50 ಲಕ್ಷ ರೂಪಾಯಿಗಳ ದೇಣಿಗೆಯ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಪುತ್ತೂರು: ಹಿಂದೂ ಸಮಾಜವನ್ನು ಕಾಡುತ್ತಿರುವ ಪಿಡುಗುಗಳಲ್ಲಿ ಮತಾಂತರವೂ ಒಂದು. ಈ ಮತಾಂತರದ ವಿರುದ್ಧ ಅನೇಕ ಸಂಘಟನೆಗಳು, ಸಂಘ – ಸಂಸ್ಥೆಗಳು ಹೋರಾಟ ನಡೆಸುತ್ತಿವೆ. ಈ ನಡುವೆ ತಿರುವನಂತಪುರದ ಆರ್ಷ ವಿದ್ಯಾ ಸಮಾಜ ಮತಾಂತರಗೊಂಡು, ಶೋಷಣೆಗೊಳಗಾದ ಹಿಂದೂ ಯುವತಿಯರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಕಾರ್ಯಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡಿದೆ. ಇದುವರೆಗೆ ಸುಮಾರು ಎಂಟು ಸಾವಿರ ಮಂದಿ ಹಿಂದೂ ಯುವತಿಯರನ್ನು ಪುನಃ ಮಾತೃಧರ್ಮಕ್ಕೆ ಮರಳಿಸಿದ ಹೆಗ್ಗಳಿಗೆ ಆರ್ಷ ವಿದ್ಯಾ ಸಮಾಜಕ್ಕೆ ಸಲ್ಲುತ್ತದೆ.
ಆರ್ಷ ವಿದ್ಯಾ ಸಮಾಜದ ಈ ಕಾರ್ಯವನ್ನು ಗುರುತಿಸಿ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆರ್ಷ ವಿದ್ಯಾ ಸಮಾಜದ ಹಿಂದೂ ಹಿತರಕ್ಷಣಾ ಕಾರ್ಯಕ್ಕೆ ಬೆಂಬಲವಾಗಿ 50 ಲಕ್ಷ ರೂಪಾಯಿಗಳನ್ನು ನೀಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಆದರೆ ಆರ್ಷ ವಿದ್ಯಾ ಸಮಾಜದ ಇಂತಹ ಕಾರ್ಯಗಳನ್ನು ಶೃಂಗೇರಿ ಪೀಠದ ಗಮನಕ್ಕೆ ತಂದು, ಜಗದ್ಗುರುಗಳ ಆಶೀರ್ವಾದ ರೂಪದ ಮೊತ್ತ ದೊರಕುವಲ್ಲಿ ಕಾರಣೀಭೂತರಾದವರು ಪುತ್ತೂರಿನ ಒಬ್ಬರು ವ್ಯಕ್ತಿ ಎಂಬುದು ಗಮನಾರ್ಹ.
ಹೌದು, ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಬ್ರಹ್ಮಣ್ಯ ನಟ್ಟೋಜರೇ ಆ ವ್ಯಕ್ತಿ! ಸುಬ್ರಹ್ಮಣ್ಯ ನಟ್ಟೋಜರು ಕೆಲವು ಸಮಯದ ಹಿಂದೆ ತಿರುವನಂತಪುರದ ಆರ್ಷ ವಿದ್ಯಾ ಸಮಾಜದ ಕಾರ್ಯಗಳ ಬಗೆಗೆ ತಿಳಿದುಕೊಂಡು, ತಿರುವನಂತಪುರ ಆರ್ಷ ವಿದ್ಯಾ ಸಮಾಜದ ಕೇಂದ್ರಕ್ಕೆ ಭೇಟಿ ನೀಡಿ, ಅದು ಸದ್ದಿಲ್ಲದೆ ಹಿಂದೂ ಧರ್ಮ ಸಂರಕ್ಷಣಾ ಕಾರ್ಯದಲ್ಲಿ ತೊಡಗಿರುವುದನ್ನು ಕಂಡು ಸ್ವತಃ ದೊಡ್ಡ ಮೊತ್ತದ ದೇಣಿಗೆಯೊಂದನ್ನು ಸ್ಥಳದಲ್ಲೇ ನೀಡಿದರು!
ಶೃಂಗೇರಿ ಜಗದ್ಗುರುಗಳ ಭೇಟಿ :
ಶೃಂಗೇರಿ ಪೀಠ ಹಿಂದೂ ಧರ್ಮದ ಏಳಿಗೆ ಹಾಗೂ ಧರ್ಮ ಪ್ರಸಾರದ ಕಾಯಕದಲ್ಲಿ ತೊಡಗಿರುವುದು ಮಾತ್ರವಲ್ಲದೆ ಧರ್ಮ ರಕ್ಷಣಾ ಕಾರ್ಯಚಟುವಟಿಕೆಗಳಿಗೆ ಬೆಂಬಲವಾಗಿ ನಿಲ್ಲುವುದನ್ನು ಅರಿತ ಸುಬ್ರಹ್ಮಣ್ಯ ನಟ್ಟೋಜರು ಆರ್ಷ ವಿದ್ಯಾ ಸಮಾಜದ ಮುಖ್ಯಸ್ಥರಾದ ಆಚಾರ್ಯ ಮನೋಜ್ ಜಿ ಅವರನ್ನು ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಬಳಿ ಕರೆದೊಯ್ದು ಸ್ವಾಮೀಜಿಗಳ ಭೇಟಿ ಮಾಡಿಸಿದರು. ಆಗ ಶೃಂಗೇರಿ ಜಗದ್ಗುರುಗಳು ಸುಮಾರು ಎರಡೂವರೆ ಗಂಟೆಗಳ ಕಾಲ ಆರ್ಷ ವಿದ್ಯಾ ಸಮಾಜದ ಕಾರ್ಯ ಚಟುವಟಿಕೆಗಳ ವಿವರಗಳನ್ನು ಪಡೆದುಕೊಂಡು ಆರ್ಷ ವಿದ್ಯಾ ಸಮಾಜ ಕಾರ್ಯಗಳಿಗೆ ಶೃಂಗೇರಿ ಪೀಠದ ಆಶಿರ್ವಾದಗಳನ್ನು ತಿಳಿಸಿದರು.
ಆಚಾರ್ಯ ಮನೋಜ್ ಜಿಯವರ ಭೇಟಿಯ ನಾಲ್ಕು ತಿಂಗಳ ತರುವಾಯ ಇದೀಗ ಶೃಂಗೇರಿ ಜಗದ್ಗುರುಗಳು ಆರ್ಷ ವಿದ್ಯಾ ಸಮಾಜಕ್ಕೆ 50 ಲಕ್ಷ ರೂಪಾಯಿಗಳ ಆಶೀರ್ವಾದಪೂರ್ವಕ ದೇಣಿಗೆಯನ್ನು ನೀಡಿದ್ದಾರೆ. ಆರ್ಷ ವಿದ್ಯಾ ಸಮಾಜದ ಪರವಾಗಿ ಶೃತಿ ಭಟ್ ಅವರು ದೇಣಿಗೆ ಸ್ವೀಕರಿಸಿದ್ದಾರೆ. ಮುಂದಿನ ತನ್ನೆಲ್ಲಾ ಕಾರ್ಯಚಟುವಟಿಕೆಗಳನ್ನು ಶೃಂಗೇರಿ ಪೀಠದ ಆಶೀರ್ವಾದದೊಂದಿಗೇ ಮುಂದುವರೆಸುವುದಾಗಿ ಆರ್ಷ ವಿದ್ಯಾ ಸಮಾಜ ಘೋಷಿಸಿದೆ. ಇದೀಗ ದೊಡ್ಡ ಮೊತ್ತವೊಂದನ್ನು ಹಿಂದೂ ಧರ್ಮದ ರಕ್ಷಣೆಗಾಗಿ ಶೃಂಗೇರಿ ಪೀಠ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರ ಪಡೆಯುತ್ತಿದೆ. ಎಲ್ಲರೂ ಹಿಂದೂ ಹಿತರಕ್ಷಣೆಯ ನೆಲೆಯಲ್ಲಿ ಶೃಂಗೇರಿ ಗುರುಗಳ ಈ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಧರ್ಮ ಪೀಠಗಳು ಇಂತರ ಕಾರ್ಯದಲ್ಲಿ ತೊಡಗಿದಾಗಲಷ್ಟೇ ಧರ್ಮದ ಉಳಿವು ಸಾಧ್ಯ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ದೇಣಿಗೆಯ ಸಂದರ್ಭದಲ್ಲಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ರಾಜಶ್ರೀ ನಟ್ಟೋಜ ದಂಪತಿಗಳು ಹಾಜರಿದ್ದರು.