ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ಹಲ್ಲೆ ಮಾಡಲು ಆರಂಭಿಸಿದೆ- ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಪತ್ರಿಕಾಗೋಷ್ಟಿ

0

ಪುತ್ತೂರು: ಬಿಜೆಪಿಯವರು ಸಿದ್ಧರಾಮಯ್ಯ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ನೈತಿಕತೆ ಇದ್ದರೆ ರಾಜೀನಾಮೆ ಕೊಡಿ ಎಂದು ಕೇಳುತ್ತಿದ್ದಾರೆ. ಇದು ನೈತಿಕತೆಯ ಪ್ರಶ್ನೆ ಆಗಿದ್ದರೆ, ಪ್ರಕರಣದಲ್ಲಿ ಸತ್ಯಾಸತ್ಯತೆ ಇರುತ್ತಿದ್ದರೆ ಸಿದ್ಧರಾಮಯ್ಯ ಅವರು ರಾಜೀನಾಮೆ ಕೊಡಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಆದರೆ ಬಿಜೆಪಿಯವರು ಬೇರೆ ಬೇರೆ ರೀತಿಯಲ್ಲಿ ಸರಕಾರವನ್ನು ಉರುಳಿಸಲು ಮಾಡಿದ ಪ್ರಯತ್ನ ವಿಫಲವಾದಾಗ ಇದೀಗ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಈ ಮೂಲಕ ಇದೀಗ ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ಹಲ್ಲೆ ಮಾಡಲು ಆರಂಭಿಸಿದೆ ಎಂದು ಕೆ.ಪಿ.ಸಿ.ಸಿ ವಕ್ತಾರ ಅಮಳ ರಾಮಚಂದ್ರ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಈ ಪ್ರಕರಣದಲ್ಲಿರುವುದು ಕೇವಲ ಷಡ್ಯಂತ್ರ. ಷಡ್ಯಂತ್ರದಲ್ಲಿ ಬಿಜೆಪಿಯು ಕೇಂದ್ರದಿಂದ ರಾಜ್ಯದ ರಾಜಧಾನಿಯ ತನಕ ಜೆಡಿಎಸ್ ಕೂಡಾ ಸೇರಿಕೊಂಡು ಪ್ರಜಾಸತಾತ್ಮಕವಾಗಿ ಆಡಳಿತಕ್ಕೆ ಬಂದ ಸರಕಾರವನ್ನು ಉರುಳಿಸಬೇಕೆಂದು ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನ ಇವತ್ತು ನಿನ್ನೆಯದಲ್ಲ. ಈ ಸರಕಾರ ಬಂದ ದಿನದಿಂದಲೇ ಸರಕಾರ ಉರುಳಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಕಳೆದ ಚುನಾವಣೆಯ ಸೋಲಿನಿಂದ ಬಿಜೆಪಿಯವರು ಅಧಿಕಾರದ ದಾವದಿಂದ ಕೊತ ಕೊತ ಕುದಿಯುತ್ತಿದ್ದಾರೆ. 6 ತಿಂಗಳ ಒಳಗೆ ಈ ಸರಕಾರವನ್ನು ಬೀಳುಸುತ್ತೇವೆಂದು ಹೇಳಿದರು. ಆಪರೇಷನ್ ಕಮಲಕ್ಕೆ ಪ್ರಯತ್ನ ಮಾಡಿದರು. ಇದು ಯಾವುದು ಆಗದೆ ಹೋದಾಗ ಇವತ್ತು ಭ್ರಷ್ಟಾಚಾರದ ಆಪಾದನೆಯನ್ನು ಮಾಡಿದ್ದಾರೆ. ಇದು ನಿಜವಾಗಿಯೂ ಪ್ರಜಾಪ್ರಭುತ್ವದ ಮೇಲಿನ ಹಲ್ಲೆ ಆಗಿದೆ. ಹಾಗಾಗಿ ಪ್ರಧಾನಿ ಮೋದಿ, ಕರ್ನಾಟಕದ ರಾಜ್ಯಪಾಲ ಮತ್ತು ಭ್ರಷ್ಟ ಬಿಜೆಪಿ ನಾಯಕರ ಷಢ್ಯಂತ್ರಕ್ಕೆ ಹೆದರಿ ರಾಜಿನಾಮೆ ಕೊಟ್ಟು ಓಡಿ ಹೋಗುವ ಪ್ರಕರಣವಲ್ಲ. ಇಡೀ ಕಾಂಗ್ರೆಸ್ ಪಕ್ಷ ಇದ್ದು, ಎದುರಿಸಿ ಗೆದ್ದು ತೋರಿಸುವ ಪ್ರಕರಣ. ಬಿಜೆಪಿಯವರ ಷಡ್ಯಂತ್ರಕ್ಕೆ ಬಗ್ಗುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.


ಬಿಜೆಪಿವರಾದರೆ ಈಡಿಯೂ ಇಲ್ಲ, ಕೇಸೂ ಇಲ್ಲ, ರಾಜೀನಾಮೆಯೂ ಇಲ್ಲ:
ರೂ.7೦, ೦೦೦ ಕೋಟಿಗಳ ಅವ್ಯವಹಾರದ ಆರೋಪ ಇರುವ ಮಹಾರಾಷ್ಟ್ರದ ಅಜಿತ್ ಪವಾರ್, ರೂ.5,೦೦೦ ಕೋಟಿ ಶಾರದಾ ಚಿಟ್ ಹಗರಣದ ಆರೋಪಿ ಹೇಮಂತ್ ವಿಶ್ವಾಸ ಶರ್ಮಾ, ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ ರೂ. 1,5೦೦ ಕೋಟಿ ನುಂಗಿದ ಆರೋಪಿ ಅಶೋಕ್ ಚವಾಣ್, ಗಂಗೇನಹಳ್ಳಿ ಡಿನೋಟಿಫಿಕೇಷನ್ ಹಗರಣದ ಆರೋಪಿ ಎಚ್.ಡಿ.ಕುಮಾರಸ್ವಾಮಿಯವರ ಜೊತೆ ಹೊಂದಾಣಿಕೆ, ಈಡಿಯಿಂದ ನೋಟೀಸ್ ಬಂದೊಡನೆ ಮಹರಾಷ್ಟ್ರದ ನಾರಾಯಣ ರಾಣೆಯವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕೇಂದ್ರ ಸಚಿವರನ್ನಾಗಿಸುವ ಮೂಲಕ ಬಿಜೆಪಿ ಹಲವು ಭ್ರಷ್ಟಾಚಾರ ಮಾಡಿದೆ. ಕುಸಿದು ಹೋದ ವಿಮಾನ ನಿಲ್ದಾಣ ಅಯೋಧ್ಯೆಯ ರಾಮ ಪಥ, ಸೋರುವ ಮಂದಿರ ನಿರ್ಮಿಸಿದ ಬಿಜೆಪಿಯವರು, ಅಂಬಾನಿ-ಅದಾನಿಗಳಿಗೆ ದೇಶವನ್ನು ಒತ್ತೆ ಇಟ್ಟ ಬಿಜೆಪಿಯವರು, ಚುನಾವಣಾ ಬಾಂಡ್ ಹಗರಣದಲ್ಲಿ 8೦೦೦ ಕೋಟಿಗೂ ಅಧಿಕ ಹಣವನ್ನು ಕೊಳ್ಳೆ ಹೊಡೆದ ಬಿಜೆಪಿಯ ರಾಷ್ಟ್ರೀಯ ನಾಯಕರು, ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಬಗ್ಗೆ ಕ್ರಮ ಕೈಗೊಳ್ಳದ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಬಿಜೆಪಿಯವರಾದರೆ ಈಡಿಯೂ ಇಲ್ಲ, ಸಿಬಿಐಯೂ ಇಲ್ಲ, ಐಟಿಯೂ ಇಲ್ಲ, ಭ್ರಷ್ಟಾಚಾರವೂ ಇಲ್ಲ, ಕೇಸೂ ಇಲ್ಲ, ರಾಜೀನಾಮೆಯೂ ಇಲ್ಲ ಎಂದು ಅಮಳ ರಾಮಚಂದ್ರ ಹೇಳಿದರು.


ಬಿಜೆಪಿ ಅರ್ಧಷ್ಟು ಶಾಸಕರು ಕಾಂಗ್ರೆಸಿನಿಂದ ಹೋದವರು:
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್ ಅವರು ಮಾತನಾಡಿ, ಬಿಜೆಪಿಯಲ್ಲಿರುವ ಅರ್ಧದಷ್ಟು ಶಾಸಕರ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರು. ಐಟಿ ದಾಳಿ ಮಾಡಿಸಿ, ಸಿಬಿಐ ಮೂಲಕಲ ಬೆದರಿಸಿ, ಪಕ್ಷಾಂತರ ಆಪರೇಷನ್ ಕಮಲ ಮಾಡಿಸಿಕೊಂಡು ಕಾಂಗ್ರೆಸ್‌ನಿಂದ ಬಿಜೆಪಿಗೆ ಕರೆದುಕೊಂಡು ಹೋಗಿದ್ದಾರೆ. ಆರಂಭದಲ್ಲಿ ಅವರನ್ನು ಭ್ರಷ್ಟರು ಎಂದು ಬಿಜೆಪಿಯವರು ಕರೆಯುತ್ತಿದ್ದರು. ಈಗ ಅವರಲ್ಲಿ ಶಾಸಕರಾಗಿದ್ದಾರೆ. ಈಗ ಬಿಜೆಪಿಯವರ ತಟ್ಟೆಯಲ್ಲಿ ಆನ್ ಸತ್ತು ಬಿದ್ದಿದೆ. ಆದರೆ ಬಿಜೆಪಿಯವರು ನಮ್ಮ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದಾರೆ. ಕಾರ್ಕಳದಲ್ಲಿ ಪರಶುಶಾಮರ ವಿಗ್ರಹವನ್ನೇ ಮಾಯ ಮಾಡಿದ್ದಾರೆ. ಈಗ ಸಿದ್ದರಾಮಯ್ಯ ಅವರನ್ನು ಮಾಯ ಮಾಡಲು ಹೊರಟ್ಟಿದ್ದಾರೆ. ಆದರೆ ಸಿದ್ಧರಾಮಯ್ಯ ಅವರು ದೇಶದಾದ್ಯಂತ ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ, ದಲಿತರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಾಸ್ ಲೀಡರ್. ಹಾಗಾಗಿ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮತ್ತು ನಗರಸಭಾ ಸದಸ್ಯ ಮೊಹಮ್ಮದ್ ರಿಯಾಜ್ ಪರ್ಲಡ್ಕ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಹರೀಶ್ ಕೋಟ್ಯಾನ್, ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here