ಪುತ್ತೂರು: ಬನ್ನೂರು ಸಂತ ಅಂತೋನಿ ಚರ್ಚ್‌ನ ಕಥೋಲಿಕ್ ಸಭಾ ಘಟಕದ ವತಿಯಿಂದ ಬನ್ನೂರು ಚರ್ಚ್ ಸಭಾಂಗಣದಲ್ಲಿ ‘ದಂಪತಿಗಳ ದಿನ’ವನ್ನು ಅ.20ರಂದು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಮಾಯಿದೆ ದೇವುಸ್ ಚರ್ಚ್ ಕಥೋಲಿಕ್ ಸಭಾ ಘಟಕದ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರು ಮಾತನಾಡಿ, ಪ್ರತಿಕೂಲ ವಾತಾವರಣದಲ್ಲಿ ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಹೇಗೆ ಜೀವನ ನಡೆಸಬೇಕೆಂದು ಉದಾಹರಣೆಗಳ ಮೂಲಕ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರಿನ ಮೆಲ್ವಿನ್ ಹಾಗೂ ನೀತಾ ಫೆರ್ನಾಂಡೀಸ್ ದಂಪತಿ ಮಾತನಾಡಿ, ಆದರ್ಶ ಕುಟುಂಬ ಜೀವನಕ್ಕೆ ಬೇಕಾದ ಪ್ರೀತಿ, ಸಹನೆ, ಸಹಬಾಳ್ವೆ, ಸಹಕಾರ ಮುಂತಾದ ಮೌಲ್ಯಗಳ ಬಗ್ಗೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಬನ್ನೂರು ಚರ್ಚ್ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೊ ಮಾತನಾಡಿ, ಕುಟುಂಬ ಜೀವನದ ಮಹತ್ವ ಮತ್ತು ಆದರ್ಶ ಕುಟುಂಬ ಜೀವನ ಸಾಗಿಸಲು, ಕುಟುಂಬ ಜೀವನದ ಪ್ರಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು.
ಮಂಗಳೂರು ಧರ್ಮಪ್ರಾಂತ್ಯದ ಕುಟುಂಬ ಜೀವನ ಕೇಂದ್ರದ ನಿರ್ದೇಶಕ ವಂ|ಆಲ್ವಿನ್ ರಿಚರ್ಡ್ ಡಿ’ಸೋಜ, ಬನ್ನೂರು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬನ್ನೂರು ಕಥೋಲಿಕ್ ಸಭಾ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್ ಸ್ವಾಗತಿಸಿ, ಕಾರ್ಯದರ್ಶಿ ಲ್ಯಾನ್ಸಿ ಮಸ್ಕರೇನ್ಹಸ್ ವಂದಿಸಿದರು. ಜೋನ್ ಪಾಯಿಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮನೋರಂಜನಾ ಕಾರ್ಯಕ್ರಮ ಜರಗಿತು.
ದಿವ್ಯ ಬಲಿಪೂಜೆ..
ಸಭಾ ಕಾರ್ಯಕ್ರಮದ ಮೊದಲು ಬನ್ನೂರು ಚರ್ಚ್‌ನಲ್ಲಿ ಚರ್ಚ್ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೊ, ಮಂಗಳೂರು ಧರ್ಮಪ್ರಾಂತ್ಯದ ಕುಟುಂಬ ಜೀವನ ಕೇಂದ್ರದ ನಿರ್ದೇಶಕ ವಂ|ಆಲ್ವಿನ್ ರಿಚರ್ಡ್ ಡಿ’ಸೋಜರವರು ದಂಪತಿಗಳ ದಿನದ ಪ್ರಯುಕ್ತ ದಿವ್ಯ ಬಲಿಪೂಜೆ ನೆರವೇರಿಸಿದರು.