ʼಭಾರತದ RSS ಅಮೆರಿಕಾದಲ್ಲಿ HSSʼ-ಕಡಮಜಲು ವಿಪುಲ ಎಸ್ ರೈ ಪತ್ರಿಕಾಗೋಷ್ಠಿ

0

ಪುತ್ತೂರು: ಭಾರತದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಅರ್‌ಎಸ್‌ಎಸ್) ಅಮೆರಿಕಾದಲ್ಲೂ ಹಿಂದೂ ಸ್ವಯಂಸೇವಕ ಸಂಘದ(ಹೆಚ್‌ಎಸ್‌ಎಸ್) ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ಭಾನುವಾರ ಸಂಘದ ಶಾಖೆ ನಡೆಯುತ್ತದೆ ಎಂದು ಅಮೇರಿಕದಲ್ಲಿ ಹಿಂದೂ ಸ್ವಯಂಸೇವಕ ಸಂಘದ ಸಂಘಟನಾ ಸದಸ್ಯನಾಗಿದ್ದು ಅಮೇರಿಕಾದಲ್ಲಿ ಬೋಯಿಂಗ್ ವಿಮಾನದ ಏರೋಸ್ಪೇಸ್ ಸಿಸ್ಟಮ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ವಿಪುಲ ಎಸ್ ರೈ ಅವರು ತಿಳಿಸಿದ್ದಾರೆ.


ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಮೆರಿಕಾದಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಹಿಂದುತ್ವದ ವಿಚಾರದಲ್ಲಿ ಅಮೇರಿಕನ್ನರಿಗೆ ಗೌರವವನ್ನು ಉದ್ದೀಪನಗೊಳಿಸಲು ಹಲವಾರು ಸಂಘ ಸಂಸ್ಥೆ, ಕನ್ನಡ ಸಂಘ, ತುಳು ಸಂಘಟನೆ, ಯಕ್ಷಗಾನಕ್ಕೆ ಸಹಕಾರ, ದಕ್ಷಿಣ ಕನ್ನಡ ಒಕ್ಕೂಟ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ಯೋತಕವಾಗಿ ಹಿಂದೂ ಸ್ವಯಂ ಸೇವಕ ಸಂಘದಲ್ಲಿ ಸಂಘಟನಾ ಸದಸ್ಯನಾಗಿ ಸಕ್ರಿಯ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಮುಂದಿನ ಪೀಳಿಗೆಗೆ ಅಮೆರಿಕಾದಲ್ಲಿ ನೆಲೆಸಿರುವ ಮಕ್ಕಳಿಗಾಗಿ ಕನ್ನಡ ಶಾಲೆ, ಭಾರತದ ಸಂಸ್ಕೃತಿ ಮತ್ತು ಧರ್ಮದ ವಿಚಾರಧಾರೆಗಳನ್ನು ಕಲಿಸುವ ಚಿನ್ಮಯ ಮಿಶನ್‌ನ ಬಾಲವಿಹಾರ ಶಾಲೆ ಮುಂತಾದ ಶಾಲೆಗಳನ್ನು ನಡೆಸುವುದರಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಹಿಂದೂ ಸ್ವಯಂಸೇವಕ ಸಂಘವು ಅಮೆರಿಕಾದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ಭಾನುವಾರ ಸಂಘದ ಶಾಖೆ ನಡೆಯುತ್ತದೆ. ಕ್ಯಾಲಿಪೋರ್ನಿಯ ರಾಜ್ಯದ ಲಾಸ್‌ಎಂಜಲೀಸ್ ಜಿಲ್ಲೆಯಲ್ಲಿ 8 ಶಾಖೆಗಳಿವೆ. ಸುಮಾರು ಪ್ರತಿ ಶಾಖೆಯಲ್ಲೂ ಸುಮಾರು 50 ರಿಂದ 60 ಮಂದಿ ಪೋಷಕರು ಅವರ ಜೊತೆ ಮಕ್ಕಳು ಬರುತ್ತಾರೆ. ಮೂರು ವಾರಗಳ ಹಿಂದೆ ನ್ಯಾಂಟಕ್ಲಾರಿಟಾ ಎಂಬಲ್ಲಿ ಹೊಸ ಶಾಖೆಯು ಆರಂಭಗೊಂಡಿದೆ. ಸುಮಾರು ಒಂದೂವರೆ ಸಾವಿರ ದೇವಸ್ಥಾನಗಳ ಮೂಲಕ ಹಿಂದೂ ಕಾರ್ಯಕ್ರಮಗಳು ನಡೆಯುತ್ತಿವೆ. ಭಾರತದಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಸಂದರ್ಭ ಪ್ರತಿ ಮನೆಗೆ ಅಕ್ಷತೆಯನ್ನು ಒಂದೂವರೆ ಸಾವಿರ ದೇವಸ್ಥಾನಗಳ ಮೂಲಕ ನೀಡಲಾಗಿದೆ. ಸುಮಾರು 900 ದೇವಸ್ಥಾನಗಳಿಂದ ರಥಯಾತ್ರೆಯನ್ನು ಕೈಗೊಂಡಿದೆ. ನಾನು ಸುಮಾರು 15 ವರ್ಷದಿಂದ ಅಮೇರಿಕದಲ್ಲಿ ನೆಲೆಸಿದ್ದೇನೆ. ನರೇಂದ್ರ ಮೋದಿಯವರ ಪ್ರೇರಣೆಯಿಂದ ಜನರು ಸ್ವಯಂ ಪ್ರೇರಣೆಯಿಂದ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎಂದರು.


ಹಲವು ಸಮಾವೇಶ ಯಶಸ್ವಿ:
ಬಿಜೆಪಿಯ ವಿದೇಶ ವಿಭಾಗದ ’ಓವರ್‌ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ ಇದರ ರಾಜ್ಯ ಸಂಚಾಲಕನಾಗಿ ಭಾರತದಲ್ಲಿ ನಡೆದ ಲೋಕಸಭಾ, ವಿಧಾನ ಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿ ಪಕ್ಷದ ಸಂಘಟನಾ ಕಾರ್ಯ ಮಾಡಿದ್ದೇವೆ. ಅಲ್ಲದೆ ವಿದೇಶದಲ್ಲಿ ನೆಲೆಸಿದ ಭಾರತೀಯರಿಗೆ ಚುನಾವಣೆಯ ಮಹತ್ವ ಅರಿವು ಮೂಡಿಸಲು ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಲೋಕಸಭಾ ಸದಸ್ಯ ಕ್ಯಾ| ಬ್ರಿಜೇಶ್‌ಚೌಟ ಅವರ ಸಮಾವೇಶಗಳನ್ನು ಹಮ್ಮಿಕೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದೇವೆ ಎಂದು ವಿಪುಲ ಎಸ್ ರೈ ಹೇಳಿದರು.


ಭಾರತ ಸರಕಾರದ ಬಗ್ಗೆ ಅನಿವಾಸಿ ಭಾರತೀಯರಿಗೆ ಹೆಮ್ಮೆ:
ಭಾರತ ಸರಕಾರವು ಇತ್ತೀಚಿನ ದಿನಗಳಲ್ಲಿ ಅನಿವಾಸಿಯವರಿಗೆ ಸ್ಪಂದನೆ ನೀಡುವುದು ತುಂಬಾ ಶ್ಲಾಘನೀಯ, ಪ್ರಧಾನಿ ನರೇಂದ್ರ ಮೋದಿಯವರ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಡಾ| ಜೈಶಂಕರ್ ಅವರು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ವಿದೇಶಿಯವರಿಗೆ ತುಂಬಾ ಹೆಮ್ಮೆಯ ವಿಚಾರ. ಯಾವುದೇ ಸಂದರ್ಭದಲ್ಲಿ ಭಾರತ ಮತ್ತು ಭಾರತೀಯ ಹಿತದೃಷ್ಟಿಯಿಂದ ಕೆಲಸ ಮಾಡುವ ಮನೋಭಾವವನ್ನು ಹೊಂದಿದ ಸಚಿವರು ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುವ ಸರಕಾರದ ಬಗ್ಗೆ ಅನಿವಾಸಿ ಭಾರತೀಯರಿಗೆ ತುಂಬಾ ಹೆಮ್ಮೆ ಇದೆ ಎಂದು ವಿಪುಲ ಎಸ್ ರೈ ಹೇಳಿದರು.


ಮೋದಿ ಸಮಾವೇಶಕ್ಕೆ 40ಸಾವಿರಕ್ಕೂ ಮಿಕ್ಕಿ ನೋಂದಾವಣೆ:
ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ನರೇಂದ್ರ ಮೋದಿಯವರ ಸಮಾವೇಶಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಆರು ವಾರದಲ್ಲಿ ಈ ಸಮಾವೇಶವನ್ನು ಮಾಡಲು ಅವಕಾಶವಿತ್ತು. 40 ಜನರ ’ಸಮುದಾಯ ಸಂಪರ್ಕ’ ತಂಡವನ್ನು ರಚಿಸಿ ಸರಿ ಸುಮಾರು 2ಸಾವಿರ ಸಂಘ ಸಂಸ್ಥೆಗಳನ್ನು ಸಂಪರ್ಕ ಮಾಡಲಾಯಿತು. ಈ ಸಂಘ ಸಂಸ್ಥೆಗಳಲ್ಲಿ 700ಕ್ಕೂ ಮಿಕ್ಕಿ ಸಂಸ್ಥೆಗಳು ನೊಂದಾಯಿಸಿಕೊಂಡರು. ಅವರಿಗೆ ಸಮಾವೇಶಕ್ಕೆ ಆಹ್ವಾನ ನೀಡಲಾಯಿತು. ಆದರೆ 40ಸಾವಿರಕ್ಕೂ ಮಿಕ್ಕಿ ನೋಂದಾವಣೆ ಮಾಡಿರುವುದು ತುಂಬ ಆಶ್ಚರ್ಯವಾಗಿತ್ತು. ಈ ನಡುವೆ ಸಮಾವೇಶ ದೊರೆತ ಸ್ಥಳದಲ್ಲಿ ಜಾಗದ ಸ್ಥಳವಕಾಶ ಕೊರತೆ ಮತ್ತು ಭದ್ರತಾ ದೃಷ್ಟಿಯಿಂದ 15ಸಾವಿರ ಜನರಿಗೆ ಸಮಾವೇಶಕ್ಕೆ ಅವಕಾಶ ನೀಡಲಾಯಿತು. ಈ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಮತ್ತು ಅಮೇರಿಕದ ಸಂಬಂಧ ವೃದ್ಧಿ, ಭಾರತಕ್ಕೆ ಅನಿವಾಸಿ ಭಾರತೀಯರ ಕೊಡುಗೆಯನ್ನು ಉಲ್ಲೇಖಿಸಿದ ಮೋದಿಯವರು ಅಮೇರಿಕದಲ್ಲಿ ಮುಂದಕ್ಕೆ ಭಾರತ ಸರಕಾರದ ವಿಶೇಷ 2 ಕಾನ್ಸುಲೇಟ್‌ಗಳನ್ನು ತೆರೆಯುವುದಾಗಿ ಘೋಷಿಸಿದರು.

ವಿದೇಶದಲ್ಲಿರುವ ಭಾರತೀಯರು ಭಾರತದ ರಾಯಭಾರಿಗಳಾಗಿ ರಾಷ್ಟ್ರದ ಅಭಿವೃದ್ಧಿಗೆ ಕೆಲಸ ಮಾಡುವಂತೆ ಕರೆ ನೀಡಿದರು. ಒಟ್ಟಿನಲ್ಲಿ ಮೋದಿ ಕಾರ್ಯಕ್ರಮ ಯಶಸ್ವಿಯಾಗಿದೆ. ನಾವು ಭಾರತೀಯನಾಗಿದ್ದುಕೊಂಡು ಅಮೇರಿಕದಲ್ಲಿ ಪ್ರಧಾನಿ ಮೋದಿಯವರಿಗೆ ದೊರೆಯುತ್ತಿರುವ ಗೌರವ ಪುರಸ್ಕಾರಕ್ಕಾಗಿ ನಾವು ಹೆಮ್ಮೆ ಪಡುತ್ತಿದ್ದೇವೆ. ನನಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಸದಾವಕಾಶ ಸಿಕ್ಕಿದ್ದು ಹೆಮ್ಮೆಯ ವಿಚಾರ ಎಂದು ವಿಪುಲ ಎಸ್ ರೈ ಹೇಳಿದರು.

ಪ್ರಸ್ತುತ ನಾನು ನನ್ನ ಪತ್ನಿ ಸ್ಪೂರ್ತಿ ರೈ, ಮಗ ಸಿದ್ಧಾರ್ಥ ರೈ ಅವರೊಂದಿಗೆ ಅಮೇರಿಕಾದಲ್ಲಿ ವಾಸ್ತವ್ಯ ಹೊಂದಿದ್ದೇನೆ ಎಂದ ಅವರು ನನ್ನ ತಂದೆ ಬಿಜೆಪಿ ಜಿಲ್ಲಾ ಸಮಿತಿ ಮಾಜಿ ಉಪಾಧ್ಯಕ್ಷ, ವಿಶ್ವಹಿಂದೂ ಪರಿಷದ್ ಪುತ್ತೂರು ಪ್ರಖಂಡ ಮಾಜಿ ಅಧ್ಯಕ್ಷ ಕಡಮಜಲು ಸುಭಾಷ್ ರೈ ಮತ್ತು ಪ್ರೀತಿ ಎಸ್ ರೈ ದಂಪತಿ ಅವರ ಪ್ರೇರಣೆಯಿಂದ ನನಗೂ ಇಷ್ಟ ಇರುವ ಮತ್ತು ಸಮಾಜಕ್ಕೆ ಉಪಯೋಗ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಕಡಮಜಲು ಸುಭಾಷ್ ರೈ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here