ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಉಗಮದ ಕಾರಣಕರ್ತ, ಮಾನವತಾವಾದಿ ಪಿ.ಬಿ ಡೆಸಾ ನಿಧನ

0

ಪುತ್ತೂರು:‌ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಇದರ ಉಗಮದ ಕಾರಣಕರ್ತ, ಗೌರವ ಸಲಹೆಗಾರ, ಮಾನವತಾವಾದಿಯಾಗಿರುವ ಪಿ.ಬಿ ಡೆಸಾ(83ವ.) ಮಂಗಳೂರುರವರು ಸೆ.24 ರಂದು ಮುಂಜಾನೆ ನಿಧನ ಹೊಂದಿದರು.

ಪುತ್ತೂರಿನಲ್ಲಿ ಸಮಾನ ಮನಸ್ಕ ಕ್ರಿಶ್ಚಿಯನ್ನರು ಸಂಘಟಿತರಾಗಬೇಕು, ಅನ್ಯಾಯದ ವಿರುದ್ಧ ನ್ಯಾಯಯುತವಾಗಿ ಹೋರಾಟ ಮಾಡುವುದಕ್ಕೆ ಕ್ರಿಶ್ಚಿಯನ್ಸ್ ಯೂನಿಯನ್ ಅಗತ್ಯವಿದೆ ಎಂದು ಮನಗಂಡು ಸುಮಾರು ಇಪ್ಪತ್ತು ವರ್ಷದ ಹಿಂದೆ ಪುತ್ತೂರಿನಲ್ಲಿ ಸಂಘಟನೆಯನ್ನು ಸ್ಥಾಪಿಸಲು ಕಾರಣಕರ್ತರಾದವರು ಮಾತ್ರವಲ್ಲ ಯೂನಿಯನ್ ನ ಉದ್ಘಾಟನೆಯನ್ನು ನೆರವೇರಿಸಿ ಚಾಲನೆ ನೀಡಿದ್ದರು. ಓರ್ವ ಮಾನವತಾವಾದಿಯಾಗಿ, ಮಾನವ ಹಕ್ಕುಗಳ ಬಗ್ಗೆ ನಿರಂತರ ಹೋರಾಟ ಮಾಡಿಕೊಂಡು ಬಂದವರಾಗಿದ್ದಾರೆ. 

ದೇಹ ಕೆಎಂಸಿಗೆ ದಾನ:
ಪಿ.ಬಿ ಡೆಸಾರವರು ತಮ್ಮ ಜೀವನದಲ್ಲಿ ಸಾಮಾಜಿಕ ಚಟುವಟಿಕೆ ಮತ್ತು ಇತರರಿಗೆ ಸಹಾಯ ಮಾಡುವ ಬದ್ಧತೆಗೆ ಹೆಸರುವಾಸಿಯಾಗಿದ್ದರು. ತನ್ನ ದೇಹವು ಮಣ್ಣಲ್ಲಿ ಮಣ್ಣಾಗಿ ಹೋಗಬಾರದು, ತನ್ನ ಮರಣಾ ನಂತರವೂ ತನ್ನ ದೇಹ ಸಮಾಜಕ್ಕೆ ಉಪಯುಕ್ತವಾಗಬೇಕು. ತನ್ನ ದೇಹವನ್ನು ಯಾರಿಗೆ ಬೇಕಾದರೂ ವೀಕ್ಷಣೆಗೆ ಅವಕಾಶ ಮಾಡಿ ಕೊಡಬೇಕು ಜೊತೆಗೆ ದೇಹವನ್ನು ಕೆಎಂಸಿ ಆಸ್ಪತ್ರೆಗೆ ದಾನ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಪಿ.ಬಿ ಡೆಸಾರವರು ಮೊದಲೇ ಕರಾರು ಮಾಡಿಕೊಂಡಿದ್ದರು.ಈ ಮನೋಭಾವಕ್ಕೆ ನಿಷ್ಠರಾಗಿ ಅವರು ಮಾನವೀಯತೆಯ ಸುಧಾರಣೆಗೆ ಕೊಡುಗೆ ನೀಡುವ ಆಶಯದೊಂದಿಗೆ ವೈದ್ಯಕೀಯ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ತಮ್ಮ ದೇಹವನ್ನು ದಾನ ಮಾಡುವ ನಿಸ್ವಾರ್ಥ ನಿರ್ಧಾರವನ್ನು ಮಾಡಿದ್ದಾರೆ.

ಜೊತೆಗೆ ಪಿ.ಬಿ ಡೆಸಾರವರ ಆಶಯಗಳಿಗೆ ಅನುಗುಣವಾಗಿ, ಯಾವುದೇ ಧಾರ್ಮಿಕ ಆಚರಣೆಗಳು, ಹೂವುಗಳು ಅಥವಾ ಹೂಗುಚ್ಛಗಳು ಇರುವುದಿಲ್ಲ. ಬದಲಾಗಿ ಅಂತಹ ಸ್ಮರಣಾರ್ಥ ಟೋಕನ್‌ಗಳನ್ನು ಕಳುಹಿಸುವವರಿಗೆ ಸಾಮಾಜಿಕ ಉದ್ದೇಶಕ್ಕೆ ದೇಣಿಗೆ ನೀಡಲು ಪ್ರೋತ್ಸಾಹಿಸಲಾಗುತ್ತದೆ. ವೀಕ್ಷಣೆಯ ಸಮಯದಲ್ಲಿ ದೇಣಿಗೆ ಪೆಟ್ಟಿಗೆಯನ್ನು ಇರಿಸಲಾಗುತ್ತದೆ ಮತ್ತು ಕೊಡುಗೆಯನ್ನು ಮಿಷನರೀಸ್ ಆಫ್ ಚಾರಿಟಿ, ಮದರ್ ತೆರೇಸಾ ಹೋಮ್‌ಗೆ ರವಾನಿಸಲಾಗುತ್ತದೆ.

ಸೆ.25 ರಂದು ವೀಕ್ಷಣೆಗೆ ಅವಕಾಶ..
ಮೃತ ಪಿ.ಬಿ ಡೆಸಾರವರ ಮೃತದೇಹದ ವೀಕ್ಷಣೆಯನ್ನು ಸೆ. 25 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 11.30 ವರೆಗೆ ಮಂಗಳೂರಿನ ರೋಶನಿ ನಿಲಯದ ಎದುರಿನ ಎನ್ಫೋರ್ಸ್ ಪಾವ್ಲಿನ್ ಇಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಕುಟುಂಬ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರಿಶ್ಚಿಯನ್ಸ್ ಯೂನಿಯನ್ ಸಂತಾಪ..
ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಇದರ ಸ್ಥಾಪನೆಗೆ ಕಾರಣಕರ್ತರಾದ ಪಿ.ಬಿ ಡೆಸಾರವರು ಯೂನಿಯನ್ ಇದರ ಏಳಿಗೆಗೆ ಸದಾ ಮಾರ್ಗದರ್ಶನ ನೀಡುತ್ತಾ ಬಂದಿದ್ದು ಇದೀಗ ಅವರ ಅಗಲಿಕೆ ನಮಗೆ ಬಹಳ ನೋವನ್ನುಂಟು ಮಾಡಿದೆ ಮಾತ್ರವಲ್ಲ ಅವರ ಮೃತ ದೇಹವನ್ನು ಕೆಎಂಸಿ ಆಸ್ಪತ್ರೆಗೆ ದಾನ ಮಾಡಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಪಿ.ಬಿ ಡೆಸಾರವರ ಅಗಲಿಕೆಗೆ ಕ್ರಿಶ್ಚಿಯನ್ಸ್ ಯೂನಿಯನ್ ಸಂತಾಪ ವ್ಯಕ್ತಪಡಿಸುತ್ತದೆ ಎಂದು ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ರವರು ಪತ್ರಿಕೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here