ಇರ್ದೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಭ್ರಮಿಸಿದ 32ನೇ ವರ್ಷದ ಶಾರದೋತ್ಸವ

0

ಪುತ್ತೂರು: ಇರ್ದೆ ಶ್ರೀವಿಷ್ಣುಮೂರ್ತಿ ದೇವಾಲಯ ಹಾಗೂ ಶಾರದೋತ್ಸವ ಸಮಿತಿ ಇದರ ವತಿಯಿಂದ ಅ.12ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ 32ನೇ ವರ್ಷದ ಶ್ರೀಶಾರದೋತ್ಸವದಲ್ಲಿ ಸಂಭ್ರಮ ಮನೆ ಮಾಡಿತು.


ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆದ ನವರಾತ್ರಿ ಉತ್ಸವವು ಅ.3ರಿಂದ ಪ್ರಾರಂಭಗೊಂಡು ಪ್ರತಿದಿನ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ವಿಶೇಷ ಕಾರ್ತಿಕ ಪೂಜೆ ಹಾಗೂ ದುರ್ಗಾಪೂಜೆಗಳು ಹಾಗೂ ಅ.11ರಂದು ಆಯುಧ ಪೂಜೆ ನೆರವೇರಿತು.


ಅ.12ರಂದು ನಡೆದ ಶಾರದೋತ್ಸವದಲ್ಲಿ ಅನಂತರಾಮ ಮಡಕುಳ್ಳಾಯ ಮತ್ತು ರಾಧಾಕೃಷ್ಣ ಭಟ್ ಕಕ್ಕೂರು ಇವರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆಗೊಂಡ ಬಳಿಕ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಸಂಘ, ನಂತರ ಶ್ರೀದೇವಿ ಹವ್ಯಾಸಿ ಯಕ್ಷಗಾನ ಕಲಾ ಸಂಘ ಗೋಳಿಪದವು ಇರ್ದೆ ಇದರ ಬಾಲ ಪ್ರತಿಭೆಗಳಿಂದ ‘ನರಕಾಸುವ ಮೋಕ್ಷ’ ಎಂಬ ಯಕ್ಷಗಾನ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಮಧ್ಯಾಹ್ನ ನಡೆದ ಸರಳ ಕಾರ್ಯಕ್ರಮದಲ್ಲಿ ಶಾರದೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷ ರಾಮಕೃಷ್ಣ ಆಳ್ವ ಬದಂತಡ್ಕರವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಂಜೆ ಶಾರದಾ ಮಾತೆಗೆ ಮಹಾಪೂಜೆಯ ಬಳಿಕ ಶ್ರೀಶಾರದಾ ಮಾತೆಯ ಶೋಭಾಯಾತ್ರೆಯು ಪ್ರಾರಂಭಗೊಂಡಿತು. ದೇವಾಲಯದಿಂದ ಹೊರಟ ಶೋಭಾಯಾತ್ರೆಯು ಇರ್ದೆ-ಜೋಡುಮಾರ್ಗ, ಪೇರಲ್ತಡ್ಕ, ಕದಿಕೆ ಚಾವಡಿ ಮಾರ್ಗವಾಗಿ ಸಂಚರಿಸಿ ಬೆಂದ್ರ್‌ತೀರ್ಥದಲ್ಲಿ ವಿಗ್ರಹದ ಜಲಸ್ಥಂಭನದ ಬಳಿಕ ರಾತ್ರಿ ದೇವಳದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಂತ್ರಾಕ್ಷತೆಯೊಂದಿಗೆ 32ನೇ ವರ್ಷದ ಶಾರದೋತ್ಸವವು ಸಂಪನ್ನಗೊಂಡಿತು.


ಸಾಂಪ್ರದಾಯಿಕ ಶೈಲಿಯಲ್ಲಿ ಶೋಭಾಯಾತ್ರೆ:
ಶೋಭಾಯಾತ್ರೆಯು ಡಿಜೆ ಶಬ್ದದ ಅಬ್ಬರಗಳಿಲ್ಲದೆ ಸಾಂಪ್ರದಾಯಿಕ ಶೈಲಿಯಲ್ಲಿಯೇ ನಡೆಯಿತು. ಶೋಭಾಯಾತ್ರೆಯಲ್ಲಿ ಇರ್ದೆ ಶ್ರೀವಿಷ್ಣು ಚಿಣ್ಣರ ಭಜನಾ ತಂಡ, ದೂಮಡ್ಕ ಶ್ರೀ ವಿಷ್ಣು ಮಕ್ಕಳ ಕುಣಿತ ಭಜನಾ ಮಂಡಳಿ, ಚೂರಿಪದವು ಶೈಲಪುತ್ರಿ ಕುಣಿತ ಭಜನಾ ತಂಡ, ಇರ್ದೆ ಶ್ರೀ ವಿಷ್ಣು ಸಿಂಗಾರಿ ಮೇದದವರಿಂದ ಚೆಂಡೆ ವಾದನ, ಇರ್ದೆ ಶಿವಾಜಿ ಫ್ರೆಂಡ್ಸ್ ಮತ್ತು ರೆಂಜ ಟೈಗರ‍್ಸ್ ಇವರಿಂದ ಆಕರ್ಷಕ ಟ್ಯಾಬ್ಲೋಗಳೊಂದಿಗೆ ಶಾರದಾ ಮಾತೆಯ ವೈಭವದ ಶೋಭಾಯಾತ್ರೆಯಲ್ಲಿ ಮೇಳೈಸಿತ್ತು.


ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಶಾರದೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಶಾರದೋತ್ಸವದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here