ಶ್ರೀ ಭಾರತೀ ವಿದ್ಯಾಸಂಸ್ಥೆ, ಆಲಂಕಾರು ಇಲ್ಲಿ ನಡೆಯುತ್ತಿದ್ದ,ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ಯಶಸ್ವಿಯಾಗಿ ನೆರವೇರಿತು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣವನ್ನು ಮಾಡಿದ ಶ್ರೀ ಭಾರತೀ ವಿದ್ಯಾಸಂಸ್ಥೆಗಳ ಆಡಳಿತ ಸಮಿತಿಯ ಸದಸ್ಯರಾದ ಗಿರಿಶಂಕರ ಸುಲಾಯ ಇವರು ಮಾತನಾಡುತ್ತಾ “ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಾಧನೆಯನ್ನು ಮಾಡುವುದರೊಂದಿಗೆ, ಜೀವನಕ್ಕೆ ಬೇಕಾದ ಕೌಶಲಗಳನ್ನು ಕಲಿಯುವಂಥವರಾಗಬೇಕು.ಮುಂದೆ ಸಮಾಜವನ್ನು ಮುನ್ನಡೆಸುವ ಸತ್ಪ್ರಜೆಗಳನ್ನು ರಾಷ್ಟ್ರೀಯ ಸೇವಾ ಯೋಜನೆಯು ಇಂಥಹ ಶಿಬಿರಗಳ ಮೂಲಕ ನಿರ್ಮಾಣ ಮಾಡುತ್ತಿದೆ. ತನ್ನ ಸ್ವಯಂಸೇವಕರಲ್ಲಿ ಶಿಸ್ತು, ಸಮಯ ಪಾಲನೆ, ಸೇವಾ ಮನೋಭಾವ, ಅತಿಥಿ ಸತ್ಕಾರ, ಪರಿಸರ ಸಂರಕ್ಷಣೆ, ವಿವಿಧ ಸಂಪನ್ಮೂಲಗಳ ಮಿತ ಬಳಕೆ, ನಾಯಕತ್ವಗುಣ, ಸಂವಹನ ಕಲೆ, ಇತ್ಯಾದಿ ಗುಣಗಳನ್ನು ಬೆಳೆಸುತ್ತದೆ. ಅಂದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿದ್ಯಾರ್ಥಿಗಳನ್ನು ಈ ಶಿಬಿರ ಸಧೃಢರನ್ನಾಗಿ ಮಾಡಿದೆ. ಇಲ್ಲಿ ಕಲಿತ ವಿಷಯಗಳನ್ನು ಮುಂದೆ ಸಮಾಜದಲ್ಲಿ ಪ್ರತಿಪಾದಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಶಿಬಿರ ನಿರ್ದೇಶಕರು- ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ ಇವರು ಮಾತನಾಡುತ್ತಾ “ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಸಮಾನತೆ, ಸಹಬಾಳ್ವೆಯನ್ನು ಕಲಿಸುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ಎಲ್ಲರೂ ಒಂದೇ ಮನೆಯವರು ಎಂಬಂಥಹ ಭಾವನೆಯನ್ನು ಮೂಡಿಸುತ್ತದೆ. ಶಿಬಿರ ಮುಗಿಸಿ ಮನೆಗೆ ತೆರಳಲು ವಿದ್ಯಾರ್ಥಿಗಳು ಹಿಂದೇಟುಹಾಕುವಷ್ಟರ ಮಟ್ಟಿಗೆ ಅವರಲ್ಲಿ ಬೆಸುಗೆಯನ್ನು ಈ ಶಿಬಿರ ಮಾಡಿದೆ. ಶಿಬಿರದ ಸಂತೋಷದ ಕ್ಷಣದ ಗುಂಗಿನಿಂದ ಹೊರಬಂದು ಪರೀಕ್ಷೆ, ತರಗತಿ, ಭವಿಷ್ಯದ ಕಡೆಗೆ ಗಮನ ಕೊಡಬೇಕಾದ್ದದ್ದು ವಿದ್ಯಾರ್ಥಿಗಳ ಈಗಿನ ಕರ್ತವ್ಯ. ಏಕೆಂದರೆ, ಜೀವನವೇ ಹೀಗೆ, ಕ್ಷಣ ಕ್ಷಣವೂ ನವ ಸನ್ನಿವೇಶಗಳಿಗೆ ಹೊಂದಿಕೊಂಡು ಬದುಕುವಂಥದ್ದು ಮಾನವರ ಅನಿವಾರ್ಯತೆ. ಎನ್.ಎಸ್.ಎಸ್ ಈ ಜೀವನ ಮೌಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತದೆ.” ಎಂದು ಹೇಳಿದರು.
ವೇದಿಕೆಯಲ್ಲಿದ್ದ ಅತಿಥಿಗಳಾದ ಶ್ರೀ ಭಾರತೀ ವಿದ್ಯಾಸಂಸ್ಥೆಗಳ ಸಂಚಾಲಕರಾದ ಶ್ರೀ ಗಂಗಾಧರ ಗೌಡ ಕುಂಡಡ್ಕ,ಶ್ರೀ ಭಾರತೀ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷರಾದ ಶ್ರೀ ಈಶ್ವರ ಗೌಡ ಪಜ್ಜಡ್ಕ,ಶ್ರೀ ಭಾರತೀ ವಿದ್ಯಾಸಂಸ್ಥೆಗಳ ಕೋಶಾಧಿಕಾರಿಗಳಾದ ಶ್ರೀ ರಾಮಚಂದ್ರ ಭಟ್ ಅತ್ರಿವನ, ಶ್ರೀ ಕ್ಷೇತ್ರ ಧ.ಗ್ರಾ.ಯೋ, ಕೊಯಿಲ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸುಧೀಶ್ ಪಟ್ಟೆ, ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಆಶಾ,ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಸತೀಶ್ ಕುಮಾರ ಜಿ.ಆರ್, ಶಿಬಿರ ಅನುಷ್ಠಾನ ಸಮಿತಿಯ ಅಧ್ಯಕ್ಷ ಇಂದುಶೇಖರ ಶೆಟ್ಟಿ,ಶಿಬಿರ ಅನುಷ್ಠಾನ ಸಮಿತಿಯ ಸದಸ್ಯರಾದ ಗಣೇಶ್ ಹಿರಿಂಜ, ಭಾರತೀ ವಿದ್ಯಾಸಂಸ್ಥೆಗಳ ಆಡಳಿತ ಸಮಿತಿಯ ಸದಸ್ಯರಾದ ಶಿವಣ್ಣ ಕಕ್ವೆ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಶಿಬಿರಾಧಿಕಾರಿಗಳಾದ ಕೀರ್ತನ್ ಶಿಬಿರದ ವರದಿಯನ್ನು ವಾಚಿಸಿದರು. ಶಿಬಿರ ನಾಯಕ ಅಶ್ವಥ್ ಮತ್ತು ನಾಯಕಿ ಮಾನ್ಯ ಶೆಟ್ಟಿಯವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಾದ ಕಿರಣ್, ಶಹನಿ, ಶ್ರೇಯ ತಮ್ಮ ಅನಿಸಿಕೆಯನ್ನು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಶಿಬಿರದ ಸಹಶಿಬಿರಾಧಿಕಾರಿ ಕು. ಸುಜಾತ ಎಲ್ಲರನ್ನು ಸ್ವಾಗತಿಸಿದರು. ಶಿಬಿರದ ಸಹಶಿಬಿರಾಧಿಕಾರಿ ಶ್ರೀ ತಿಲಕಾಕ್ಷ ಧನ್ಯವಾದ ಸಮರ್ಪಿಸಿದರು. ಕಾಲೇಜಿನ ಉಪನ್ಯಾಸಕ ಚೇತನ್ ಎಂ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಗ್ರೀಷ್ಮ ಮತ್ತು ಬಳಗ ಪ್ರಾರ್ಥನೆ ನೆರವೇರಿಸಿದರು.