ವಿಟ್ಲ: ಹಾಡ ಹಗಲೆ ಮನೆಗಳಿಗೆ ನುಗ್ಗಿದ ಕಳ್ಳರು ನಗ-ನಗದು ದೋಚಿದ ಘಟನೆ ಅ.9ರಂದು ಇಡ್ಕಿದು ಗ್ರಾಮದ ಕೆಮನಾಜೆ ಎಂಬಲ್ಲಿ ನಡೆದಿದೆ.
ಇಡ್ಕಿದು ಗ್ರಾಮದ ಕೆಮನಾಜೆ ನಿವಾಸಿ ಪುಷ್ಪರಾಜ್ ಹಾಗೂ ಕೃಷ್ಣಪ್ಪ ಕುಲಾಲ್ ರವರ ಮನೆಯಲ್ಲಿ ಅ.9ರಂದು ಕಳವು ಪ್ರಕರಣ ನಡೆದಿದೆ.
ಅಳಕೆಮಜಲು ಕೆಮನಾಜೆ ನಿವಾಸಿ ಪುಷ್ಪರಾಜ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಸುಮಾರು 15 ಪವನ್ ಚಿನ್ನಭರಣ ದೋಚಿದ್ದಾರೆ. ಈ ಮನೆಯ ಪಕ್ಕದ ನಿವಾಸಿ ಕೃಷ್ಣಪ್ಪ ಕುಲಾಲ್ (ಕುಂಞ್ಞಣ್ಣ) ಎಂಬವರ ಮನೆಯಿಂದ ಸುಮಾರು 12 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ನವರಾತ್ರಿಯ ದಿನವಾಗಿದ್ದರಿಂದ ಅ.9ರಂದು ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ಮೂರ್ತಿ ಪ್ರತಿಷ್ಟೆ ನಡೆದಿದ್ದು, ಮನೆ ಮಂದಿ ಮಂದಿರಕ್ಕೆ ಬಂದಿರುವ ವೇಳೆ ಕಳವು ಕೃತ್ಯ ನಡೆದಿದೆ. ಮನೆ ಮಂದಿ ಮರಳಿ ಮನೆಗೆ ಬಂದು ನೋಡಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಮನೆಯವರ ಚಲನವಲನದ ಬಗ್ಗೆ ಅರಿತಿರುವವರೇ ಕೃತ್ಯ ನಡೆಸಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ.