ಪ್ರಾಯೋಗಿಕ ಸಿಎನ್‌ಜಿ ಉತ್ಪಾದನೆಯಾಗುತ್ತಿದ್ದು, ಸ್ಲರಿ ಕೂಡ ಸಿಗುತ್ತಿದೆ. ಶೀಘ್ರದಲ್ಲೇ ಕೇಂದ್ರ ಸರಕಾರದ ಪೆಟ್ರೋಲಿಯಂ ಆಂಡ್ ಎಕ್ಸ್‌ಪ್ಲೋಸಿವ್ ಸೇಫ್ಟಿ ಆರ್ಗನೈಸೇಶನ್ (ಪೆಸೋ) ತಜ್ಞರು ಬಂದು ಸಮಗ್ರ ಪರಿಶೀಲಿಸಿ ಪರವಾನಗಿ ನೀಡುತ್ತಾರೆ.ಅದಾದ ಬಳಿಕ ಬಯೋ ಸಿಎನ್‌ಜಿ ಘಟಕ ಅಧಿಕೃತ ಕಾರ್ಯಾರಂಭ ಮಾಡಲಿದೆ
-ಕೃಷ್ಣ ನಾರಾಯಣ ಮುಳಿಯ, ಅಧ್ಯಕ್ಷರು
ರೋಟರಿ ಕ್ಲಬ್ ಪುತ್ತೂರು ಈಸ್ಟ್- ಸ್ವಚ್ಛ ಭಾರತ ಟ್ರಸ್ಟ್

ನಾನು ಪ್ರಭಾರ ಅಧ್ಯಕ್ಷನಾಗಿದ್ದ ಸಂದರ್ಭ ಘಟಕದ ಕುರಿತು ಪ್ರಸ್ತಾಪ ಬಂದಾಗ ಅದಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಿದ್ದೇವೆ.ಬಳಿಕ ನಮ್ಮ ಆಡಳಿತ ಇರಲಿಲ್ಲ.ಮತ್ತೆ ಪುನಃ ನಗರಸಭೆ ಅಧ್ಯಕ್ಷನಾಗಿ ಆಯ್ಕೆಯಾದಾಗ ಇದಕ್ಕೆ ಮತ್ತೆ ಚಾಲನೆ ನೀಡಿ 2021ರಲ್ಲಿ ಶಿಲಾನ್ಯಾಸವನ್ನೂ ಮಾಡಿದ್ದೆವು.ರೋಟರಿ ಸಂಸ್ಥೆಯಿಂದಲೇ ಇದು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣನಾರಾಯಣ ಮುಳಿಯ ಮತ್ತು ರಾಜೇಶ್ ಬೆಜ್ಜಂಗಳ ಅವರ ಪಾತ್ರ ಬಹಳ ಮುಖ್ಯವಾಗಿದೆ-
ಕೆ.ಜೀವಂಧರ್ ಜೈನ್, ನಿಕಟಪೂರ್ವ ಅಧ್ಯಕ್ಷರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here