ಸಾರ್ಥಕವಾಗಲಿ ಮಂಗಳಕರ ರಾತ್ರಿ

0

ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿ ಸಮನ್ವಿತೇ|
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಸ್ತುತೇ||

ನವರಾತ್ರಿ ಪರ್ವ,ಆ ಒಂಬತ್ತು ದಿನಗಳು ನಿಶಾಕಾಲದಲ್ಲಿ ದೇವಿಯನ್ನು ಪೂಜಿಸುತ್ತಾ ಕರಮುಗಿಯುವಾಗ ಒಂದು ವಿನೀತ ಭಾವ ಆವರಿಸುತ್ತದೆ. ಒಂದನೆಯ ದಿನ ಶೈಲಪುತ್ರಿ, ಎರಡನೆಯ ದಿನ ಬ್ರಹ್ಮಚಾರಿಣಿ ಎಂದು ಮುಂದುವರಿದು ಒಂಬತ್ತನೇ ದಿನದ ತನಕ ದೇವಿಯ ವಿವಿಧ ರೂಪಗಳನ್ನು ಆರಾಧಿಸುವುದು ಒಂದು ಅದ್ಭುತ. ದೇಶದ ಎಲ್ಲೆಡೆ ನಾನಾ ಕ್ರಮಗಳಲ್ಲಿ ನವರಾತ್ರಿ ಆಚರಣೆ ಜರುಗುತ್ತದೆ. ಬಂಗಾಳ ಪ್ರಾಂತ್ಯದಲ್ಲಿ ಸುಮಾರು 16ನೇ ಶತಮಾನದಿಂದೀಚೆಗೆ ನವರಾತ್ರಿ ಪರ್ವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬಂಗಾಳಿ ಶೈಲಿಯ ದೇವಿಯ ಮೂರ್ತಿಯೂ ಪ್ರಸಿದ್ಧವಾದುದಾಗಿದೆ.
ಹಬ್ಬಗಳಲ್ಲಿ ದೊಡ್ಡದೆನಿಸಿದ ಈ ಪರ್ವವು ಕರ್ನಾಟಕದೆಲ್ಲೆಡೆ ದೇವಿಯ ದೇಗುಲಗಳಲ್ಲಿ ಹಾಗೂ ಹಲವಾರು ಮನೆಗಳಲ್ಲಿ ವಿವಿಧ ರೀತಿಯಲ್ಲಿ, ವೈದಿಕ ಕ್ರಿಯಾವಿಧಿಗಳಿಂದ ಆಚರಿಸಲ್ಪಡುತ್ತದೆ.
ಒಂಬತ್ತು ದಿನಗಳು ಸಂದು ಹತ್ತನೇ ದಿನ ವಿಜಯದಶಮಿಯಲ್ಲಿ ಕೊನೆಗೊಳ್ಳುವ  ಹಬ್ಬವು ಆ ಅವಧಿಯಲ್ಲಿ ಧನಾತ್ಮಕ ವಾತಾವರಣವನ್ನು ಕಲ್ಪಿಸುತ್ತದೆ ಎನ್ನುವುದು ಸತ್ಯ.

ದುರ್ಗಾಪೂಜೆಯನ್ನು ವೀಕ್ಷಿಸುವುದು ಹಾಗೂ ಅದರಲ್ಲಿ ಪಾಲ್ಗೊಳ್ಳುವುದೇ ಚೆಂದ. ದುರ್ಗೆಯನ್ನು ಮಂತ್ರದ ಮೂಲಕವಾಗಿ ಹಾಗೂ ತಂತ್ರದಿಂದ  ವಿಧವಿಧವಾಗಿ ಪೂಜಿಸುವವರಿದ್ದಾರೆ. ಶಿವಳ್ಳಿ ಬ್ರಾಹ್ಮಣ ವರ್ಗದಲ್ಲಿ ಮಂಡಲ ಮಧ್ಯದ ಆರಾಧನೆ ಎಂಬುದಾಗಿ ಒಂದು ಆರಾಧನಾ ಪದ್ಧತಿ ಇದೆ. ದುರ್ಗಾ ಮಂಡಲ ಬರೆದು ನಂತರ ದೀಪಾರಾಧನೆಯಿಂದ ತೊಡಗಿ ಹಂತಹಂತವಾಗಿ ನಡೆಯುವ ಪೂಜಾ ವಿಧಾನ ಒಂದು ಅಚ್ಚರಿ! ದುರ್ಗಾರಾಧನೆಗೆ ಸಂಬಂಧಿಸಿದ ಆಸಕ್ತಿಕರ ವಿಷಯಗಳ ಬಗ್ಗೆ ಬೆಳಕು ಚೆಲ್ಲುವುದಾದರೆ,

ದುರ್ಗಾ ಮಂಡಲ:- ಪೂಜೆ ಪ್ರಾರಂಭ ಮಾಡುವ ಮೊದಲು ಮಂಡಲ ರಚಿಸಬೇಕಾಗುತ್ತದೆ. ಯಜುರ್ವೇದೀಯ ಪ್ರಯೋಗದ ಪ್ರಕಾರ ಎಡದಲ್ಲಿ ಗುರು ಹಾಗೂ ಬಲಭಾಗದಲ್ಲಿ ಗಣಪತಿ ಮಂಡಲ ಬಂದು ಮಧ್ಯದಲ್ಲಿ ದುರ್ಗಾ ಮಂಡಲವನ್ನು ಚಿತ್ರಿಸಲಾಗುತ್ತದೆ. ಈ ಮಂಡಲವನ್ನು ನಿರ್ದಿಷ್ಟವಾಗಿ ಕಪ್ಪು, ಕೆಂಪು, ಹಳದಿ ಹಾಗೂ ಬಿಳಿ ಬಣ್ಣಗಳನ್ನು ಬಳಸಿ ರಚಿಸುವುದು ಕ್ರಮ. ಮಂಡಲದಲ್ಲಿ ಆ ಜಗನ್ಮಾತೆಯನ್ನು ಕಾಣುವ ಮೂಲಕ ಪೂಜೆ ನಡೆಯುತ್ತದೆ‌.

ಲಲಿತಾ ಸಹಸ್ರನಾಮ:- ದೇವಿಯ ಬಗೆಗಿನ ಈ ಸಾವಿರ ನಾಮಾವಳಿಯನ್ನು ಸಾಕ್ಷಾತ್ ಶ್ರೀ ಲಲಿತೆಯೇ ವಾಗ್ದೇವಿಯರಿಗೆ ಹೇಳಿದ್ದಂತೆ! ಮಹಾಋಷಿ ಅಗಸ್ತ್ಯರಿಗೆ ಹಯಗ್ರೀವ ಲಲಿತಾ ಸಹಸ್ರನಾಮವನ್ನು ಬೋಧಿಸಿದನು ಎಂದು ಪುರಾಣ ಹೇಳುತ್ತದೆ. ಶ್ರೀಮಾತ್ರೇ ನಮಃ ಎಂದು ಪ್ರಾರಂಭವಾಗುವ ಸಹಸ್ರನಾಮ ಲಲಿತಾಂಬಿಕಾಯೈ ನಮಃ ಎಂಬಲ್ಲಿಗೆ ಕೊನೆಯಾಗುತ್ತದೆ‌. ಲಲಿತಾ ಸಹಸ್ರನಾಮ ಸ್ತೋತ್ರದಲ್ಲಿ ಪ್ರಥಮ ವಿಭಕ್ತಿಯಲ್ಲಿರುವ ದೇವಿಯ ಹೆಸರುಗಳು ಅರ್ಚನೆಯ ಸಮಯದಲ್ಲಿ ಚತುರ್ಥಿ ವಿಭಕ್ತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಶ್ರೀಮಾತಾ – ಶ್ರೀಮಾತ್ರೇ ನಮಃ. ದುರ್ಗಾಪೂಜೆಯಲ್ಲಿ ಲಲಿತಾ ಸಹಸ್ರನಾಮ ಹೇಳುತ್ತಾ ಕುಂಕುಮಾರ್ಚನೆಯನ್ನು ನೆರವೇರಿಸಲಾಗುತ್ತದೆ.

ದುರ್ಗಾ ಸಪ್ತಶತೀ :– ಜಗನ್ಮಾತೆಯ ಮಹಾತ್ಮೆಯನ್ನು ಸಾರುವ ದುರ್ಗಾ ಸಪ್ತಶತೀ ಮಹರ್ಷಿ ವೇದವ್ಯಾಸರಿಂದ ನೀಡಲ್ಪಟ್ಟ ಕೃತಿ. ಮಾರ್ಕಂಡೇಯ ಪುರಾಣದಲ್ಲಿ ಇದು ಬರುತ್ತದೆ.  ಈ ಸಪ್ತಶತಿಯಲ್ಲಿ 13 ಅಧ್ಯಾಯಗಳಿದ್ದು ಗುರುಮುಖೇನ ಪಾಠ ಹೇಳಿಸಿಕೊಂಡು ಮೂಲಮಂತ್ರದ ಉಪದೇಶವಾದ ಬಳಿಕ ಪಠಿಸಬೇಕು ಎಂಬ ನಿಯಮವಿದೆ. ಪೂಜೆಯ ಸಮಯದಲ್ಲಿ ಸಪ್ತಶತೀ ಪಾರಾಯಣ ಮಾಡಲಾಗುತ್ತದೆ. ಅದನ್ನು ಕೇಳಿದಾಗ ಭಕ್ತಿಯ ಸ್ಫುರಣೆಯಾಗುತ್ತದೆ.

ಪುಷ್ಪಾಂಜಲಿ:- ದೇವಿಗೆ ಕೇಪುಳು ಹೂವು ವಿಶೇಷ. ಆ ಪುಷ್ಪಗಳಿಂದ ನೂರೆಂಟು ಅಥವಾ ಸಾವಿರದೆಂಟು ಸಂಖ್ಯೆಯ ಪುಷ್ಪಾಂಜಲಿಯನ್ನು ಸಮರ್ಪಿಸಲಾಗುತ್ತದೆ.  ‘ಐಂ ಹ್ರೀಂ ದುಂ ದುರ್ಗಾಯೈ ನಮಃ’ ಎಂಬ ದುರ್ಗೆಯ ಮೂಲಮಂತ್ರವನ್ನು ಜಪಿಸುತ್ತಾ ಪುಷ್ಪಾರ್ಚನೆ ಗೈಯುತ್ತಿದ್ದರೆ ಕಿವಿಗಳು ಅದನ್ನು ಇನ್ನಷ್ಟು ಕೇಳಬೇಕು ಎಂಬುದಾಗಿ ಆ ಎಡೆಗೆ ತೆರೆದುಕೊಳ್ಳುತ್ತದೆ! ದೇವಿ ಬಿಂದುತರ್ಪಣ ಸಂತುಷ್ಟೆ, ಅದು ಲಲಿತಾ ಸಹಸ್ರನಾಮದಲ್ಲಿ ಉಲ್ಲೇಖವಿದೆ. ದುರ್ಗಾ ಪೂಜೆಯನ್ನು ಶಕ್ತಿ ಪೂಜೆ ಎಂಬುವುದಾಗಿ ಒಂದು ಬಗೆಯಲ್ಲಿ  ಮಾಡುವುದಿದೆ. ಆಗ ಬಿಂದುತರ್ಪಣ ನೀಡಿ ದೇವಿಗೆ ಅರ್ಚನೆ ಮಾಡಲಾಗುತ್ತದೆ. ಆಗ  ಆ ತ್ರಿಪುರ ಸುಂದರಿ ಸಂತುಷ್ಟಳಾಗುತ್ತಾಳೆ ಎಂದು ನಂಬಿಕೆ.

ಅಷ್ಟಾವಧಾನ ಸೇವೆ:- ದುರ್ಗೆ ಕಲಾಪ್ರಿಯೆ. ಆಕೆಗೆ ಕಲಾ ಸೇವೆ ಸಲ್ಲುತ್ತದೆ. ಪ್ರಣವ ಸ್ವರೂಪಿಣಿಯಾದ ಆಕೆಯನ್ನು ವೇದಮಂತ್ರಗಳಿಂದ ಪೂಜಿಸಲಾಗುತ್ತದೆ. ಹಾಗೆ,ದುರ್ಗಾ ತ್ರಿಕಾಲ ಪೂಜೆಯಲ್ಲಿ ಅಷ್ಟಾವಧಾನ ಸೇವೆಯನ್ನು ಅರ್ಪಿಸಲಾಗುತ್ತದೆ. ನಾಲ್ಕು ವೇದಗಳು, ಶಾಸ್ತ್ರ, ಪಂಚಾಂಗ ಪಠಣ, ಶಂಖನಾದ ಹಾಗೂ ಇತರ ವಾದ್ಯಗಳ ವಾದನ, ಯಕ್ಷಗಾನ,ಸಂಗೀತ ಮುಂತಾದವುಗಳನ್ನು ಈ ಸೇವೆ ಒಳಗೊಂಡಿರುತ್ತದೆ.

ದೀಪಾರಾಧನೆ:- ದೀಪವನ್ನು ಬೆಳಗಿ ಪ್ರಾರಂಭವಾಗುವ ದುರ್ಗಾಪೂಜೆ ದೀಪಾರಾಧನೆಯೊಂದಿಗೆ ಕೊನೆಯಾಗುವುದು ಕ್ರಮ.

ಅಲಂಕಾರ, ಮಂಗಳಾರತಿ:- ದೇವಿ ಅಲಂಕಾರ ಪ್ರಿಯೆಯೂ ಹೌದು. ಸುಂದರವಾದ ಅಲಂಕಾರದಿಂದ ಪೂಜೆ ಕಳೆಗಟ್ಟುವುದು. ಸಾಕಷ್ಟು ಪ್ರಮಾಣದ ಹೂವು ದೊರಕಿದಾಗ ಆಮೂಲಕ ದುರ್ಗೆಯನ್ನು ಅರ್ಚನೆ ಮಾಡಬಹುದು. ಕೇಪುಳು ಹೂವಿನ ಜೊತೆಗೆ ಸೇವಂತಿಗೆ ಮುಂತಾದ ಹೂವುಗಳು ಮತ್ತು ಕೆಲವು ಪತ್ರೆಗಳು ಲಭ್ಯವಾದಾಗ ಒಳ್ಳೆಯ ಅಲಂಕಾರ ಮೂಡಿಬರುತ್ತದೆ.
ಇದರ ಜೊತೆಗೆ ಚಿನ್ನಾಭರಣಗಳಿಂದ ಅಲಂಕರಿಸಲಾಗುತ್ತದೆ. ವೈದಿಕರಾದವರ ಕ್ರಿಯಾತ್ಮಕತೆಯಲ್ಲಿ ಅಲಂಕಾರ ಒಂದೊಂದು ರೂಪವನ್ನು ಪಡೆದು ಚೆಂದವಾಗುತ್ತದೆ. ಪೂಜೆಯ ಕೊನೆಗೆ ಮಂಗಳಾರತಿ ನೆರವೇರುತ್ತದೆ. ಪಂಚಾರತಿ, ರಥಾರತಿಯೇ ಮೊದಲಾದ ಆರತಿಗಳ ಬೆಳಗುವುದನ್ನು ನೋಡುತ್ತಾ ಜಯಘಂಟೆ, ಶಂಖದ ನಾದವನ್ನಾಲಿಸುತ್ತಾ ಇದ್ದರೆ ಒಂದು ಬೆಳಕು ಮೂಡಿದ ಅನುಭವ.

ನೈವೇದ್ಯ:– ಅಡುಗೆಮನೆಯತ್ತಲಿಂದ ಘಮ ಬಂದಾಗ ಮನಸು ಅತ್ತ ವಾಲುತ್ತದೆ. ಪ್ರಸಾದ ಎಂದು ಬಂದಾಗ ಅದು ಬೇರೆ ತೆರನಾದ ಭಕ್ತಿ ಹಾಗೂ ಒಲವು! ದುರ್ಗೆಗೆ ಯಾವ ಬಗೆಯ ನೈವೇದ್ಯ ಎಂದು ನೋಡುವುದಾದರೆ ಲಲಿತಾ ಸಹಸ್ರನಾಮದಲ್ಲೇ ಆಕೆ ಗುಡಾನ್ನಪ್ರೀತ ಮಾನಸೆ ಎಂದು ಹೇಳಲಾಗಿದೆ. ಹಾಗೆ ಅಕ್ಕಿ ಹಾಗೂ ಬೆಲ್ಲ, ತುಪ್ಪ ಮೊದಲಾದ ದ್ರವ್ಯಗಳನ್ನು ಬಳಸಿ ಮಾಡುವ ಗುಡಾನ್ನ ನೈವೇದ್ಯವಾಗಿರುತ್ತದೆ. ತ್ರಿಕಾಲ ಪೂಜೆಯಲ್ಲಿ ಗೆಣಸಲೆ ಒಂದು ವಿಶೇಷ. ದೇವಿ ಮಾಷಭಕ್ಷ್ಯ ಪ್ರಿಯೆ.ಆದ್ದರಿಂದ ಉದ್ದು ಹಾಕಿ ಮಾಡುವ ವಡೆ ಇತ್ಯಾದಿ ಅರ್ಪಿಸಲಾಗುತ್ತದೆ. ದೇವಿಯ ಪ್ರಸಾದವಾಗಿ ಇವೆಲ್ಲಾ ಮನದಲ್ಲಿ ಸ್ಥಾನ ಪಡೆಯುತ್ತದೆ.

ಪ್ರಾರ್ಥನೆ:- ಪೂಜೆ ನಡೆದು ಕೊನೆಗೆ ಕರ ಮುಗಿಯುತ್ತದೆ, ಶಿರ ಬಾಗುತ್ತದೆ. ಆ ರಾಜರಾಜೇಶ್ವರಿಯನ್ನು ಭಕ್ತಿಯಿಂದ ಪ್ರಾರ್ಥಿಸಲಾಗುತ್ತದೆ. ಆದಿ ಶಂಕರಾಚಾರ್ಯರು ರಚಿಸಿದ ದೇವ್ಯಪರಾಧ ಕ್ಷಮಾಪಣ ಸ್ತೋತ್ರವೇ ಮೊದಲಾದ ಸ್ತೋತ್ರಗಳಿಂದ ಪ್ರಾರ್ಥನೆ ನಡೆಯುತ್ತದೆ. ಹೀಗೆ ಪೂಜಾ ವಿಧಾನಗಳೂ ಕೊನೆಗೊಳ್ಳುತ್ತವೆ. ಇದಿಷ್ಟು ಪೂಜೆಯೊಳಗೆ ಅಡಕವಾಗಿರುವ ಕೆಲವು ವಿಷಯಗಳು.

ಈ ಆರಾಧನೆಯು ಒಂದೊಂದು ಮನೆಯಲ್ಲೂ ಬೇರೆ ಬೇರೆ ಪ್ರಾಂತ್ಯದಲ್ಲೂ ವಿವಿಧ ರೀತಿಯಲ್ಲಿ ನಡೆಯುತ್ತದೆ. ಹಿರಿಯರಿಂದ ನಡೆದುಕೊಂಡು ಬಂದಿರುವ ಕಟ್ಟುಕಟ್ಟಳೆಯ ಕ್ರಮಗಳನ್ನು ಪಾಲಿಸಿ ಪೂಜೆ ನಡೆಯುತ್ತದೆ. ದೇವಿಯನ್ನು ಆರಾಧಿಸಿಕೊಂಡು ಬಂದಿರುವ ವೈದಿಕ ಮನೆತನಗಳಿವೆ. ಆದರೆ ಇತ್ತೀಚೆಗೆ ವೈಭವದಿಂದ ನಡೆಯುವ ಪೂಜೆ ಹಾಗೂ ನವರಾತ್ರಿ ಆಚರಣೆ ಸಾರ್ವಜನಿಕವಾಗಿ ನಡೆಯುವಾಗ ಆಧುನಿಕತೆಯ ಸೋಗಿನಲ್ಲಿ ಮಹತ್ವ ಕಳೆದುಕೊಳ್ಳುತ್ತಿದೆ ಎಂದೆನಿಸುತ್ತಿದೆ. ಮಹಿಳೆಯರು ದಿನಕ್ಕೊಂದು ವರ್ಣದ ಸೀರೆಯನ್ನು ಧರಿಸಿ ಛಾಯಾಚಿತ್ರವನ್ನು ಪ್ರಕಟಮಾಡುವ ‘ನವರಂಗ್’ ಪರಿಕಲ್ಪನೆಯನ್ನು ಈಗ ನಾವು ಕಾಣುತ್ತೇವೆ. ಮೆರವಣಿಗೆಗಳಲ್ಲೂ ಅಹಿತಕರ ಸಂಗೀತ, ಕುಣಿತ ಇತ್ಯಾದಿ ಅನುಚಿತಗಳು ತೋರಲು ತೊಡಗಿವೆ.
ಹಿಂದೂ ಧಾರ್ಮಿಕ ಆಚರಣೆಗಳು ಶ್ರೀಮಂತಿಕೆಯನ್ನು  ಹೊಂದಿ ಸ್ವಾರಸ್ಯಕರವೂ ಆಗಿರುತ್ತವೆ. ಹಾಗಿದ್ದಾಗ ಅಂತಹಾ ಪರ್ವಾಚರಣೆಗಳನ್ನು ಅದೇ ಸ್ವರೂಪದಲ್ಲಿ ಆಚರಿಸುವುದಲ್ಲದೇ ಆಧುನಿಕತೆಯನ್ನು ಅವುಗಳಿಗೆ ಪೂರಕವಾಗಿ ಬಳಸಿಕೊಳ್ಳಬೇಕು. ನವರಂಗ್ ಪರಿಕಲ್ಪನೆ ಒಳ್ಳೆಯದು ಹೌದು. ಆದರೆ ಆ ಬಣ್ಣಗಳ ಮಹತ್ವವೇನೆಂಬುದನ್ನು ಅರಿಯಬೇಕಾಗುತ್ತದೆ.

ರಾತ್ರಿಯನ್ನೂ ಬೆಳಗು ಮಾಡುವ ದುರ್ಗಾಪೂಜೆಯ ಪರಿ ಅಮೋಘ. ಅನೇಕ ಸೂಕ್ಷ್ಮತೆಗಳನ್ನು ಪಾಲಿಸಿ ಪೂಜೆಯ ಯಶಸ್ಸಾದಾಗ ಅದೊಂದು ತೃಪ್ತಿ, ಖುಷಿ. ದುರ್ಗೆಯನ್ನು ಉಪಾಸಿಸಿ ತ್ರಿಕಾಲ ಪೂಜೆ, ಚಂಡಿಕಾ ಯಾಗ ಹಾಗೂ ಶ್ರೇಷ್ಠವಾದ ಶ್ರೀಚಕ್ರಪೂಜೆ ಮುಂತಾದ ಆಚರಣೆಗಳು ನಡೆಯುತ್ತವೆ. ನವರಾತ್ರಿ ಹಬ್ಬ ಎಲ್ಲೆಡೆ ಧನಾತ್ಮಕತೆಯನ್ನು ಪಸರಿಸುತ್ತದೆ. ಆ ಮಾತೃಕಾವರ್ಣರೂಪಿಣಿಯಾದ ಜಗನ್ಮಾತೆ ಸಮಸ್ತ ಲೋಕವನ್ನು ಪೊರೆಯುವವಳು.
ಸಮಸ್ತ ಜನರಿಗೂ ಸನ್ಮಂಗಲವಾಗವಾಗಲಿ.
|| ರಕ್ಷಮಾಂ ಜಗದೀಶ್ವರಿ ||

LEAVE A REPLY

Please enter your comment!
Please enter your name here