ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸದ್ಯದಲ್ಲೇ ಹಿಂದೂ ಧರ್ಮ ಶಿಕ್ಷಣ ಆರಂಭ

0

ಧರ್ಮದ ಉಳಿವಿಗಾಗಿ ಹೆತ್ತವರ ಸಹಕಾರ ಅಗತ್ಯ : ಸುಬ್ರಹ್ಮಣ್ಯ ನಟ್ಟೋಜ

ಪುತ್ತೂರು: ಹಿಂದೂ ಸಮಾಜವನ್ನು ಛಿದ್ರಗೊಳಿಸುವ ವ್ಯವಸ್ಥಿತ ಯೋಜನೆಗಳನ್ನು ದುಷ್ಟ ಶಕ್ತಿಗಳು ಕಾರ್ಯಗತಗೊಳಿಸುತ್ತಿವೆ. ನಮ್ಮ ಮಕ್ಕಳಿಗೆ ಹಿಂದೂ ಧರ್ಮದ ಕುರಿತಾದ ಜಾಗೃತಿ ಒಡಮೂಡದಿರುವುದೇ ಸಮಾಜಘಾತುಕ ಶಕ್ತಿಗಳ ಹುನ್ನಾರ ಯಶಸ್ವಿಯಾಗುವುದಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಪಠ್ಯ ಆಧಾರಿತ ಶಿಕ್ಷಣದ ಜತೆಗೆ ಧಾರ್ಮಿಕ ಶಿಕ್ಷಣವನ್ನೂ ಕೊಡುವ ಅನಿವಾರ್ಯತೆ ಇಂದು ತಲೆದೋರಿದೆ. ಈ ನೆಲೆಯಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ಮುಂದಿನ ದಿನಗಳಲ್ಲಿ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಆದೇಶ ಹಾಗೂ ಆಶೀರ್ವಾದದೊಂದಿಗೆ ಧರ್ಮಶಿಕ್ಷಣವನ್ನು ಒದಗಿಸಿಕೊಡಲಾಗುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಬುಧವಾರ ನಡೆದ ರಕ್ಷಕ ಶಿಕ್ಷಕ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಹಿಂದೂ ಹೆಣ್ಣುಮಕ್ಕಳನ್ನಷ್ಟೇ ಅಲ್ಲದೆ ಗಂಡುಮಕ್ಕಳನ್ನೂ ಮತಾಂತರಗೊಳಿಸುವ ಪ್ರಯತ್ನಗಳು ಸಾಗುತ್ತಿವೆ. ಹಿಂದೂ ಧರ್ಮ, ದೇವತೆಗಳ ಬಗೆಗೆ ಹಲವು ಪ್ರಶ್ನೆಗಳನ್ನು ಕೇಳಿ ಹಿಂದೂ ಯುವ ಮನಸ್ಸುಗಳನ್ನು ಹಾದಿ ತಪ್ಪಿಸುವ ಕೆಲಸಗಳಾಗುತ್ತಿವೆ. ತಮ್ಮ ಧರ್ಮದ ಬಗೆಗೆ ತಿಳಿದಿರದ ನಮ್ಮ ಯುವಕ – ಯುವತಿಯರು ಪ್ರಶ್ನೆಗಳಿಗೆ ಉತ್ತರಿಸಲಾಗದೆ ಧರ್ಮವೇ ಸರಿ ಇಲ್ಲ ಎಂಬ ನಿರ್ಣಯಕ್ಕೆ ಬಂದು ಸುಲಭಕ್ಕೆ ಮತಾಂತರದ ಕಬಂಧ ಬಾಹುಗಳಲ್ಲಿ ಸಿಲುಕುತ್ತಿದ್ದಾರೆ ಎಂದು ನುಡಿದರು.


ಧರ್ಮ ಶಿಕ್ಷಣವನ್ನು ಒದಗಿಸಿಕೊಡುವ ಮೂಲಕ ಧರ್ಮದ ಆಳ ಅಗಲವನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ. ಧರ್ಮದ ಬಗೆಗೆ, ಪುರಾಣಗಳ ಬಗೆಗೆ ಯಾರಾದರೂ ಪ್ರಶ್ನೆ ಮಾಡಿದಲ್ಲಿ ಸರಿಯಾದ ಉತ್ತರ ಕೊಡುವ ಯೋಗ್ಯತೆಯನ್ನು ನಮ್ಮ ಮಕ್ಕಳಲ್ಲಿ ತುಂಬಬೇಕಿದೆ. ನಾವು ಧರ್ಮ ಜ್ಞಾನ ಬೆಳೆಸಿಕೊಂಡಾಗ ಮತೀಯ ಶಕ್ತಿಗಳು ಸೋಲೊಪ್ಪಿಕೊಳ್ಳಬೇಕಾಗುತ್ತದೆ. ಅಂತೆಯೇ ನಮ್ಮ ಧರ್ಮವನ್ನು ಪ್ರಶ್ನೆ ಮಾಡುವವರ ಧರ್ಮದ ನ್ಯೂನತೆಗಳ ಬಗೆಗೆ ನಾವು ಪ್ರಶ್ನೆ ಮಾಡುವಷ್ಟು ಜ್ಞಾನ ಬೆಳೆಸಿಕೊಂಡಾಗ ಯಾರೂ ನಮ್ಮನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು.


ಧರ್ಮ ಶಿಕ್ಷಣ ಕೊಡದೆ ಮಕ್ಕಳನ್ನು ನಾವು ಬೆಳೆಸಿದರೆ ನಾಳೆ ನಮ್ಮ ಮಕ್ಕಳು ನಮ್ಮ ಜತೆ ಇರುತ್ತಾರೆಂಬ ಖಾತ್ರಿ ಇಲ್ಲ. ಬೆಳಗ್ಗೆ ಹೋದವರು ಸಂಜೆ ಬರುತ್ತಾರೆಂಬ ವಿಶ್ವಾಸ ಇಲ್ಲ. ನಮ್ಮ ಮಕ್ಕಳಿಗೇನೂ ಆಗುವುದಿಲ್ಲ, ನಮಗೇನೂ ಬಾಧಿಸುವುದಿಲ್ಲ ಎನ್ನುತ್ತಾ ಕುಳಿತರೆ ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳು ಮರೆಯಾಗಿ ಅಂತಿಮವಾಗಿ ಧರ್ಮವನ್ನೂ ಕಳೆದುಕೊಳ್ಳಲಿದ್ದೇವೆ ಎಂಬ ಎಚ್ಚರ ನಮ್ಮಲ್ಲಿರಬೇಕು. ಇಂದು ಎಷ್ಟೋ ಮನೆ – ಮನಗಳು ಮತಾಂತರದ ಸುಳಿಗೆ ಸಿಕ್ಕಿ ಘಾತಿಗೊಳಗಾಗಿವೆ. ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ದೇಶ ಉಳಿಯಬೇಕಾದರೆ ಧರ್ಮ ಉಳಿಯಬೇಕಿದೆ. ಆದರೆ ಧರ್ಮ ಉಳಿಯುವುದಕ್ಕೆ ಸಮಾಜ ಉಳಿಯುವುದು ಮುಖ್ಯ. ಅಂತಹ ಸಮಾಜ ಸರಿ ಇರಬೇಕಾದರೆ ಕುಟುಂಬ ದೃಢವಾಗಿರಬೇಕು. ಇಂದಿನ ದಿನಗಳಲ್ಲಿ ಹಿಂದೂ ಕುಟುಂಬಗಳನ್ನೇ ಒಡೆಯುವ ಪ್ರಯತ್ನ ಅಲ್ಲಲ್ಲಿ ನಡೆಯುತ್ತಿದೆ. ಮದುವೆಯಾದ ಹಿಂದೂ ಪುರುಷ ಅಥವ ಮಹಿಳೆಯನ್ನೇ ಗುರಿಯಾಗಿಸಿ ಮತಾಂತರ ನಡೆಯುತ್ತಿದೆ. ತನ್ಮೂಲಕ ಹಿಂದೂ ಕುಟುಂಬಗಳನ್ನು ಒಡೆದು, ಧರ್ಮ ಕೆಡಿಸುವ ಯೋಜನೆ ಜಾರಿಯಲ್ಲಿದೆ. ಇದರ ಬಗೆಗೆ ಎಚ್ಚರ ವಹಿಸಬೇಕು ಎಂದರು.


ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ.ದೀಪಕ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ., ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಿವರಾಮ ಆಳ್ವ, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷೆ ಸೀಮಾ ನಾಗರಾಜ್, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಅಂಬಿಕಾ ವಿದ್ಯಾಲಯ ಸಿಇಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು. ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು.


ಹೆತ್ತವರಿಂದ ಅತ್ಯುತ್ತಮ ಪ್ರತಿಕ್ರಿಯೆ: ಹಿಂದೂ ಧರ್ಮ ಶಿಕ್ಷಣವನ್ನು ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ಆರಂಭಿಸುವುದಕ್ಕೆ ಎಲ್ಲಾ ಹೆತ್ತವರು ಒಕ್ಕೊರಲಿನಿಂದ ಬೆಂಬಲ ನೀಡಿದರು. ಇಂದು ನಮ್ಮ ಮಕ್ಕಳಿಗೆ ಧರ್ಮ ಶಿಕ್ಷಣ ಅತ್ಯಂತ ಅಗತ್ಯವಾಗಿ ಬೇಕಿದೆ. ಅಂಬಿಕಾ ಸಂಸ್ಥೆ ಇಂತಹ ಕಾರ್ಯಕ್ಕೆ ಅಡಿಯಿಟ್ಟಿರುವುದು ಅತ್ಯಂತ ಖುಷಿಯ ಸಂಗತಿ ಎಂದು ಹೆತ್ತವರು ಅಭಿಪ್ರಾಯ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here