ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಏಕಮುಖ ಸಂಚಾರ ಸೋಮಾವಾರ ಮಾತ್ರ !

0

2023ರಲ್ಲೇ ಅಂದಿನ ಜಿಲ್ಲಾಧಿಕಾರಿಯಾಗಿದ್ದ ರವಿಕುಮಾರ್ ಆದೇಶ – ಇದೀಗ ಜಾರಿ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಸೋಮವಾರ ಮಾತ್ರ ಏಕಮುಖ ಸಂಚಾರದ ವ್ಯವಸ್ಥೆ ಮಾಡಿರುವ ಕುರಿತು 2023ರ ಮಾ.3ರಂದು ಆಗಿನ ಜಿಲ್ಲಾಧಿಕಾರಿ ರವಿಕುಮಾರ್ ಅವರು ಆದೇಶ ಹೊರಡಿಸಿದ್ದರು. ಆದರೆ ಇಲ್ಲಿನ ತನಕ ಅಲ್ಲಿ ಏಕಮುಖ ರಸ್ತೆಯ ಸೂಚನಾ ಫಲಕವಿರಲಿಲ್ಲ. ಇದೀಗ ಅ.9ರಂದು ರಾತ್ರಿ ಸೂಚನ ಫಲಕ ಅಳವಡಿಸಿರುವುದು ಸಾರ್ವಜನಿಕ ರಸ್ತೆಯ ಬಳಕೆದಾರರು ಮತ್ತು ದೇವಳಕ್ಕೆ ಬರುವ ಭಕ್ತರಲ್ಲಿ ಗೊಂದಲ ಉಂಟು ಮಾಡಿದೆ.


ಪುತ್ತೂರು ನಗರದಲ್ಲಿರುವ ಸಂಚಾರ ದಟ್ಟಣೆ ಮತ್ತು ಪಾರ್ಕಿಂಗ್ ಸಮಸ್ಯೆಗಳನ್ನು ನಿವಾರಿಸಿ ಸುಗಮ ಸಂಚಾರ ಮತ್ತು ರಸ್ತೆಗಳಲ್ಲಿ ಸುರಕ್ಷತಾ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ಅಭಿಪ್ರಾಯಗಳನ್ನು ಲಿಖಿತವಾಗಿ ಸಂಗ್ರಹಿಸಿ, ಕೆಲವು ಸಂಚಾರ ಮಾರ್ಪಾಡುಗಳನ್ನು ಪ್ರಾಯೋಗಿಕವಾಗಿ ಮಾಡಿದ ನಂತರ ಪುತ್ತೂರು ನಗರದ ಬಸ್ ನಿಲ್ದಾಣ ಮತ್ತು ದರ್ಬೆ ಕಡೆಗಳಲ್ಲಿ ಸಂಚಾರ ದಟ್ಟಣೆ ಬಹುಪಾಲು ಕಡಿಮೆಯಾಗಿರುತ್ತದೆ ಎಂದು ಪೊಲೀಸ್ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದರು.

ಈ ಅಧಿಸೂಚನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಸಾರ್ವಜನಿಕ ರಸ್ತೆಯಲ್ಲಿ ಸೋಮವಾರ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ದಿನ ಮಾತ್ರ ದೇವಸ್ಥಾನದ ಕಡೆಯಿಂದ ಹೋಗುವ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಮಾರ್ಪಡಿಸಿ ಆದೇಶಿಸಲಾಗಿತ್ತು. ಆದರೆ ಈ ಆದೇಶದಂತೆ ಪೊಲೀಸರು ಸೋಮವಾರ ಅದನ್ನು ಪಾಲನೆ ಮಾಡುತ್ತಿದ್ದರೂ ಅಲ್ಲಿ ಏಕಮುಖ ರಸ್ತೆಯ ಸೂಚನಾ ಫಲಕ ಅಳವಡಿಸಿರಲಿಲ್ಲ. ಅದರೆ ಅ.9ರಂದು ಏಕಾಏಕಿ ಏಕಮುಖದ ಸೂಚನಾ ಫಲಕ ಹಾಕಿದಲ್ಲದೆ ಅದರಲ್ಲಿ ಸೋಮವಾರ ಮಾತ್ರ ಎಂದು ಉಲ್ಲೇಖಿಸದ ಕಾರಣ ಸಾರ್ವಜನಿಕರನ್ನು ಗೊಂದಕ್ಕೀಡುಮಾಡಲಾಗಿತ್ತು. ಇದೀಗ ಸೂಚನಾ ಫಲಕದಲ್ಲಿ ಸೋಮವಾರ ಮಾತ್ರ ಎಂದು ಸ್ಟಿಕ್ಕರ್ ಅಂಟಿಸಲಾಗುತ್ತದೆ ಎಂದು ಪುತ್ತೂರು ಸಂಚಾರ ಪೊಲೀಸ್ ಠಾಣೆಯಿಂದ ಮಾಹಿತಿ ಲಭ್ಯವಾಗಿದೆ.


ಸೂಚನ ಫಲಕ ಅಗತ್ಯವಿಲ್ಲ:
ಪ್ರತಿ ಸೋಮವಾರ ಬೆಳಗ್ಗೆ ಸ್ವಲ್ಪ ಹೊತ್ತು ಮಾತ್ರ ಬ್ಲಾಕ್ ಆಗುವುದು. ಅದಕ್ಕೆ ಬೇಕಾಗಿ ಸೂಚನೆ ಫಲಕ ಅಳವಡಿಸುವ ಅಗತ್ಯವಿಲ್ಲ. ಪೊಲೀಸರು ಸ್ವಲ್ಪ ಹೊತ್ತು ಇದ್ದರೆ ಸಾಕು. ಇದಲ್ಲದೆ ಏಕಮುಖ ರಸ್ತೆಯ ಕುರಿತು ಭಕ್ತರಿಗೆ ಯಾವುದೇ ಮಾಹಿತಿ ನೀಡದೆ ಅಳವಡಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ನೆಲ್ಲಿಕಟ್ಟೆ ನಿವಾಸಿ ಹರಿಪ್ರಸಾದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here