*ಹಲವು ವರ್ಷಗಳ ‘ಕಲುಷಿತ ನೀರಿನ’ ಸಮಸ್ಯೆಗೆ ಮುಕ್ತಿ
*ಮೇಘ ಇಂಡಸ್ಟ್ರೀಸ್‌ನ ಮಾಲಕರಿಂದ ಶಾಶ್ವತ ಪರಿಹಾರದ ಭರವಸೆ
ಪುತ್ತೂರು: ನರಿಮೊಗರು ಗ್ರಾ.ಪಂ ವ್ಯಾಪ್ತಿಯಲ್ಲಿರುವ ಮೇಘ ಇಂಡಸ್ಟ್ರೀಸ್ ಬಳಿಯ ನೀರು ಕುಡಿಯಲು ಅಯೋಗ್ಯವಾಗಿದ್ದು ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಮತ್ತು ಸ್ಥಳೀಯ ನಿವಾಸಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕಳೆದ ಕೆಲವು ಸಮಯಗಳಿಂದ ಆ ಭಾಗದ ಜನರು ನರಿಮೊಗರು ಗ್ರಾ.ಪಂಗೆ ಮನವಿ ಮಾಡುತ್ತಿದ್ದು ಇದೀಗ ಕೊನೆಗೂ ಅಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ಭರವಸೆ ಮೂಡಿದೆ.
ಆ.20ರಂದು ನಡೆದ ನರಿಮೊಗರು ಗ್ರಾಮ ಸಭೆಯಲ್ಲಿ ಆಗಿರುವ ಸರ್ವಾನುಮತದ ನಿರ್ಣಯದಂತೆ ಅಲ್ಲಿನ ಸಮಸ್ಯೆಯ ಪರಿಹಾರಕ್ಕಾಗಿ ನರಿಮೊಗರು ಹಿತರಕ್ಷಣಾ ವೇದಿಕೆ ಎನ್ನುವ ಸಮಿತಿಯೊಂದನ್ನು ರಚಿಸಿಕೊಂಡು ಅದರ ಮೂಲಕ ಸೆ.29ರಂದು ಸಭೆಯನ್ನು ಕರೆಯಲಾಗಿದ್ದು ಅದರಲ್ಲಿ ಮೇಘ ಇಂಡಸ್ಟ್ರೀಸ್‌ನ ಮಾಲಕರಾದ ಸತ್ಯಶಂಕರ್ ಭಟ್, ನರಿಮೊಗರು ಗ್ರಾ.ಪಂ ಅಧ್ಯಕ್ಷೆ ಹರಿಣಿ ನಿತ್ಯಾನಂದ ಪಂಜಳ, ಪಿಡಿಓ ರವಿಚಂದ್ರ ಯು, ದ್ರವ ತ್ಯಾಜ್ಯ ನಿರ್ವಹಣಾ ತಜ್ಞರು, ಸಂತ್ರಸ್ತರು ಮತ್ತು ಊರ ಪ್ರಮುಖರ ಉಪಸ್ಥಿತಿಯಲ್ಲಿ ಚರ್ಚೆ ನಡೆದು ಒಮ್ಮತದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಯಿತು. ಸಂತ್ರಸ್ತರು ತಮ್ಮ ಸಮಸ್ಯೆ, ಅಹವಾಲನ್ನು ಸಭೆಯಲ್ಲಿ ವಿವರಿಸಿದರು. ಕಳೆದ 15 ವರ್ಷಗಳಿಂದ ಇರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಅವರು ಆಗ್ರಹಿಸಿದರು.
ಮೇಘ ಇಂಡಸ್ಟ್ರೀಸ್‌ನ ಮಾಲಕರಾದ ಸತ್ಯಶಂಕರ್ ಭಟ್ ಮಾತನಾಡಿ ಮೂರು ತಿಂಗಳೊಳಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು, ಈಗಾಗಲೇ ಕಲುಷಿತಗೊಂಡ ಕಾಲುವೆಯನ್ನು (ತೋಡು) ಜೆಸಿಬಿ ಮೂಲಕ ಸ್ವಚ್ಛ ಮಾಡುವುದು, ಅಂತರ್ಜಲವನ್ನು ಕಾಪಾಡುವ ನಿಟ್ಟಿನಲ್ಲಿ ಸರಕಾರ ಮತ್ತು ಗ್ರಾ.ಪಂ ಸಹಕಾರದೊಂದಿಗೆ ನದಿ ನೀರನ್ನು ಬಳಸಲು ಅನುಮತಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸುವುದು,
ಕಾರ್ಖಾನೆಗೆ ಬರುವ ಟ್ರಕ್‌ಗಳು (ಲಾರಿ) ಮತ್ತು ಅದರ ಚಾಲಕ ನಿರ್ವಾಹಕರಿಂದ ಆಗುವ ಸಮಸ್ಯೆಗಳನ್ನು ಸರಿಪಡಿಸುವುದು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ.
ನಮ್ಮ ಕಡೆಯಿಂದ ಏನೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸುತ್ತೇವೆ, ಮುಂದಿನ ಮೂರು ತಿಂಗಳೊಳಗೆ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಮೇಘ ಇಂಡಸ್ಟ್ರೀಸ್‌ನ ಮಾಲಕರಾದ ಸತ್ಯಶಂಕರ್ ಭಟ್ ಅವರು ‘ಸುದ್ದಿ’ಗೆ ಪ್ರತಿಕ್ರಿಯಿಸಿದ್ದಾರೆ. ಸಭೆಯಲ್ಲಿ ಆಗಿರುವ ತೀರ್ಮಾನಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.