- ಪತ್ನಿ, ಮಗ ಸಹಿತ ಮೂವರಿಗೆ ಗಾಯ
ರಾಮಕುಂಜ: ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಆಂಬುಲೆನ್ಸ್ ಮಂಗಳೂರು ಪಡೀಲು ಸಮೀಪ ಪಲ್ಟಿಯಾಗಿ ಆಂಬುಲೆನ್ಸ್‌ನಲ್ಲಿದ್ದ ರೋಗಿ, ಹಳೆನೇರೆಂಕಿ ಗ್ರಾಮದ ರಾಮಜಾಲು ನಿವಾಸಿ ದಾಸಪ್ಪ ರೈ(73ವ.)ರವರು ಸ್ಥಳದಲ್ಲೇ ಮೃತಪಟ್ಟು ಅವರ ಪತ್ನಿ, ಮಗ ಹಾಗೂ ಸಂಬಂಧಿಕ ಯುವಕನೋರ್ವ ಗಾಯಗೊಂಡ ಘಟನೆ ಸೆ.25ರಂದು ಮುಂಜಾನೆ ಸಂಭವಿಸಿದೆ.
ಹಳೆನೇರೆಂಕಿ ಗ್ರಾಮದ ಕದ್ರ ನಿವಾಸಿ, ಕೂಲಿಕಾರ್ಮಿಕ ದಾಸಪ್ಪ ರೈಯವರಿಗೆ ಸೆ.24ರಂದು ತಡರಾತ್ರಿ 1.30ರ ವೇಳಗೆ ಸ್ಟ್ರೋಕ್ ಆಗಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆ ಸಮೀಪದ ನಿವಾಸಿ, ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮೇನೇಜರ್ ಆಗಿರುವ ರಮೇಶ್ ರೈಯವರು ತನ್ನ ಕಾರಿನಲ್ಲಿ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾಸಪ್ಪ ರೈ ಅವರನ್ನು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಇನ್ನೋವಾ ಆಂಬುಲೆನ್ಸ್ನಲ್ಲಿ ಪುತ್ತೂರಿನಿಂದ ಕರೆದೊಯ್ಯಲಾಗಿತ್ತು.
ಮುಂಜಾನೆ 4 ಗಂಟೆ ವೇಳೆಗೆ ಆಂಬುಲೆನ್ಸ್ ಫಸ್ಟ್ ನ್ಯೂರೋ ಆಸ್ಪತ್ರೆಯ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ವಿದ್ಯುತ್ ಕಂಬಕ್ಕೆ ಗುದ್ದಿದೆ. ಘಟನೆಯಲ್ಲಿ ಆಂಬುಲೆನ್ಸ್‌ನಲ್ಲಿದ್ದ ರೋಗಿ ದಾಸಪ್ಪ ರೈ ಸ್ಥಳದಲ್ಲೇ ಮೃತಪಟ್ಟಿದ್ದು ಅವರ ಪತ್ನಿ ನಳಿನಿ ರೈ(54ವ.), ಪುತ್ರ ಹರ್ಷಿತ್(33 ವ.)ಹಾಗೂ ಸಂಬಂಧಿಕ ಯುವಕ ಮನೀಷ್(24ವ.)ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಅಪಘಾತ ಸಂಭವಿಸಿದ ಈ ಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ಆಂಬುಲೆನ್ಸ್ ಸ್ಕಿಡ್ ಆಗಿ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಉರುಳಿಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ.