ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಸರಕಾರದಿಂದ ಕಳಪೆ ಗುಣಮಟ್ಟದ ಸೀರೆ ವಿತರಣೆ-ಕೆಲವೇ ದಿನದಲ್ಲಿ ಹರಿದ ಸೀರೆ

0

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಸಮವಸ್ತ್ರವಾಗಿ ಸರಕಾರ ವಿತರಣೆ ಮಾಡಿದ ಸೀರೆ ಕಳಪೆ ಗುಣಮಟ್ಟದ್ದಾಗಿದ್ದು ವಿತರಣೆ ಮಾಡಿದ 15 ದಿನದಲ್ಲೇ ಸೀರೆ ಹರಿದಿದ್ದಲ್ಲದೆ ನೂಲು ಬಿಟ್ಟಿದೆ ಎಂದು ಆರೋಪ ವ್ಯಕ್ತವಾಗಿದೆ.


2024-25ನೇ ಸಾಲಿನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ರಾಜ್ಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಸಮವಸ್ತ್ರ ರೂಪದಲ್ಲಿ ಸೆಪ್ಟೆಂಬರ್‌ನಲ್ಲಿ ಸೀರೆ ವಿತರಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ತಲಾ ಎರಡು ಸೀರೆಯಂತೆ ಸೆ.15ರಂದು ಸೀರೆ ವಿತರಿಸಲಾಗಿದೆ. ಅ.2ರಿಂದ ಮುಂದಿನ ಒಂದು ವರ್ಷದ ತನಕ ಸಮವಸ್ತ್ರವಾಗಿ ಸೀರೆ ಉಡಲು ಸೂಚಿಸಲಾಗಿತ್ತು. ಅದರಂತೆ ಅ.2ರಿಂದ ಸೀರೆ ಉಡಲು ಆರಂಭಿಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಎರಡು ಮೂರು ದಿನದಲ್ಲೇ ಸೀರೆ ಹರಿದು ಹೋಗಿದೆ. ಕಳೆದ ಬಾರಿ ಸೀರೆಯ ಬದಲಿಗೆ ರೂ.5೦೦ರಂತೆ ನಗದು ನೀಡಿದ್ದರು. ಇದರಲ್ಲಿ ತಮಗೆ ಬೇಕಾದ ಸೀರೆಯನ್ನು ಖರೀದಿ ಮಾಡಿ ಉಡಲು ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಸೀರೆ ವಿತರಿಸಿ ತಲಾ ಒಂದು ಸೀರೆಗೆ ರೂ.5೦೦ರಂತೆ ಬಿಲ್ ಮಾಡಲಾಗಿದೆ. ಆದರೆ ಸೀರೆಯ ಗುಣಮಟ್ಟ ಕಳಪೆಯದ್ದಾಗಿದೆ. ಕೆಲವರು ಹರಿದ ಸೀರೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಗೆ ಹಿಂತಿರುಗಿಸಿದ್ದಾರೆ ಎಂದು ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಆರೋಪ ಕೇಳಿಬಂದಿದೆ.

ಸೀರೆಯ ಗುಣಮಟ್ಟ ಚೆನ್ನಾಗಿಲ್ಲ. ಸೀರೆ ನೀಡಿದ ಕೆಲವು ದಿನಗಳಲ್ಲೇ ಹರಿದು ಹೋಗಿದೆ. ಹರಿದ ಸೀರೆಯನ್ನು ಕೆಲವರು ಇಲಾಖೆಗೆ ಹಿಂತಿರುಗಿಸಿದ್ದಾರೆ. ಕಳೆದ ವರ್ಷ ಸೀರೆಯ ಬದಲು ಹಣ ನೀಡಿದ್ದರು ಎಂದು ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ಕಮಲ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here