ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಿಲಾಶಾಸನ ಬೆಳಕಿಗೆ

0

ಪುತ್ತೂರು: ಪುತ್ತೂರು ತಾಲೂಕು ಉಪ್ಪಿನಂಗಡಿ ಬಳಿಯ ಬಜತ್ತೂರು ಗ್ರಾಮದ ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಾಲಯದ ಪ್ರಾಂಗಣದಲ್ಲಿ 37 ಇಂಚು ಎತ್ತರ, 21 ಇಂಚು ಅಗಲ ಹಾಗೂ 5 ಇಂಚು ದಪ್ಪದ ಒಂದು ಸುಂದರ ಶಿಲಾಫಲಕದ ಮೇಲೆ ಈ ಶಾಸನವು ಕಂಡುಬಂದಿದೆ. ಇದರ ಪ್ರಾರಂಭದ 27 ಪಂಕ್ತಿಗಳನ್ನು ಮುಂಭಾಗದಲ್ಲಿಯೂ, ಉಳಿದ 9 ಪಂಕ್ತಿಗಳನ್ನು ಹಿಂಭಾಗದಲ್ಲಿಯೂ ಬರೆಯಲಾಗಿದೆ. ಇದರ ಶಿರೋಭಾಗದ ಮಧ್ಯದಲ್ಲಿ ಶಿವಲಿಂಗ, ಎಡಬಲಗಳಲ್ಲಿ ಸೂರ್ಯ-ಚಂದ್ರರ ಹಾಗೂ ಹಿಂಭಾಗದಲ್ಲಿ ಸೆಟೆದು ನಿಂತಿರುವ ಶಾರ್ದೂಲ ಮೃಗದ ಆಕೃತಿಗಳಿವೆ. ಶಿವನ ಕೃಪೆಯಿಂದ ಸೂರ್ಯ-ಚಂದ್ರರಿರುವ ತನಕ ಈ ಶಾಸನವು ಉಳಿದು, ಅದರ ಉದ್ದೇಶಗಳು ಈಡೇರಿಸಲ್ಪಡಲಿ ಎಂಬುದು ಇದರ ಆಶಯ. ಇದಕ್ಕೆ ಶಾರ್ದೂಲದಂತಹ ಪ್ರಬಲ ಶಕ್ತಿಯ ಹಿಂಬಲವಿದೆ ಎಂಬುದು ಇದರ ಸೂಚನೆ.


ಇಂದು ಶಕ 1644 ಸಿಂಹ ಮಾಸ 21ನೇ ದಿನ ಅಂದರೆ 1722ನೇ ಇಸವಿ ಸೆಪ್ಟಂಬರ್ ತಿಂಗಳ 7ನೇ ತಾರೀಕು ಶುಕ್ರವಾರ ಬರೆಯಲ್ಪಟ್ಟಿತು. ಆಗ ಗುರುಗ್ರಹವು ತುಲಾರಾಶಿಯಲ್ಲಿತ್ತು ಎಂಬುದನ್ನು ಇದು ತಿಳಿಸುತ್ತದೆ. ಈ ಶಾಸನದಲ್ಲಿ ಹೇಳಿರುವಂತೆ ಗಡಿಯಂಕ ಸಿಂಗ ಎಂಬ ಬಿರುದಾಂಕಿತರಾದ ಕುಜುಂಬ ಸೆಟ್ಟಿಯವರ ಸಹಮತದಿಂದ ಮಾಣಿಕ್ಕಳ ಎಂಬ ಊರಿನ ಡೊಂಬಳಿಯನ್ನು ಆಳುವ ನಾರಣ ಶೆಟ್ಟಿ ಎಂಬವರು ಉದಾರವಾಗಿ ಮಾಡಿದ ಧರ್ಮವನ್ನು ಇದು ತಿಳಿಸುತ್ತದೆ. ಅದರ ಅನುಸಾರ ಬಲ್ಲಾಳರು ಹೊಸದಾಗಿ ಖರೀದಿಸಿದ ನಾಯಿಲ ಎಂಬಲ್ಲಿಯ ಸ್ಥಳದ ಉತ್ಪತ್ತಿಯಿಂದ ಮುದ್ಯದ ಈ (ಶ್ರೀ ಪಂಚಲಿಂಗೇಶ್ವರ) ದೇವಸ್ಥಾನದಲ್ಲಿ ಸೋಣ ತಿಂಗಳಲ್ಲಿ ಪ್ರತಿದಿನ ಈ ದೇವಾಲಯಕ್ಕೆ ಬರುವ ಬ್ರಾಹ್ಮಣರಿಗೆ ಆಚಂದಾರ್ಕವಾಗಿ ಭೋಜನವನ್ನು ಒದಗಿಸಬೇಕು. ಸುಮಂಗಲಿ ಸ್ತ್ರೀಯರನ್ನು ಗೌರವಿಸಬೇಕು. ಧರ್ಮ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಇದನ್ನು ಮಾಡದರು ಅಥವಾ ಈ ಶಾಸನದ ಆಶಯವನ್ನು ವಿರೋಧಿಸುವವರು ಒಂದು ಸಾವಿರ ಕಪಿಲೆದನಗಳನ್ನು, ಮಗು, ತಂದೆ, ತಾಯಿಯವರನ್ನು ವಾರಣಾಸಿಯಲ್ಲಿ ಕೊಂದ ಪಾಪಕ್ಕೆ ಹೋಗುವರು ಎಂಬ ಎಚ್ಚರಿಕೆಯನ್ನು ಇಲ್ಲಿ ಕೊಡಲಾಗಿದೆ. ಇದನ್ನು ಕನ್ನೋರ್ಗದ ಕವಿ ಗಜಾರಿ ಎಂಬ ಬಿರುದಿನ ಶ್ಯಾನುಭಾಗರ ಮಗ ಕೇಶವನಾಥ ಎಂಬವರು ಬರೆದರು. ಬೆಲ್ಲಾರೆಯ ಗೂರಿ ಗೌಡ ಮತ್ತು ನಾರಣ ಶೆಟ್ಟಿ ಇದನ್ನು ಇಲ್ಲಿ ಸ್ಥಾಪಿಸಿದರು ಎಂಬುದನ್ನು ಈ ಶಾಸನವು ತಿಳಿಸುತ್ತದೆ.


ಸ್ಪಷ್ಟ ಅಕ್ಷರಗಳಲ್ಲಿ ಬರೆದ ಈ ಶಾಸನವು ಬಹಳ ಪ್ರಾದೇಶಿಕ ಮಹತ್ವವನ್ನು ಪಡೆದಿದೆ. ಇದರಲ್ಲಿ ಅಂದಿನ ಚಕ್ರವರ್ತಿ, ರಾಜ-ಮಹಾರಾಜರ ಉಲ್ಲೇಖವಿಲ್ಲ. ಸ್ಥಳೀಯ ಜನರೇ ಪರಸ್ಪರ ಒಂದು ಒಪ್ಪಂದಕ್ಕೆ ಬಂದು ಈ ದೇವಾಲಯದಲ್ಲಿ ಸಂತರ್ಪಣೆಯ ವ್ಯವಸ್ಥೆಯನ್ನು ಮಾಡಿದ್ದಾರೆ. ಅವರ ಪರಸ್ಪರ ಸಹಕಾರ ಮನೋಭಾಗ, ಧರ್ಮ-ಪರಂಪರೆಯ ಮೇಲಿನ ಶ್ರದ್ಧೆಗಳು ಇಲ್ಲಿ ಪ್ರತಿಬಿಂಬಿತವಾಗಿವೆ.
ಶಾಸನಾದಿ ಪ್ರಾಚೀನ ದಾಖಲೆಗಳ ಅಧ್ಯಯನ ಮತ್ತು ಸಂರಕ್ಷಣೆಯ ಯೋಜನೆಯನ್ನು ಹಾಕಿಕೊಂಡಿರುವ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ ನಾಯಕರ ಉಪಸ್ಥಿತಿಯಲ್ಲಿ ತುಳು ಭಾಷಾ ವಿದ್ವಾಂಸೆ ಶ್ರೀಮತಿ ವಿದ್ಯಾಶ್ರೀಯ ಸಹಕಾರದಲ್ಲಿ ಹಿರಿಯ ಶಾಸನ ತಜ್ಞರಾದ ಡಾ|| ವೈ ಉಮಾನಾಥ ಶೆಣೈಯವರು ಇದನ್ನು ಅಧ್ಯಯನ ಮಾಡಿ ಬೆಳಕಿಗೆ ತಂದರು.

ಡಾ|| ವೈ ಉಮಾನಾಥ ಶೆಣೈ
ರಾಮನಗರ ಪುತ್ತೂರು
ಮೊಬೈಲ್:9901302217

LEAVE A REPLY

Please enter your comment!
Please enter your name here