ಗ್ರಾ.ಪಂ.ಅಧಿಕಾರಿ,ಸಿಬ್ಬಂದಿಗಳ ಫ್ರೀಡಂ ಪಾರ್ಕ್ ಮುಷ್ಕರ ಅಂತ್ಯ

0

ಪುತ್ತೂರು:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸಿರುವ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಇಲಾಖಾಧಿಕಾರಿಗಳು, ನೌಕರರು, ಗ್ರಾ.ಪಂ.ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಎರಡು ದಿನಗಳ ಕಾಲ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆದ ಮುಷ್ಕರವನ್ನು ಅಂತ್ಯಗೊಳಿಸಿದ್ದು ಅ.7ರಿಂದ ರಾಜ್ಯದಾದ್ಯಂತ ಜಿ.ಪಂ. ಕಚೇರಿಗಳ ಮುಂಭಾಗದಲ್ಲಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.ಮುಷ್ಕರದಿಂದಾಗಿ ಕುಡಿಯುವ ನೀರು, ನೈರ್ಮಲ್ಯ ಹಾಗೂ ದಾರಿದೀಪ ನಿರ್ವಹಣೆ ಹೊರತು ಪಡಿಸಿ ಗ್ರಾ.ಪಂ.ಗಳಲ್ಲಿ ಉಳಿದೆಲ್ಲಾ ಸೇವೆಗಳು ಸ್ಥಬ್ದವಾಗಲಿದೆ.


ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾಮ ಪಂಚಾಯತಿನ ಎಲ್ಲಾ ಪಂಚ ನೌಕರರಾದ ಪಿ.ಡಿ.ಓ, ಕರವಸೂಲಿಗಾರರು, ಜಲಗಾರರು, ಕಛೇರಿ ಸಹಾಯಕರು, ಸ್ವಚ್ಛತಾಗಾರರು ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅ.4ರಿಂದ ಕುಡಿಯುವ ನೀರು, ಬೀದಿ ದೀಪ ಹಾಗೂ ಸ್ವಚ್ಛತೆ ಹೊರತುಪಡಿಸಿ ಉಳಿದ ಸೇವೆಗಳಾದ ಬಾಪೂಜಿ ಸೇವೆ ಹಾಗೂ ಕಛೇರಿಯ ಕೆಲಸ ಕಾರ್ಯಗಳನ್ನು ರಾಜ್ಯಾದ್ಯಂತ ಸ್ಥಗಿತಗೊಳಿಸಿ ಅ.4ರಿಂದ ಅನಿಽಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದರು.ಅ.4ರಂದು ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯ ಆಯುಕ್ತರು ಭೇಟಿ ನೀಡಿ ಮನವಿ ಸ್ವೀಕರಿಸಿದ್ದರು.ನಮ್ಮ ಸಮಸ್ಯೆಗಳನ್ನು ಪರಿಶೀಲನೆ ನಡೆಸುವಂತೆ ಅವರಲ್ಲಿ ಆಗ್ರಹಿಸಲಾಗಿದ್ದು ಅದಕ್ಕೆ ಅವರು ಒಪ್ಪಿಗೆ ಸೂಚಿಸಿಲ್ಲ.ಹೀಗಾಗಿ ವಿವಿಧ ಸಮಿತಿಗಳ ರಾಜ್ಯಾಧ್ಯಕ್ಷರೊಂದಿಗೆ ಸಭೆ ಕರೆಯುವಂತೆ ಮನವಿ ಮಾಡಲಾಗಿತ್ತು.ಅದರಂತೆ ಸಂಜೆ ಸಭೆ ನಡೆದಿದ್ದರೂ ಅದು ವಿಫಲವಾಗಿರುವುದರಿಂದ ಅ.5ರಂದು ಮುಷ್ಕರ ಮುಂದುವರಿಸಿದ್ದರು.


ನಾಳೆಯಿಂದ ಜಿ.ಪಂ ಕಚೇರಿ ಮುಂಭಾಗದಲ್ಲಿ ಧರಣಿ:
ಎಲ್ಲರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜನಪ್ರತಿನಿಧಿಗಳು, ಅಧಿಕಾರಿ ಹಾಗೂ ಸಿಬ್ಬಂದಿಗಳು ಒಟ್ಟು ಸೇರಿ ಮುಷ್ಕರ ನಡೆಸಲಾಗುತ್ತಿದೆ.ಸಾರ್ವಜನಿಕರಿಗೆ ಕುಡಿಯುವ ನೀರು, ನೈರ್ಮಲ್ಯ ಹಾಗೂ ದಾರಿದೀಪದ ವ್ಯವಸ್ಥಗಳಿಗೆ ಯಾವುದೇ ತೊಂದರೆ ಮಾಡಿಲ್ಲ.ಆನ್‌ಲೈನ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.ಅ.5ರಂದು ಫ್ರೀಡಂ ಪಾರ್ಕ್‌ನ ಮುಷ್ಕರ ಅಂತ್ಯಗೊಳಿಸಲಾಗಿದೆ.ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಭೇಟಿ ನೀಡಿದ್ದರೂ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ.ಸಚಿವರು ಭೇಟಿ ನೀಡುವುದಾಗಿ ತಿಳಿಸಿದ್ದರೂ ಭೇಟಿ ನೀಡಿಲ್ಲ.ಅ.10ರಂದು ಸಭೆಗೆ ದಿನಾಂಕ ನಿಗಧಿಗೊಳಿಸಲಾಗಿದೆ.ನಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತ ಆದೇಶವಾಗುವ ತನಕ ಅ.7ರಿಂದ ಜಿ.ಪಂ. ಕಚೇರಿ ಮುಂಭಾಗದಲ್ಲಿ ಮುಷ್ಕರ ನಡೆಯಲಿದೆ.ಗ್ರಾ.ಪಂ ವ್ಯವಸ್ಥೆಯ ಸಬಲೀಕರಣವೇ ನಮ್ಮ ಉದ್ದೇಶವಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ನಾಗೇಶ್ ಎಂ.ತಿಳಿಸಿದ್ದಾರೆ.

ಅ.10ರಂದು ಸಚಿವರ ಅಧ್ಯಕ್ಷತೆಯಲ್ಲಿ ಸಭೆ
ಗ್ರಾ.ಪಂ ಸದಸ್ಯರ ಒಕ್ಕೂಟ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಟನೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆರವರ ಅಧ್ಯಕ್ಷತೆಯಲ್ಲಿ ಅ.10ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ವಿಕಾಸ ಸೌಧದಲ್ಲಿ ಸಭೆ ನಡೆಸುವ ಬಗ್ಗೆ ದಿನಾಂಕ ನಿಗದಿಗೊಳಿಸಿ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಿಂದ ನಮಗೆ ಪತ್ರ ಬಂದಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ನಾಗೇಶ್ ಎಂ.ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here