ಹಿರೇಬಂಡಾಡಿ: ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ದ.ಕ., ಪಶು ಆಸ್ಪತ್ರೆ ಉಪ್ಪಿನಂಗಡಿ, ಗ್ರಾಮ ಪಂಚಾಯಿತಿ ಹಿರೇಬಂಡಾಡಿ ಮತ್ತು ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇದರ ವನಸಿರಿ ಇಕೋ ಕ್ಲಬ್ ಆಶ್ರಯದಲ್ಲಿ ಹುಚ್ಚುನಾಯಿ(ರೇಬಿಸ್ ರೋಗ)ಕಡಿತ ಮತ್ತು ಪ್ರಾಣಿಜನ್ಯ ರೋಗಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಸೆ.19ರಂದು ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಉಪ್ಪಿನಂಗಡಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಉಷಾ ಅವರು ಹುಚ್ಚು ನಾಯಿ ಕಡಿತ ಮತ್ತು ಪ್ರಾಣಿಜನ್ಯ ರೋಗಗಳ ಬಗ್ಗೆ ಮಾಹಿತಿ ನೀಡಿದರು. ಹುಚ್ಚು ನಾಯಿ ಕಡಿತದಿಂದ ಹರಡುವ ರೇಬಿಸ್ ರೋಗ ಮಾರಣಾಂತಿಕವಾಗಿದ್ದು, ಆದ್ದರಿಂದ ಜನಜಾಗೃತಿ ವಹಿಸುವುದು ಮುಖ್ಯ. ಸಾಕು ನಾಯಿಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಬೀದಿ ನಾಯಿಗಳ ಚಲನವಲನ ಗಮನಿಸಬೇಕು. ನಾಯಿ ಕಚ್ಚುವುದು, ಗಾಯವನ್ನು ನೆಕ್ಕುವುದು, ತರಚುವುದು ಕೂಡ ಅಪಾಯಕಾರಿಯಾಗಿ ಸಂಭವಿಸಬಹುದು. ಆದ್ದರಿಂದ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು. ನಾಯಿ ಕಚ್ಚಿದ ಅಥವಾ ತರಚಿದ ಗಾಯಗಳು ಉಂಟಾದಲ್ಲಿ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆ ಲಸಿಕೆಯನ್ನು ಕಂಡು ಹಿಡಿದ ವಿಜ್ಞಾನಿ ಲೂಯಿಸ್ ಪಾಶ್ಚರ್ ಅವರ ಪುಣ್ಯತಿಥಿಯ ನೆನಪಿನಾರ್ಥವಾಗಿ ಸೆ.೨೮ನ್ನು ವಿಶ್ವ ರೇಬಿಸ್ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಉಪ್ಪಿನಂಗಡಿ ಪಶು ಆಸ್ಪತ್ರೆಯ ಪಶು ಅಧಿಕಾರಿ ನಾಗಶಯನ ಭಟ್ ಅವರು ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕ ಕಾರ್ಯಕ್ರಮ ಶಿಬಿರ ಆಯೋಜಿಸುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಈ ಮೂಲಕ ರೇಬಿಸ್ ರೋಗ ಮುಕ್ತ ಗ್ರಾಮವನ್ನಾಗಿ ಮಾಡಲು ಎಲ್ಲರೂ ಪಣತೊಡೋಣ ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯ ಗುರು ಶ್ರೀಧರ ಭಟ್ ಕೆ.,ರವರು ಮಾತನಾಡಿ ಸಾಕು ಪ್ರಾಣಿಗಳಿಗೆ ಕಾಲಕಾಲಕ್ಕೆ ಲಸಿಕೆಗಳನ್ನು ಹಾಕಿಸುವುದರ ಮೂಲಕ, ಸಾಕು ಪ್ರಾಣಿಗಳಿಂದ ಮನುಷ್ಯನಿಗೆ ಬರಬಹುದಾದ ರೋಗಗಳನ್ನು ತಡೆಯಬಹುದು, ಅಲ್ಲದೆ ಅದರಿಂದಾಗುವ ತೊಂದರೆಗಳನ್ನು ನಿವಾರಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಪಶು ಆಸ್ಪತ್ರೆಯ ಸಹಾಯಕರಾದ ಅಭಿಲಾಶ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಜ್ಞಾನ ಶಿಕ್ಷಕ ಮನೋಹರ್ ನಿರೂಪಿಸಿ, ಸಮಾಜ ವಿಜ್ಞಾನ ಶಿಕ್ಷಕಿ ಲಲಿತ ಕೆ., ವಂದಿಸಿದರು. ಶಾಲಾ ಶಿಕ್ಷಕಿಯರಾದ ಉಷಾಕಿರಣ, ಮಲ್ಲಿಕಾ ಐ., ಆರತಿ ವೈ.ಡಿ. ಸಹಕರಿಸಿದರು.