1.74 ಲಕ್ಷ ರೂ.ನಿವ್ವಳ ಲಾಭ; ಪ್ರತಿ ಲೀ.ಹಾಲಿಗೆ 38 ಪೈಸೆ ಬೋನಸ್ ಘೋಷಣೆ
ನೆಲ್ಯಾಡಿ: ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ.23ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೇಶವ ಗೌಡ ಅಲೆಕ್ಕಿ ಅವರು ಮಾತನಾಡಿ, ಸಂಘವು 2023-24ನೇ ಸಾಲಿನಲ್ಲಿ 1,74,651.54 ರೂ.ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 38 ಪೈಸೆ ಬೋನಸ್ ನೀಡಲಾಗುವುದು ಎಂದು ಘೋಷಣೆ ಮಾಡಿದರು.
ಅತಿಥಿಯಾಗಿದ್ದ ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಪಿ.ಕೆ.ಅವರು ಮಾತನಾಡಿ, ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ದೊರೆಯುವ ಸವಲತ್ತು ಮತ್ತು ವಿಮಾ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
2023-24ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕೆ.ಸಿ.ವರ್ಗೀಸ್ ನೇರ್ಲ (ಪ್ರಥಮ) ಹಾಗೂ ಕುಶಾಲಪ್ಪ ಗೌಡ ಕುಡಾಲ (ದ್ವಿತೀಯ) ಬಹುಮಾನ ಪಡೆದುಕೊಂಡರು. ಸಂಘದ ಉಪಾಧ್ಯಕ್ಷರಾದ ಅಣ್ಣಿ ನಾಯ್ಕ, ನಿರ್ದೇಶಕರಾದ ಶಾಂತಾರಾಮ, ರಾಧಾಕೃಷ್ಣ ಕೆ., ಕೆ.ಮಹಾವೀರ ಜೈನ್, ವರ್ಗೀಸ್ ಅಬ್ರಹಾಂ, ಆನಂದ ಶೆಟ್ಟಿ, ಮೋಹನ್‌ದಾಸ್ ಬಿ., ಸಜಿ ಪಿ.ಜಿ., ವಿ.ಯಂ.ಮ್ಯಾತ್ಯು, ಜೋಗಿ ಮುಗೇರ, ವಿಜಯ, ಕಮಲಾಕ್ಷಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರವೀಣ್‌ಕುಮಾರ್ ವರದಿ ಮಂಡಿಸಿದರು. ರಾಧಾಕೃಷ್ಣ ಕೆ.,ಸ್ವಾಗತಿಸಿ, ಕೆ.ಮಹಾವೀರ ಜೈನ್ ವಂದಿಸಿದರು. ಶಾಂತರಾಮ ಪ್ರಾರ್ಥಿಸಿದರು. ಹಾಲು ಪರೀಕ್ಷಕ ತೇಜಸ್, ಸಹಾಯಕ ತನಿಯ ಸಹಕರಿಸಿದರು.