





ಬೆಂಗಳೂರು:ರಾತ್ರಿ ವೇಳೆಗೆ ಬೈಕೊಂದರಲ್ಲಿ ಆಗಮಿಸಿ ಕಡಬದ ಮಸೀದಿಯ ಕಂಪೌಂಡ್ ಒಳಗೆ ನುಗ್ಗಿ ಜೈಶ್ರೀರಾಮ್ ಘೋಷಣೆ ಕೂಗಿದ್ದ ಪ್ರಕರಣದಲ್ಲಿ ಆರೋಪಿಗಳಿಬ್ಬರ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.


ಕಳೆದ ವರ್ಷ ಸೆ.25ರಂದು ರಾತ್ರಿ ಇಬ್ಬರು ಯುವಕರು ಬೈಕೊಂದರಲ್ಲಿ ಮರ್ದಾಳ ಬದ್ರಿಯಾ ಜುಮ್ಮಾ ಮಸೀದಿಯ ಕಂಪೌಂಡ್ ಒಳಗೆ ಬಂದು ಮಸೀದಿಯ ವರಾಂಡದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದ್ದರು.ಮಸೀದಿಯ ಧರ್ಮಗುರುಗಳನ್ನು ಕಂಡು ಆರೋಪಿಗಳು ಪರಾರಿಯಾಗಿದ್ದರು.ಬೈಕಿನಲ್ಲಿ ಕಾಂಪೌಂಡ್ ಒಳಗಡೆ ಬಂದು ತೆರಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಕಡಬ ಠಾಣಾ ಆಗಿನ ಸಬ್ ಇನ್ಸ್‌ಪೆಕ್ಟರ್ ಅಭಿನಂದನ್, ಉಪ್ಪಿನಂಗಡಿ ಠಾಣೆಯಲ್ಲಿ ಅಂದು ಸಬ್ ಇನ್ಸ್‌ಪೆಕ್ಟರ್ ಆಗಿದ್ದ ರಾಜೇಶ್ ಹಾಗೂ ಸಿಬ್ಬಂದಿಗಳು ಪರಿಸರದ ವಿವಿಧ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದರು.ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಎರಡು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.ಈ ಘಟನೆಗೆ ಸಂಬಂಧಿಸಿ ಬಿಳಿನೆಲೆ ಸೂಡ್ಲು ನಿವಾಸಿ ಕೀರ್ತನ್ ಹಾಗೂ ಕೈಕಂಬ ನಡ್ತೋಟ ಸಚಿನ್ ಎಂಬವರ ವಿರುದ್ಧ, ನಾಗರಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.





ಹೈಕೋರ್ಟ್ ಮೊರೆ ಹೋದ ಆರೋಪಿಗಳು:
ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಆರೋಪಿಗಳು ಕರ್ನಾಟಕ ಹೈಕೋರ್ಟ್‌ಗೆ ಕ್ರಿಮಿನಲ್ ರಿಟ್ ಪಿಟಿಷನ್ ಅರ್ಜಿ ಸಲ್ಲಿಸಿದ್ದರು.ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ‘ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಕೂಗುವುದರಿಂದ ಯಾವುದೇ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟು, ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಕೀರ್ತನ್ ಕುಮಾರ್ ಮತ್ತು ಸಚಿನ್ ಕುಮಾರ್ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ವಜಾಗೊಳಿಸಿದೆ.
ಆರೋಪಿಗಳ ವಿರುದ್ಧ ನೀಡಿದ್ದ ದೂರಿನನ್ವಯ ಸ್ಥಳೀಯ ಪೊಲೀಸರು ಅವರಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಾದ 295ಎ, 447 ಹಾಗೂ 506ರಡಿ ಪ್ರಕರಣ ದಾಖಲಿಸಿಕೊಂಡಿದ್ದರು.ಮಸೀದಿ ಸಾರ್ವಜನಿಕ ಸ್ಥಳವಾಗಿರುವುದರಿಂದ ಕ್ರಿಮಿನಲ್ ಅತಿಕ್ರಮ ಪ್ರವೇಶದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರಲ್ಲದೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295ಎ ಅಡಿ ವ್ಯಾಖ್ಯಾನಿಸಿರುವಂತೆ ‘ಜೈ ಶ್ರೀರಾಮ್’ ಘೋಷಣೆ ಕೂಗುವುದು ಅಪರಾಧವಾಗುವುದಿಲ್ಲ ಎಂದೂ ಪ್ರತಿಪಾದಿಸಿದರು.
ಆದರೆ ಇದಕ್ಕೆ ಆಕ್ಷೇಪಿಸಿದ ಸರಕಾರಿ ವಕೀಲರು, ಈ ವಿಷಯದಲ್ಲಿ ಮತ್ತಷ್ಟು ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಹಾಲಿ ಪ್ರಕರಣದಲ್ಲಿನ ಆರೋಪಿತ ಅಪರಾಧದಿಂದ ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟ ಹೈಕೋರ್ಟ್, ಆರೋಪಿಗಳ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ವಜಾಗೊಳಿಸಿ ಆದೇಶಿಸಿದೆ.










