ಉಪ್ಪಿನಂಗಡಿ : ಭಜನೆಗೆ ಜಾತಿಯ ಬಣ್ಣವಿಲ್ಲ, ಭಜನೆಯಿಂದ ವಿಭಜನೆ ಇಲ್ಲ ಎನ್ನುವುದನ್ನು ಮರೆತು ಧಾರ್ಮಿಕ ಸಂಘಟನೆಗಳ ಬಗ್ಗೆ ಮತ್ತು ಒಂದು ಸಮುದಾಯದ ಸಹೋದರಿಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಸರಕಾರಿ ಅಧಿಕಾರಿ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಪುತ್ತೂರು ತಾಲೂಕು ಘಟಕ ಅಗ್ರಹಿಸಿದೆ.
ಈ ಬಗ್ಗೆ ಆದಿತ್ಯವಾರದಂದು ತುರ್ತು ಸಭೆ ನಡೆಸಿದ ಘಟಕವು , ಭಾರತೀಯ ಪರಂಪರೆಯಲ್ಲಿ, ಹೆಣ್ಣಿಗೆ ವಿಶೇಷ ಗೌರವ ಮತ್ತು ಪೂಜನೀಯ ಸ್ಥಾನವನ್ನು ಕಲ್ಪಿಸಿದೆ. ಭಜನೆಗೆ ಬರುವಂತಹ ಮಾತೆಯರನ್ನು ಹಾಗೂ ಸಹೋದರಿಯರನ್ನು ಮತ್ತು ಪುಟಾಣಿಗಳನ್ನು ನಮ್ಮ ಸಮಾಜವು ಅತ್ಯಂತ ಗೌರವದಿಂದ ನೋಡಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆದು ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವ ಸಲುವಾಗಿ ನೀಡಲಾದ ಹೇಳಿಕೆಯು ಖಂಡನಾರ್ಹವಾಗಿದೆ. ಸರಕಾರ ಇದರ ಬಗ್ಗೆ ಕಠಿಣ ನಿಲುವು ತಳೆದು ಸೂಕ್ತ ಕ್ರಮ ಜರುಗಿಸಬೇಕೆಂದು ಅಗ್ರಹಿಸಲಾಯಿತು.
ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಪುತ್ತೂರು ತಾಲೂಕು ಇದರ ತಾಲೂಕು ಅಧ್ಯಕ್ಷ ಲೋಕೇಶ್ ಬೆತ್ತೋಡಿ, ಉಪಾಧ್ಯಕ್ಷರಾದ, ದಿನೇಶ್ ಸಾಲಿಯಾನ್ ಮತ್ತು ಗಂಗಾಧರ ರೈ, ಕಾರ್ಯದರ್ಶಿ ಗೋಪಾಲಕೃಷ್ಣ , ಸಹ ಕಾರ್ಯದರ್ಶಿ ಶ್ರೀಮತಿ ಸುಜಯ ಮತ್ತು ಕೋಶಾಧಿಕಾರಿ ಸುಧಾಕರ್ ಕುಲಾಲ್, ಸಂಯೋಜಕರಾದ ವೆಂಕಟ್ ಭಟ್, ರಮೇಶ್ ಬಳ್ಳ, ಅರುಣ್ ರೈ ಮೊದಲಾದವರು ಉಪಸ್ಥಿತರಿದ್ದರು.