ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿರಾಡಿ ಶಾಖೆಯ ನೂತನ ಕಟ್ಟಡ ‘ಕಲ್ಪತರು ಸಹಕಾರಿ ಸೌಧ’ ಉದ್ಘಾಟನೆ

0

ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿರಾಡಿ ಶಾಖೆಯ ನೂತನ ಕಟ್ಟಡ ’ ಕಲ್ಪತರು ಸಹಕಾರಿ ಸೌಧ ’ ಅ.7ರಂದು ಉದ್ಘಾಟನೆಗೊಂಡಿತು. ಸಹಕಾರಿ ಸೌಧದ ಜೊತೆಗೆ ಶಾಖಾ ಕಚೇರಿ, ಭದ್ರತಾ ಕೊಠಡಿ, ನ್ಯಾಯ ಬೆಲೆ ಅಂಗಡಿ, ಕ್ಯಾಂಪ್ಕೋ ಖರೀದಿ ಕೇಂದ್ರ, ರಸಗೊಬ್ಬರ ಗೋದಾಮು ಉದ್ಘಾಟನೆಯೂ ನಡೆಯಿತು.


ಸರಕಾರದ ಹಸ್ತಕ್ಷೇಪ ಇರಬಾರದು:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಸಹಕಾರಿ ಸೌಧ ಹಾಗೂ ಶಾಖಾ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಹಕಾರಿ ಸಂಘಗಳು ರೈತರಿಂದಲೇ ಸ್ಥಾಪನೆಗೊಂಡು ರೈತರಿಗೋಸ್ಕರ ನಡೆಯುವ ಸಂಘಗಳಾಗಿವೆ. ಪುತ್ತೂರು ತಾಲೂಕಿನಲ್ಲಿರುವ 19 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸೇರಿದಂತೆ ದ.ಕ.ಹಾಗೂ ಉಡುಪಿ ಜಿಲ್ಲೆಯ 179 ಸಹಕಾರಿ ಸಂಘಗಳೂ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಸರಕಾರಕ್ಕೆ ಸಹಕಾರ ಸಂಘಗಳ ಮೇಲೆ ಧೈರ್ಯವಿಲ್ಲ. ಸಹಕಾರಿ ಕ್ಷೇತ್ರ ಪವಿತ್ರವಾದ ಕ್ಷೇತ್ರವಾಗಿದೆ. ಇದರಲ್ಲಿ ಸರಕಾರದ ಹಸ್ತಕ್ಷೇಪ ಇರಬಾರದು. ಗ್ರಾಮೀಣ ಪ್ರದೇಶದ ಜನರಿಂದ ಠೇವಣಿ ಸಂಗ್ರಹಿಸುವ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಾಲ ವಿತರಣೆಗೆ ಗ್ರಾಮೀಣ ಪ್ರದೇಶದ ಜನರ ಮೇಲೆ ನಂಬಿಕೆ ಇರುವುದಿಲ್ಲ. ಆದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರಿಂದಲೇ ಠೇವಣಿ ಸಂಗ್ರಹಿಸಿ ರೈತರಿಗೇ ಸಾಲ ವಿತರಣೆ ಮಾಡುತ್ತಿದೆ. ಕೃಷಿಕರಿಗೆ ಭದ್ರತೆ ನೀಡುತ್ತಿದೆ. ಇದಕ್ಕೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹಕಾರ ನೀಡುತ್ತಿದೆ ಎಂದರು. ಅತೀ ಹೆಚ್ಚು ವ್ಯಾಪ್ತಿ ಹೊಂದಿರುವ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವೂ ಶೇ.100 ಸಾಲ ವಸೂಲಾತಿಯ ಮೂಲಕ ಸಾಧನೆ ಮಾಡಿದೆ. ಉಮೇಶ್ ಶೆಟ್ಟಿ ಅವರು 35 ವರ್ಷಗಳಿಂದ ಈ ಸಂಘದ ಅಧ್ಯಕ್ಷರಾಗಿ ಎಲ್ಲಾ ಸಂಘಗಳ ಜೊತೆಗೆ ಹೊಂದಾಣಿಕೆಯಿಂದ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ| ರಾಜೇಂದ್ರ ಕುಮಾರ್‌ರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಸಂಘವನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಬಂದಿದ್ದಾರೆ. ನೆಲ್ಯಾಡಿ ಸಂಘವು ಸತತ ಆರು ವರ್ಷಗಳಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸಾಧನಾ ಪ್ರಶಸ್ತಿ ಪಡೆಯುತ್ತಿದೆ. 67ನೇ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಅತ್ಯುತ್ತಮವಾದ ಸಂಘ ಎಂಬ ಬಿರುದು ಪಡೆದುಕೊಂಡಿದೆ. ಸಂಘ ಇನ್ನಷ್ಟೂ ಅಭಿವೃದ್ಧಿ ಹೊಂದಲಿ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಅತೀ ಹೆಚ್ಚಿನ ಸಹಾಯ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.


ಶಿರಾಡಿಯಲ್ಲಿ ವಾರದ 2 ದಿನ ಖರೀದಿ:
ಕ್ಯಾಂಪ್ಕೋ ಖರೀದಿ ಕೇಂದ್ರ ಉದ್ಘಾಟಿಸಿದ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಅವರು ಮಾತನಾಡಿ, ಕ್ಯಾಂಪ್ಕೋ ಅಡಿಕೆ, ಕೊಕ್ಕೊ, ರಬ್ಬರ್, ಕಾಳುಮೆಣಸು, ತೆಂಗಿನಕಾಯಿಗಳನ್ನು ಒಂದೇ ಸೂರಿನಡಿ ಖರೀದಿ ಮಾಡುತ್ತಿದೆ. ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಿರಾಡಿ ಶಾಖೆಯಲ್ಲಿ ವಾರದ 2 ದಿನ ಕ್ಯಾಂಪ್ಕೋ ಖರೀದಿ ಕೇಂದ್ರ ಕಾರ್ಯನಿರ್ವಹಿಸಲಿದೆ. ಉತ್ತಮ ರೀತಿಯಲ್ಲಿ ವ್ಯವಹಾರ ಆದಲ್ಲಿ ಮುಂದಿನ ದಿನಗಳಲ್ಲಿ ಇಲ್ಲಿ ವಾರಪೂರ್ತಿ ಸೇವೆ ನೀಡಲು ಕ್ಯಾಂಪ್ಕೋ ಬದ್ಧವಾಗಿದೆ. ಇಲ್ಲಿ ಅಡಿಕೆ ಜೊತೆಗೆ ರಬ್ಬರ್ ಖರೀದಿಯನ್ನೂ ಮಾಡಲಿದೆ ಎಂದರು. ಕ್ಯಾಂಪ್ಕೋ ಕೃಷಿಕರ ಪರವಾದ ಸಂಸ್ಥೆ. ಸದಸ್ಯರಿಗೆ ಹಲವು ಸವಲತ್ತೂ ನೀಡುತ್ತಿದೆ ಎಂದು ಹೇಳಿದರು. ಕೆಂಪಡಿಕೆಗೆ ರಾಸಾಯನಿಕ ಮಿಶ್ರಣ ಮಾಡಿರುವ ಹಿನ್ನಲೆಯಲ್ಲಿ ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ ಭಾಗದಿಂದ ಕಳುಹಿಸಿದ ಅಡಿಕೆಯನ್ನು ಉತ್ತರ ಭಾರತದ ಕಂಪನಿಗಳು ಹಿಂತಿರುಗಿಸಿವೆ. ದ.ಕ.,ಕಾಸರಗೋಡು ಭಾಗದಲ್ಲೂ ಇಂಡೋನೇಷಿಯಾದ ಅಡಿಕೆಯನ್ನು ಮಿಶ್ರಣ ಮಾಡಿ ಸದಸ್ಯರ ಹೆಸರಿನಲ್ಲಿ ತಂದು ಕೊಡುವುದನ್ನು ಗುರುತಿಸಿದ್ದೇವೆ. ಈ ಬಗ್ಗೆ ಕ್ಯಾಂಪ್ಕೋ ಅಲರ್ಟ್ ಆಗಿದ್ದು ಸಂಘದ ಸದಸ್ಯರೂ ಅಲರ್ಟ್ ಆಗಿರಬೇಕು. ಕ್ಯಾಂಪ್ಕೋ ಆಯುಷ್ ಸಾವಯವ ಗೊಬ್ಬರ, ಪೌಷ್ಠಿಕ ಗೊಬ್ಬರವನ್ನು ವಿತರಣೆ ಮಾಡುತ್ತಿದೆ ಎಂದರು.


ಸಹಕಾರಿ ಸಂಘ ಸದೃಢವಾಗಿ ಬೆಳೆದಿದೆ:
ಭದ್ರತಾ ಕೊಠಡಿ ಉದ್ಘಾಟಿಸಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಎಸ್.ಬಿ.ಜಯರಾಮ ರೈಯವರು ಮಾತನಾಡಿ, ಡಾ| ಎಮ್.ಎನ್.ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಸಹಕಾರಿ ಸಂಘಗಳು ಸದೃಢವಾಗಿ ಬೆಳೆಯುತ್ತಿದೆ. ನಷ್ಟದಲ್ಲಿದ್ದ ಸಂಘಗಳ ಪುನಶ್ಚೇತನಕ್ಕೆ ಡಾ| ರಾಜೇಂದ್ರ ಕುಮಾರ್ ಅವರು ಹಣಕಾಸಿನ ನೆರವು ನೀಡಿದ್ದರಿಂದ ಈಗ ಆ ಸಂಘಗಳೂ ಲಾಭದಲ್ಲಿ ಮುನ್ನಡೆಯುತ್ತಿವೆ. ಆರ್ಥಿಕ ಶಕ್ತಿಗೆ ಸಹಕಾರಿ ರಂಗ ಮೂಲವಾಗಿದೆ ಎಂದರು. ಸಹಕಾರಿ ರಂಗ ಹಾಗೂ ಹೈನುಗಾರಿಕೆ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಅಡಿಕೆ ಹಾಗೂ ಹೈನುಗಾರಿಕೆ ಜೊತೆಯಾಗಿ ಸಾಗಬೇಕು. ಹೈನುಗಾರಿಕೆಯಿಂದ ಜನ ಹಿಂದೆ ಸರಿಯುತ್ತಿದ್ದಾರೆ. ಹಾಲಿನ ದರ ಹೆಚ್ಚಳಗೊಂಡು ಪಶು ಆಹಾರದ ಬೆಲೆ ಕಡಿಮೆಯಾದಲ್ಲಿ ಮಾತ್ರ ಹೈನುಗಾರಿಕೆಯಲ್ಲಿ ಲಾಭ ಪಡೆಯಬಹುದು. ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷರೂ ಆಗಿರುವ ಎಸ್.ಬಿ. ಜಯರಾಮ ರೈ ಹೇಳಿದರು.


ಸಹಕಾರಿ ಸಂಸ್ಥೆ ಅಭಿವೃದ್ಧಿಯಾದಲ್ಲಿ ದೇಶವೂ ಅಭಿವೃದ್ಧಿ:
ರಸಗೊಬ್ಬರ ಗೋದಾಮು ಉದ್ಘಾಟಿಸಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಮಾತನಾಡಿ, 20ವರ್ಷದ ಹಿಂದೆ ಸಹಕಾರಿ ಸಂಘಗಳು ನಷ್ಟದಲ್ಲಿ ಮುನ್ನಡೆಯುತ್ತಿದ್ದವು. ಕೃಷಿಕರು, ಆಡಳಿತ ಸಮಿತಿ, ಸಿಬ್ಬಂದಿಗಳ ಪ್ರಯತ್ನದಿಂದ ಸಹಕಾರಿ ಸಂಘಗಳು ಲಾಭಕ್ಕೆ ಬಂದಿವೆ. ಇವರಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರ ನೀಡಿದ್ದಾರೆ. ಸಹಕಾರಿ ಸಂಸ್ಥೆ ಅಭಿವೃದ್ಧಿಯಾದಲ್ಲಿ ದೇಶವೂ ಅಭಿವೃದ್ಧಿಯಾಗಲಿದೆ. ನಿಸ್ವಾರ್ಥ ಸೇವೆಯಿಂದ ನೆಲ್ಯಾಡಿ ಸಹಕಾರಿ ಸಂಘ ಬೆಳೆದಿದೆ. ಈ ಸಂಘ ಇನ್ನಷ್ಟೂ ಬೆಳೆಯಲಿ ಎಂದು ಹಾರೈಸಿದರು.


ವ್ಯವಸ್ಥಿತ ರೀತಿಯಲ್ಲಿ ಮುನ್ನಡೆಯುತ್ತಿವೆ:
ನ್ಯಾಯ ಬೆಲೆ ಅಂಗಡಿ ಉದ್ಘಾಟಿಸಿದ ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಘು ಎಸ್.ಎಂ.ಅವರು ಮಾತನಾಡಿ, ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ವ್ಯವಸ್ಥಿತ ರೀತಿಯಲ್ಲಿ ಮುನ್ನಡೆಯುತ್ತಿವೆ. ಪ್ರಧಾನ ಕಚೇರಿ, ಶಾಖಾ ಕಚೇರಿಗಳೂ ಕೋಟ್ಯಾಂತರ ರೂ.,ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.


ಬಹಳ ವರ್ಷಗಳ ಬೇಡಿಕೆ ಈಡೇರಿದೆ:
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಅವರು ಮಾತನಾಡಿ, ಗೋಳಿತ್ತೊಟ್ಟು ಶಾಖೆಗೆ 9 ಲಕ್ಷ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಆ ಬಳಿಕ ಪ್ರಧಾನ ಕಚೇರಿಗೆ ನೆಲ್ಯಾಡಿಯಲ್ಲಿ 4 ಕೋಟಿ ರೂ.ವೆಚ್ಚದ ಕಟ್ಟಡ ನಿರ್ಮಾಣಗೊಂಡಿದೆ. ಶಿರಾಡಿ ಶಾಖೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಇದೀಗ ಸಾಕಾರಗೊಂಡಿದೆ. ಇಚ್ಲಂಪಾಡಿಯಲ್ಲಿ ಪಡಿತರ ವಿತರಣೆ ವ್ಯವಸ್ಥೆ ಇದ್ದು ಮುಂದಿನ ದಿನಗಳಲ್ಲಿ ಇಚ್ಲಂಪಾಡಿ, ಕೌಕ್ರಾಡಿಯಲ್ಲೂ ಶಾಖೆ ತೆರೆಯಬೇಕೆಂಬ ಯೋಚನೆ ಇದೆ ಎಂದರು.


ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್, ಸಂಘದ ಉಪಾಧ್ಯಕ್ಷ ಕಮಲಾಕ್ಷ ಗೌಡ, ನಿರ್ದೇಶಕರಾದ ಬಾಲಕೃಷ್ಣ ಬಿ., ಸರ್ವೋತ್ತಮ ಗೌಡ, ಪ್ರಶಾಂತ ರೈ, ಸುದರ್ಶನ್, ಉಷಾ ಅಂಚನ್, ಸುಲೋಚನಾ ಡಿ., ಅಣ್ಣು ಬಿ., ಸುಮಿತ್ರಾ, ಗುರುರಾಜ ಭಟ್, ಹಣಕಾಸು ಪೂರೈಕೆ ಸಂಸ್ಥೆಯ ಪ್ರತಿನಿಧಿ ವಸಂತ ಯಸ್.,ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿ ದಯಾಕರ ರೈ ಕೆ.ಯಂ.ವರದಿ ವಾಚಿಸಿದರು. ನಿರ್ದೇಶಕ ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿದರು. ನಿರ್ದೇಶಕ ಬಾಲಕೃಷ್ಣ ಬಾಣಜಾಲು ವಂದಿಸಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.ನೆಲ್ಯಾಡಿ ಹಾಗೂ ನಿರ್ದೇಶಕ ಜಯಾನಂದ ಬಂಟ್ರಿಯಾಲ್ ಕಾರ್ಯಕ್ರಮ ನಿರೂಪಿಸಿದರು. ನೆಲ್ಯಾಡಿ ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು. ಸಂಘದ ಮೇನೇಜರ್‌ಗಳಾದ ರತ್ನಾಕರ ಪಿ., ರಮೇಶ್ ನಾಯ್ಕ್, ಮಹೇಶ್ ಎಮ್.ಟಿ., ಸಿಬ್ಬಂದಿಗಳಾದ ಅನೀಷ್ ಕೆ.ಜೆ., ಅಶೋಕ್, ಸಂದೀಪ್‌ಕುಮಾರ್, ಮುಕುಂದ ಪ್ರಸಾದ್, ರೋಶನ್‌ಕುಮಾರ್, ವಿಶ್ವನಾಥ ಕೆ., ಧನುಷ್ ಜೆ., ಪ್ರಜ್ಞಾ ಬಿ., ವನಿತ ಡಿ., ನಾಗೇಶ್ ಪಿ., ತಾರನಾಥ, ಪ್ರಮೋದ್ ಎಮ್., ವಸಂತ ಕೆ., ಪಿಗ್ಮಿ ಸಂಗ್ರಾಹಕ ರಘುನಾಥ ಕೆ., ಸಹಕರಿಸಿದರು.

ಸನ್ಮಾನ
ಕಟ್ಟಡದ ಗುತ್ತಿಗೆದಾರರಾದ ಮಾಸ್ಟರ್ ಪ್ಲಾನರಿಯ ಪ್ರಭಾಕರ, ಇಂಜಿನಿಯರ್ ಚಂದ್ರಹಾಸ ಪನ್ಯಾಡಿ, ಸಂಘದ ಹಿರಿಯ ಸದಸ್ಯ ಜೋಸೆಫ್ ಕೆ.ಕೆ.ಅವರ ಪರವಾಗಿ ಪುತ್ರ ಜೋಸ್ ಕೆ.ಜೆ., ಶಿರಾಡಿ ಶಾಖೆಗೆ ಜಾಗ ಮಾರಾಟ ಮಾಡಿದ ಅಶೋಕ ಕುನ್ನತ್ ದಂಪತಿ, ನಾಟಿ ವೈದ್ಯೆ ಶೆರ್ಲಿ ಸಣ್ಣಿ, ಈ ಹಿಂದೆ ಬಾಡಿಗೆಗೆ ಕೊಠಡಿ ನೀಡಿದ ಸಣ್ಣಿ ಅಗಸ್ಟಿನ್, ರಾಜೇಶ್ ಕೆ.ಎ.ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಇಂಜಿನಿಯರ್ ಆಕಾಶ್ ಬಿ.ಎಸ್., ಎಲೆಕ್ಟ್ರಿಕಲ್ ಗುತ್ತಿಗೆದಾರ ನಿತಿನ್ ಮಾರ್ಲ ಅವರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಅತಿಥಿಗಳಿಗೆ ಗೌರವಾರ್ಪಣೆ
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ.ಜಯರಾಮ ರೈ, ಕುಶಾಲಪ್ಪ ಗೌಡ ಪೂವಾಜೆ, ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಘು ಎಸ್.ಎಂ., ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷರಿಗೆ ಸನ್ಮಾನ
35ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ ಉಮೇಶ್ ಶೆಟ್ಟಿ ಪಟ್ಟೆ ಅವರನ್ನು ಸಂಘದ ಪರವಾಗಿ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಕೆ.ಎಂ., ಮೆನೇಜರ್ ರತ್ನಾಕರ ಬಂಟ್ರಿಯಾಲ್, ವಲಯ ಮೇಲ್ವಿಚಾರಕ ವಸಂತ ಎಸ್.,ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಹಾಗೂ ಎಲ್ಲಾ ನಿರ್ದೇಶಕರಿಗೆ, ಸಿಬ್ಬಂದಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ, ಸಿಇಒ ದಯಾಕರ ರೈ ಹಾಗೂ ನಿರ್ದೇಶಕ ಸುದರ್ಶನ ಶಿರಾಡಿ ಅವರನ್ನು ಶಿರಾಡಿ ಗ್ರಾಮಸ್ಥರು ಗೌರವಿಸಿದರು. ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಹೆಗ್ಡೆ, ನಿವೃತ್ತ ಮೆನೇಜರ್ ಸತೀಶ್ ಶೆಟ್ಟಿ, ಸಿಬ್ಬಂದಿ ಪದ್ಮನಾಭ ಶೆಟ್ಟಿ, ಡಿಸಿಸಿ ಬ್ಯಾಂಕ್‌ನ ಸೂಪರ್‌ವೈಸರ್ ಶರತ್, ಪಡಿತರ ವಿತರಕ ಗಣೇಶ್, ಕಾರ್ಯಕ್ರಮ ನಿರೂಪಕ ರವೀಂದ್ರ ಟಿ.ಅವರನ್ನು ಗೌರವಿಸಲಾಯಿತು. ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ರೈತ ಗೀತೆ ಹಾಡಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here