ಪುತ್ತೂರು : ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಅಕ್ಟೋಬರ್ 2 ರಂದು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬದ ಅಂಗವಾಗಿ ‘ಸ್ವಚ್ಛತಾ ಹಿ ಸೇವಾ’ ಕಾರ್ಯಕ್ರಮವನ್ನು ಆಚರಿಸಲಾಯಿತು.
ಶಾಲಾ ಪ್ರಾಂಶುಪಾಲರಾದ ಸಿಂಧು ವಿ. ಜಿ ಯವರು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಫೊಟೋಗಳಿಗೆ ಪುಷ್ಪಾರ್ಚನೆಗೈದರು. ಬಳಿಕ ಶಾಲಾ ಸಹಾಯಕ ಸಿಬ್ಬಂದಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಜೀವನದಲ್ಲಿ ಶಿಸ್ತು ಮತ್ತು ಸ್ವಚ್ಛತೆಯನ್ನು ವಿದ್ಯಾರ್ಥಿಗಳೆಲ್ಲರು ಸದಾ ರೂಢಿಸಿಕೊಳ್ಳಬೇಕೆಂದು ಹೇಳಿದರು.
ಶಾಲಾ ಹಿಂದಿ ಭಾಷಾ ಶಿಕ್ಷಕಿಯಾದ ಪ್ರಫುಲ್ಲರವರು, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಕುರಿತು ಮಾತನಾಡುತ್ತಾ, ಗಾಂಧೀಜಿಯವರ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಕಿರುನಾಟಕವನ್ನು ಪ್ರದರ್ಶಿಸಿದರು.
ವಿದ್ಯಾರ್ಥಿಗಳು ತರಗತಿಗಳನ್ನು ಹಾಗೂ ಶಾಲಾ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವುದರೊಂದಿಗೆ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು, ಶಿಕ್ಷಕೇತರರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.