ಪುತ್ತೂರು: ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆದ ಅಖಿಲ ಹವ್ಯಕ ಮಹಾಸಭೆಯ 81ನೇ ವರ್ಷದ ವಾರ್ಷಿಕ ಸಭೆಯಲ್ಲಿ 10ನೇ ಬಾರಿಗೆ ಇವರು ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಆರ್.ಎಂ.ಹೆಗಡೆ ಬಾಳೆಸರ, ಶ್ರೀಧರ ಜೆ.ಭಟ್ಟ ಕೆಕ್ಕಾರು, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ.ವೇಣು ವಿಘ್ನೇಶ ಸಂಪ, ಕಾರ್ಯದರ್ಶಿಯಾಗಿ ಆದಿತ್ಯ ಹೆಗಡೆ ಕಲಗಾರು , ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್.ಭಟ್ ಯಲಹಂಕರವರು ಆಯ್ಕೆಯಾದರು.
ಕಬಕ ಗ್ರಾಮದ ಕಜೆ ನಿವಾಸಿಯಾದ ಡಾ.ಗಿರಿಧರ ಕಜೆ ಬೆಂಗಳೂರಿನ ರಾಜಾಜಿನಗರದ ಕಾರ್ಡ್‌ರೋಡ್‌ನಲ್ಲಿರುವ ಪ್ರಶಾಂತಿ ಆಯುರ್ವೇದಿಕ್ ಸೆಂಟರ್‌ನ ಮುಖ್ಯ ವೈದ್ಯರಾಗಿದ್ದಾರೆ. ಇತ್ತೀಚೆಗೆ ಆಯುಷ್ ಟಿವಿ’ಯವರಿಂದ ಜೀವಮಾನ ಸಾಧನಾ ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಇವರು ಪುತ್ತೂರಿನ ಡಾ.ಶಶಿಧರ ಕಜೆರವರ ಸಹೋದರರಾಗಿದ್ದಾರೆ.
ಡಿ.27ರಿಂದ 29 ತೃತೀಯ ವಿಶ್ವ ಹವ್ಯಕ ಸಮ್ಮೇಳನ
ಮಲ್ಲೇಶ್ವರದಲ್ಲಿ ನಡೆದ ಹವ್ಯಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಗಿರಿಧರ ಕಜೆ ಹವ್ಯಕ ಮಹಾಸಭೆ ವತಿಯಿಂದ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಡಿಸೆಂಬರ್ 27ರಿಂದ 29ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. 81 ವರ್ಷ ಸಹಸ್ರ ಚಂದ್ರ ದರ್ಶನದ ಸಂಧಿ ಕಾಲ. ಹವ್ಯಕ ಮಹಾಸಭೆ ಈ ಪರ್ವಕಾಲಕ್ಕೆ ಹೆಜ್ಜೆ ಹಾಕುತ್ತಿದ್ದು ಈ ಸಂದರ್ಭದಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಹವ್ಯಕ ಸಮುದಾಯದ ವೈಶಿಷ್ಟ್ಯವನ್ನು ಜಗತ್ತಿಗೆ ತೆರೆದಿಡುವ ಕಾರ್ಯವಾಗಿದೆ.
ಶ್ರೀರಾಮಚಂದ್ರಾಪುರ ಮಠ, ಶ್ರೀಸ್ವರ್ಣವಲ್ಲಿ ಮಠ ಹಾಗೂ ಶ್ರೀಮನ್ನೆಲಮಾವಿನಮಠಗಳ ಯತಿಗಳು ಒಂದೇ ವೇದಿಕೆಯಲ್ಲಿ ಸೇರಲಿದ್ದಾರೆ. ಈ ಕಾರ್ಯಕ್ರಮ ಕೇವಲ ಹವ್ಯಕರಿಗೆ ಮಾತ್ರ ಸೀಮಿತವಾಗಿರದೇ ಎಲ್ಲಾ ಸಮುದಾಯದವರಿಗೂ ಪಾಲ್ಗೊಳ್ಳಲು ಮುಕ್ತ ಅವಕಾಶವಿರಲಿದೆ ಎಂದರು.