ಬೆಂಗಳೂರು: ಸಾರ್ವಜನಿಕರಿಂದ ಬಹಳಷ್ಟು ವಿರೋಧ ವ್ಯಕ್ತವಾಗಿರುವ, ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಡಾ|ಕೆ.ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರೀ ವಿರೋಧದ ಮಧ್ಯೆ ಈ ತೀರ್ಮಾನಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡವು ಕೇವಲ ದೂರಸಂವೇದಿ ದತ್ತಾಂಶದ ಆಧಾರದ ಮೇಲೆ ಪಶ್ಚಿಮ ಘಟ್ಟಗಳ ಪ್ರದೇಶವನ್ನು ನಿಗದಿಗೊಳಿಸಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಕೇಂದ್ರ ಸರಕಾರವು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕಳೆದ ಜು.31ರಂದು ಐದನೇ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳು ಮತ್ತು ಸಲಹೆಗಳು ಇದ್ದಲ್ಲಿ 60 ದಿನಗಳೊಳಗೆ ಸಲ್ಲಿಸಲು ತಿಳಿಸಿತ್ತು.ಕಸ್ತೂರಿ ರಂಗನ್ ವರದಿಯನ್ವಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ 20,668 ಚ.ಕಿಮೀ ಪ್ರದೇಶವನ್ನು ಗುರುತಿಸಿದ್ದು, ವಾಸ್ತವ ಲೋಪಗಳ ತಿದ್ದುಪಡಿ ಮಾಡಿದಾಗ ಪರಿಸರ ಸೂಕ್ಷ್ಮ ಪ್ರದೇಶವು 19,252.70 ಚ.ಕೀ.ಮೀ ಆಗುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ವಿವಿಧ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಅಥವಾ ಪರಿಸರ, ಸೂಕ್ಷ್ಮ ವಲಯವಾಗಿ ಅಧಿಸೂಚಿಸಿ 16,036.72 ಚ.ಕಿ.ಮೀ ಪ್ರದೇಶವನ್ನು ಸಂರಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಅವರು ಮಾಹಿತಿ ನೀಡಿದರು.
ಮಾನವನ ಹಸ್ತಕ್ಷೇಪದಿಂದಾಗಿ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ.ಆ ಮೂಲಕ ಜೀವ ಸಂಕುಲಕ್ಕೂ ಅಪಾಯ ಎದುರಾಗಲಿದೆ ಎನ್ನುವುದು ಪರಿಸರ ತಜ್ಞರ ಆತಂಕಕ್ಕೆ ಕಾರಣವಾಗಿತ್ತು.ಇದಕ್ಕಾಗಿ ಕಸ್ತೂರಿ ರಂಗನ್ ವರದಿಯನ್ನು ಸಿದ್ಧಪಡಿಸಲಾಗಿತ್ತು.ಆದರೆ ಭಾರೀ ವಿರೋಧದ ಹಿನ್ನೆಲೆಯಲ್ಲಿ ವರದಿಯನ್ನು ಸಂಪೂರ್ಣ ತಿರಸ್ಕಾರ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಕಸ್ತೂರಿ ರಂಗನ್ ವರದಿ ಜಾರಿಗೆ ಇತ್ತೀಚೆಗೆ ಜನಪ್ರತಿನಿಧಿಗಳ ಸಭೆಯಲ್ಲಿ ಸಮ್ಮತಿಸಲಾಗಿತ್ತು.ಆದರೆ ಕೇಂದ್ರ ಸರ್ಕಾರದ ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳನ್ನು ಕರ್ನಾಟಕ ಸರ್ಕಾರ ಪೂರ್ಣವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ಹೇಳಿದ್ದರು.ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ ಉದ್ದೇಶದಿಂದಾಗಿ ಪರಿಸರ ತಜ್ಞ ಮಾಧವ ಗಾಡ್ಗಿಲ್ ಎಂಬವರ ಅಧ್ಯಕ್ಷತೆಯಲ್ಲಿ ಕೆಂದ್ರ ಸರ್ಕಾರ ಒಂದು ಸಮಿತಿ ರಚಿಸಿತ್ತು.ಅವರು 2011ರ ಆಗಸ್ಟ್ 31ರಂದು ಸರ್ಕಾರಕ್ಕೆ ತಮ್ಮ ವರದಿ ಸಲ್ಲಿಸಿದ್ದರು.
ಕಸ್ತೂರಿ ರಂಗನ್ ಸಮಿತಿ ವರದಿ ಹೀಗಿದೆ:
ಕಸ್ತೂರಿ ರಂಗನ್ ಸಮಿತಿಯು ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಚದರ ಕಿ.ಮೀ,ವ್ಯಾಪ್ತಿಯ ಪ್ರದೇಶ ಅಂದರೆ ಶೇಕಡಾ 36.4ರಷ್ಚು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಡುತ್ತದೆ ಎಂದು ಗುರುತಿಸಿದೆ.ಈ ಪ್ರದೇಶಗಳಲ್ಲಿ ಗಣಿಗಾರಿಕೆ, ಜಲವಿದ್ಯುತ್, ಕ್ವಾರಿ, ಮರಳುಗಾರಿಕೆ, ಪರಿಸರ ವಿರೋಧ ಕೈಗಾರಿಕೆ, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಬೇಕು.20,000 ಚ,ಮೀ.ಗಿಂತ ಬೃಹತ್ ಆದ ಯಾವುದೇ ಕಟ್ಟಡ ನಿರ್ಮಿಸುವ ಹಾಗಿಲ್ಲ.ಇಎಸ್‌ಎನಿಂದ 10ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವುದಾದರೆ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು.ಈ ಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಾಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಯಾವುದೇ ಅವಕಾಶವಿಲ್ಲ.
ಒಂದು ವೇಳೆ ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ಪಶ್ಚಿಮ ಘಟ್ಟ ಮತ್ತು ಮಲೆನಾಡು ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆ ಆಗುತ್ತದೆ.ಅಲ್ಲಿ ಮಾನವ ಹಸ್ತಕ್ಷೇಪ ಮಾಡುವ ಹಾಗೇ ಇಲ್ಲ.ಇಡೀ ಭೂ ಭಾಗ ರಾಜ್ಯದ ನಿಯಂತ್ರಣದಿಂದ ಕೇಂದ್ರದ ಸುಪರ್ದಿಗೆ ಹೋಗುತ್ತದೆ.ಆಗ ಅಲ್ಲಿ ವಾಸಿಸುತ್ತಿರುವ ಆದಿವಾಸಿಗಳನ್ನು ಒಕ್ಕಲು ಎಬ್ಬಿಸಬೇಕಾಗುತ್ತದೆ.ಹಾಗಾಗಿ ಈ ಎಲ್ಲಾ ವಿಚಾರಗಳಿಂದ ಕಸ್ತೂರಿ ರಂಗನ್ ವರದಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಬಾಧ್ಯಸ್ಥರ ಸಭೆ:
ಕರ್ನಾಟಕದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ 16,114 ಚದರ ಕಿಲೋಮೀಟರ್ ಪರಿಸರ ಸೂಕ್ಷ್ಮ ಪ್ರದೇಶವನ್ನು ಈಗಾಗಲೇ ಸಂರಕ್ಷಿಸಲಾಗಿದ್ದು, ಈ ಮಿತಿಗೆ ಒಳಪಟ್ಟು ಕಸ್ತೂರಿ ರಂಗನ್ ವರದಿಯನ್ನು ಸಮ್ಮತಿಸಬಹುದು ಎಂದು 11 ಜಿಲ್ಲೆಗಳ ಬಾಧ್ಯಸ್ಥರ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದರು.ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕುರಿತಂತೆ ಕೇಂದ್ರ ಸರ್ಕಾರ ಆ.2ರಂದು 6ನೇ ಅಧಿಸೂಚನೆ ಹೊರಡಿಸಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿಲುವು ಸಲ್ಲಿಸಬೇಕಿರುವುದರಿಂದ 11 ಜಿಲ್ಲೆಗಳ ಜನಪ್ರತಿನಿಧಿಗಳ (ಬಾಧ್ಯಸ್ಥರ) ಸಭೆ ಇತ್ತೀಚೆಗೆ ನಡೆದಿತ್ತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಕಸ್ತೂರಿ ರಂಗನ್ ಸಮಿತಿ ವರದಿಯಲ್ಲಿ ರಾಜ್ಯದಲ್ಲಿ 20,668 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ. ಈ ಬಗ್ಗೆ ಭೌತಿಕ ಸರ್ವೆ ನಡೆಸಿದರೆ ಈ ಪ್ರದೇಶ ಇನ್ನೂ ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯವನ್ನೂ ಜನಪ್ರತಿನಿಽಗಳು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದರು.
ಕೇಂದ್ರದ ಬಳಿಗೆ ಸರ್ವ ಪಕ್ಷ ನಿಯೋಗ: ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚೆ:
ಪಶ್ವಿಮಘಟ್ಟ ಪರಿಸರ ಸೂಕ್ಷ್ಮವಲಯ ಪ್ರದೇಶದ ಗ್ರಾಮಗಳ ಜನರ ಅಹವಾಲು ಆಲಿಸಲು ಹೊಸ ಸಮಿತಿ ಕಳುಹಿಸಿಕೊಡುವಂತೆ ಕೋರಲು ಕೇಂದ್ರದ ಬಳಿಗೆ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಲು ಸೆ.20ರಂದು ನಡೆದಿದ್ದ ರಾಜ್ಯ ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ರಾಜ್ಯ ಅರಣ್ಯ,ಪರಿಸರ ಮತ್ತು ಜೀವಿಶಾಸ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತು ಚರ್ಚೆ ನಡೆಸಲಾಗಿತ್ತು.ವರದಿ ತಿರಸ್ಕರಿಸುವುದೂ ಸೇರಿ ಮೂರು ಸಾಧ್ಯತೆಗಳನ್ನು ಒಳಗೊಂಡ ವರದಿ ಸಿದ್ಧಪಡಿಸಿ ಸಂಪುಟ ಸಭೆಯ ಮುಂದಿಡಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು.ಸಂಪುಟ ಸಭೆಯ ನಿರ್ಣಯ ಆಧರಿಸಿ ಸೆ. 27ರಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ತನ್ನ ಅಭಿಪ್ರಾಯ ಸಲ್ಲಿಸಲಿದೆ.ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣ ತಿರಸ್ಕರಿಸುವ ಕುರಿತು ಸೆ.26ರಂದು ನಡೆದ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ.ಈ ಕುರಿತು ರಾಜ್ಯ ಸರಕಾರ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ.
ಕಡಬದ 12 ಗ್ರಾಮಗಳೂ ಪಟ್ಟಿಯಲ್ಲಿ:
ಕಡಬ ತಾಲೂಕಿನ 12 ಗ್ರಾಮಗಳ ಸಹಿತ ದ.ಕ.ಜಿಲ್ಲೆಯ 42 ಗ್ರಾಮಗಳನ್ನೂ ಒಳಗೊಂಡು ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿಕೊಂಡಿರುವ ಪಶ್ಚಿಮಘಟ್ಟ ಪ್ರದೇಶದ 56,800 ಚದರ ಕಿ.ಮೀ. ಪ್ರದೇಶವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಕೇಂದ್ರ ಸರಕಾರ ಐದನೇ ಕರಡು ಅಧಿಸೂಚನೆಯನ್ನು ಜುಲೈ 31ರಂದು ಹೊರಡಿಸಿದೆ.ಈ ಕುರಿತು ರಾಜ್ಯದ ಅಭಿಪ್ರಾಯ ತಿಳಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಸಹಿತ,ಕಸ್ತೂರಿರಂಗನ್ ವರದಿಯಿಂದ ಬಾಧ್ಯಸ್ಥರಾಗುವ 11 ಜಿಲ್ಲೆಗಳ ಪ್ರಮುಖರ ಸಭೆ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು.ಅದಾದ ಬಳಿಕ, ಸಂಪುಟ ಉಪಸಮಿತಿ ಸಭೆ ನಡೆದು, ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ವಲಯ ಪ್ರದೇಶಗಳ ಜನರ ಅಹವಾಲು ಆಲಿಸಲು ಹೊಸ ಸಮಿತಿಯನ್ನು ಕಳುಹಿಸಿಕೊಡುವಂತೆ ಕೋರಿ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ತೆರಳಲು ತೀರ್ಮಾನಿಸಲಾಗಿತ್ತು.ಸಂಪುಟ ಉಪಸಮಿತಿ ಸಭೆಯ ನಿರ್ಧಾರವನ್ನು ಸಂಪುಟ ಸಭೆಯಲ್ಲಿಟ್ಟು ಚರ್ಚಿಸಿ ತೀರ್ಮಾನಕೈಗೊಂಡು ಕೇಂದ್ರಕ್ಕೆ ವರದಿ ಸಲ್ಲಿಸಲೂ ತೀರ್ಮಾನಿಸಲಾಗಿತ್ತು.ಅದರಂತೆ, ಸೆ.26ರಂದು ರಾಜ್ಯ ಸಂಪುಟ ಸಭೆಯಲ್ಲಿ ವಿಚಾರ ಪ್ರಸ್ತಾಪವಾಗಿ, ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣ ತಿರಸ್ಕರಿಸಲು ನಿರ್ಧರಿಸಲಾಗಿದೆ.
ಅಧಿಸೂಚನೆ ಪ್ರಸ್ತಾವಿಸಿದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗುಜರಾತ್‌ನ 449 ಚದರ ಕಿ.ಮೀ., ಮಹಾರಾಷ್ಟ್ರದ 17,340 ಚದರ ಕಿ.ಮೀ., ಗೋವಾದ 1,461 ಚದರ ಕಿ.ಮೀ., ಕರ್ನಾಟಕದ 20,668 ಚದರ ಕಿ.ಮೀ.,ತಮಿಳುನಾಡಿನ 6,914 ಚದರ ಕಿ.ಮೀ., ಕೇರಳದ 9,993.7 ಚದರ ಕಿ.ಮೀ. ಪ್ರದೇಶ ಒಳಗೊಂಡಿದೆ.
ಪಶ್ಚಿಮ ಘಟ್ಟಗಳಲ್ಲಿನ ಅಪರೂಪದ ಜೀವ ವೈವಿಧ್ಯ, ನದಿಗಳು, ನೈಸರ್ಗಿಕ ಸಂಪತ್ತು, ಅಪಾರ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಉಳಿಸುವ ಉದ್ದೇಶದಿಂದ 59,940 ಚ.ಕಿ.ಮೀ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಸಂರಕ್ಷಿಸಬೇಕು ಎಂದು ಕೇಂದ್ರ ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು 2013ರಲ್ಲಿ ವರದಿ ಸಲ್ಲಿಸಿತ್ತು.ಈ ಸಮಿತಿಯ ಶಿಫಾರಸಿಗಿಂತ 3,114 ಚ.ಕಿ.ಮೀನಷ್ಟು ಕಡಿಮೆ ಭೂ ಪ್ರದೇಶವನ್ನು ಹೊಸ ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿದೆ.ಆದರೆ, ಅದರ ಅಂತಿಮಗೊಳಿಸುವಿಕೆಯು ಪಶ್ಟಿಮ ಘಟ್ಟವನ್ನು ಹೊಂದಿರುವ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಒಪ್ಪಿಗೆಯನ್ನು ಅವಲಂಬಿಸಿರುತ್ತದೆ.ಭೂಕುಸಿತ ಪೀಡಿತ ವಯನಾಡು ಜಿಲ್ಲೆಯ ಎರಡು ತಾಲ್ಲೂಕುಗಳ 13 ಗ್ರಾಮಗಳನ್ನು ಒಳಗೊಂಡಂತೆ ಕೇರಳದ 9,993.7 ಚದರ ಕಿ.ಮೀ ವಿಸ್ತೀರ್ಣದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಹರಡಿದ್ದು, ಅದರಲ್ಲಿ 9,107 ಚ.ಕಿ.ಮೀ ಅರಣ್ಯ ಪ್ರದೇಶ ಮತ್ತು 886.7 ಚ.ಕಿ.ಮೀ ಅರಣ್ಯೇತರ ಪ್ರದೇಶವಾಗಿದೆ.
ದ.ಕ ಜಿಲ್ಲೆಯ ಪ್ರಸ್ತಾವಿತ ಗ್ರಾಮಗಳು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಬ ತಾಲೂಕಿನ ಕೌಕ್ರಾಡಿ, ಗೋಳಿತೊಟ್ಟು, ಶಿರಾಡಿ, ಆಲಂತಾಯ, ಸಿರಿಬಾಗಿಲು, ಕೊಂಬಾರು, ಇಚ್ಲಂಪಾಡಿ, ಬಲ್ಯ, ಬಿಳಿನೆಲೆ, ದೋಳ್ಪಾಡಿ, ಬಳ್ಪ, ಏನೆಕಲ್ಲು, ಸುಬ್ರಹ್ಮಣ್ಯ, ಸುಳ್ಯ ತಾಲೂಕಿನ ನಾಲ್ಕೂರು, ಕೂತ್ಕುಂಜ, ಐನೆಕಿದು, ದೇವಚಳ್ಳ, ಹರಿಹರಪಲ್ಲತಡ್ಕ, ಮಿತ್ತೂರು, ಬಾಳುಗೋಡು, ಮಡಪ್ಪಾಡಿ, ಉಬರಡ್ಕ, ಕಲ್ಮಕಾರು, ಅರಂತೋಡು, ಆಲೆಟ್ಟಿ, ಸಂಪಾಜೆ,ತೊಡಿಕಾನ,ಬೆಳ್ತಂಗಡಿ ತಾಲೂಕಿನ ನಾರಾವಿ, ಮಲವಂತಿಗೆ, ಕುತ್ಲೂರು, ಸುಲ್ಕೇರಿ ಮೊಗ್ರು, ಶಿರ್ಲಾಲು, ನಾವರ, ಸವಣಾಲು, ನಡ, ಚಾರ್ಮಾಡಿ, ನಾವೂರು, ನೆರಿಯ, ಕಳಂಜ, ಪುದುವೆಟ್ಟು, ಶಿಶಿಲ, ಶಿಬಾಜೆ, ರೆಖ್ಯಾ ಗ್ರಾಮಗಳನ್ನು ಅತೀ ಸೂಕ್ಷ್ಮ ಪ್ರದೇಶಗಳೆಂದು ಕಸ್ತೂರಿರಂಗನ್ ವರದಿಯಲ್ಲಿ ಗುರುತಿಸಲಾಗಿದೆ.ಒಂದು ವೇಳೆ ವರದಿ ಜಾರಿಯಾದರೆ ಈ ಗ್ರಾಮಗಳ ವ್ಯಾಪ್ತಿಯಿಂದ ಕೆಲವು ಕಿ.ಮೀ.ಗಳ ದೂರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತದೆ.ಇದರಿಂದ ಬಹುತೇಕ ಕಡಬ ತಾಲೂಕಿನ ಜನವಸತಿಗೂ ತೊಂದರೆಯಾಗಲಿದೆ ಎನ್ನುವ ಆತಂಕವನ್ನು ಈಗಾಗಲೇ ಹೋರಾಟಗಾರರು ತಿಳಿಸುತ್ತಲೇ ಬಂದಿದ್ದಾರೆ.ಸೆ.೩೦ರಂದು ಕಡಬ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ಹೋರಾಟ ಸಮಿತಿ ನಿರ್ಧರಿಸಿತ್ತು.
ಸಂಪುಟ ಸಭೆಯ ಇತರ ಪ್ರಮುಖ ನಿರ್ಣಯಗಳು:
ದಕ್ಷಿಣ ಕನ್ನಡ ಜಿಲ್ಲೆಯ ಹ್ಯಾಟ್-ಹಿಲ್‌ನಲ್ಲಿ ನಿರ್ಮಿಸಿರುವ ನ್ಯಾಯಾಂಗ ಅಽಕಾರಿಗಳ ವಸತಿನಿಲಯ ಕಟ್ಟಡಗಳ ನಿರ್ಮಾಣದ ರೂ.11.70 ಕೋಟಿಗಳ ಪರಿಷ್ಕೃತ ಅಂದಾಜಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸರಕಾರಿ ಪ್ರೌಢಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್,ಇಂಟರ್ನೆಟ್ ಸೌಲಭ್ಯ:
ರಾಜ್ಯದ 189 ಸರಕಾರಿ ಪ್ರೌಢ ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ(ಟಿಎಎಲ್‌ಪಿ)ಮಾದರಿಯ ಕಂಪ್ಯೂಟರ್ ಲ್ಯಾಬ್ ಮತ್ತು ಇಂಟರ್‌ನೆಟ್ ಸೌಲಭ್ಯಗಳನ್ನು 14.97 ಕೋಟಿ ರೂ.ಗಳ ಮೊತ್ತದಲ್ಲಿ ಟೆಂಡರ್ ಮೂಲಕ ಖರೀದಿಸಿ ಅನುಷ್ಠಾನಗೊಳಿಸಲು ಹಾಗೂ ೭೪ ಆದರ್ಶ ವಿದ್ಯಾಲಯಗಳನ್ನು ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಪೂರ್ವ ಕಾಲೇಜುಗಳನ್ನಾಗಿ 40.79 ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀಕರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಅವರು ಮಾಹಿತಿ ನೀಡಿದರು.
ವಿಧಾನ ಪರಿಷತ್ ಉಪಚುನಾವಣೆ-ನೀತಿ ಸಂಹಿತೆ ಚರ್ಚೆ:
ವಿಧಾನಪರಿಷತ್ತಿಗೆ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನೂತನ ಸದಸ್ಯನ ಆಯ್ಕೆಗಾಗಿ ಅ.21ರಂದು ನಡೆಯಲಿರುವ ಉಪ ಚುನಾವಣೆಯ ಮಾದರಿ ನೀತಿ ಸಂಹಿತೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.ವಿಧಾನಪರಿಷತ್ತಿಗೆ ರಾಜ್ಯಪಾಲರಿಂದ ಇಬ್ಬರು ವ್ಯಕ್ತಿಗಳನ್ನು ನಾಮ ನಿರ್ದೇಶನ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲು ಸಂಪುಟ ಸಭೆ ಮುಖ್ಯಮಂತ್ರಿಯವರಿಗೆ ಅಧಿಕಾರವನ್ನು ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಕಡಬ ತಾಲೂಕಿನ 12 ಗ್ರಾಮಗಳ ಸಹಿತ ದ.ಕ.ಜಿಲ್ಲೆಯ 42 ಗ್ರಾಮಗಳನ್ನೂ ಒಳಗೊಂಡು ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿಕೊಂಡಿರುವ ಪಶ್ಚಿಮಘಟ್ಟ ಪ್ರದೇಶದ 56,800 ಚದರ ಕಿ.ಮೀ. ಪ್ರದೇಶವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಕೇಂದ್ರ ಸರಕಾರ ಐದನೇ ಕರಡು ಅಧಿಸೂಚನೆಯನ್ನು ಜುಲೈ 31ರಂದು ಹೊರಡಿಸಿದೆ.ಈ ಕುರಿತು ರಾಜ್ಯದ ಅಭಿಪ್ರಾಯ ತಿಳಿಸುವ ನಿಟ್ಟಿನಲ್ಲಿ ಜನಪ್ರತಿನಿಽಗಳ ಸಹಿತ,ಕಸ್ತೂರಿರಂಗನ್ ವರದಿಯಿಂದ ಬಾಧ್ಯಸ್ಥರಾಗುವ 11 ಜಿಲ್ಲೆಗಳ ಪ್ರಮುಖರ ಸಭೆ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು.ಅದಾದ ಬಳಿಕ, ಸಂಪುಟ ಉಪಸಮಿತಿ ಸಭೆ ನಡೆದು, ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ವಲಯ ಪ್ರದೇಶಗಳ ಜನರ ಅಹವಾಲು ಆಲಿಸಲು ಹೊಸ ಸಮಿತಿಯನ್ನು ಕಳುಹಿಸಿಕೊಡುವಂತೆ ಕೋರಿ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ತೆರಳಲು ತೀರ್ಮಾನಿಸಲಾಗಿತ್ತು.ಸಂಪುಟ ಉಪಸಮಿತಿ ಸಭೆಯ ನಿರ್ಧಾರವನ್ನು ಸಂಪುಟ ಸಭೆಯಲ್ಲಿಟ್ಟು ಚರ್ಚಿಸಿ ತೀರ್ಮಾನಕೈಗೊಂಡು ಕೇಂದ್ರಕ್ಕೆ ವರದಿ ಸಲ್ಲಿಸಲೂ ತೀರ್ಮಾನಿಸಲಾಗಿತ್ತು.ಅದರಂತೆ, ಸೆ.26ರಂದು ರಾಜ್ಯ ಸಂಪುಟ ಸಭೆಯಲ್ಲಿ ವಿಚಾರ ಪ್ರಸ್ತಾಪವಾಗಿ, ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣ ತಿರಸ್ಕರಿಸಲು ನಿರ್ಧರಿಸಲಾಗಿದೆ.