-ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ದಿಟ್ಟ ಹೆಜ್ಜೆ-ಡಾ.ಜೆ.ಅಡಿಗ
-ಪೋಲಿಯೋ ವಿನಾಶಕಾರಿ, ಜೀವನಪರ್ಯಂತ ಅನುಭವಿಸುವ ಕಾಯಿಲೆ-ಡಾ.ಶ್ರೀಪತಿ ರಾವ್
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ರೋಟರ್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ಅ.24 ರಂದು ವಿಶ್ವ ಪೋಲಿಯೋ ದಿನಾಚರಣೆಯನ್ನು ಅ.24 ರಂದು ಬೊಳ್ವಾರು ಪ್ರಗತಿ ಆಸ್ಪತ್ರೆಯ ಸಭಾಂಗಣದಲ್ಲಿ ಆಚರಿಸಲಾಯಿತು.
ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ದಿಟ್ಟ ಹೆಜ್ಜೆ-ಡಾ.ಜೆ.ಅಡಿಗ:
ಸಂಪನ್ಮೂಲ ವ್ಯಕ್ತಿ ಹಾಗೂ ರೋಟರಿ ಕ್ಲಬ್ ಪುತ್ತೂರು ಇದರ ಪೋಲಿಯೋ ಪ್ಲಸ್ ಚೇರ್ಮ್ಯಾನ್ ಡಾ.ಜೆ.ಸಿ ಅಡಿಗರವರು ಮಾತನಾಡಿ, ಪೋಲಿಯೋ ಎಂಬ ವಿನಾಶಕಾರಿ ಕಾಯಿಲೆಯಿಂದ ಪ್ರತಿ ಮಗುವನ್ನು ರಕ್ಷಿಸಲು ಪೋಲಿಯೋ ಲಸಿಕೆಯ ಪ್ರಾಮಖ್ಯತೆಯ ಬಗ್ಗೆ ಜಾಗೃತಿಯನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರೂ ಪೋಲಿಯೋ ಮುಕ್ತ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು, ಹೆಚ್ಚಿನ ರೋಗ ನಿರೋಧಕ ವ್ಯಾಪ್ತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಗಳನ್ನು ಮುಂದುವರೆಸಬೇಕು. 2014ರಲ್ಲಿ ಭಾರತವನ್ನು ಪೋಲಿಯೋ ಮುಕ್ತ ದೇಶ ಎಂದು ಘೋಷಿಸಲಾಯಿತು. ದೊಡ್ಡ ಅನಿಷ್ಟ ರೋಗವಾಗಿರುವ ಈ ಪೋಲಿಯೋ ಅನ್ನು ವಿಶ್ವದೆಲ್ಲೆಡೆ ಪಸರಿಸದಂತೆ ನಾವೆಲ್ಲಾ ಪ್ರಯತ್ನ ಪಡಬೇಕಿದೆ. ಈ ನಿಟ್ಟಿನಲ್ಲಿ ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ಪೋಲಿಯೋ ನಿರ್ಮೂಲನೆದತ್ತ ದಿಟ್ಟ ಹೆಜ್ಜೆಯನ್ನಿಟ್ಟು ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿ ಪೋಲಿಯೋ ರೋಗದ ಬಗ್ಗೆ ಮಾತನಾಡಿದರು.
ಪೋಲಿಯೋ ಅತ್ಯಂತ ವಿನಾಶಕಾರಿ, ಜೀವನಪರ್ಯಂತ ಅನುಭವಿಸುವ ಕಾಯಿಲೆ-ಡಾ.ಶ್ರೀಪತಿ ರಾವ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಹಾಗೂ ಪ್ರಗತಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ.ಶ್ರೀಪತಿ ರಾವ್ರವರು ಸ್ವಾಗತಿಸಿ, ಪೋಲಿಯೋ ಎಂಬ ರೋಗವು ಅತ್ಯಂತ ವಿನಾಶಕಾರಿ ಹಾಗೂ ಜೀವನಪರ್ಯಂತ ಅನುಭವಿಸುವ ಕಾಯಿಲೆಯಾಗಿದೆ. ಹುಟ್ಟಿದ ಮಗುವಿನಿಂದ ಐದು ವರ್ಷದವರೆಗೆ ಪೋಲಿಯೋ ಲಸಿಕೆಯನ್ನು ತಪ್ಪದೆ ಕೊಡಬೇಕಾಗಿದೆ. ಪೋಲಿಯೋ ಮುಕ್ತ ವಿಶ್ವವಾಗಲು ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯ ಕೊಡುಗೆ ಬಹಳಷ್ಟಿದೆ ಮಾತ್ರವಲ್ಲ ಭಾರತವು ಇಂದು ಪೋಲಿಯೋ ಮುಕ್ತ ದೇಶವಾಗಿದೆ. ಆದರೆ ನಮ್ಮ ನೆರೆಯ ಪಾಕಿಸ್ತಾನ ಹಾಗೂ ಅಪಘಾನಿಸ್ತಾನದಲ್ಲಿ ಕೆಲವು ಕೇಸ್ಗಳು ಕಂಡು ಬಂದಿದ್ದು ಶೀಘ್ರದಲ್ಲೇ ಇಲ್ಲೂ ಕೂಡ ಪೋಲಿಯೋ ಮುಕ್ತವಾಗಲಿದೆ ಎಂದರು.
ರೋಟರಿ ಕ್ಲಬ್ ಪುತ್ತೂರು ಇದರ ಸಮುದಾಯ ಸೇವಾ ವಿಭಾಗದ ನಿರ್ದೇಶಕ ರಾಜ್ಗೋಪಾಲ್ ಬಲ್ಲಾಳ್, ಕ್ಲಬ್ ಸರ್ವಿಸ್ ನಿರ್ದೇಶಕ ಪರಮೇಶ್ವರ ಗೌಡ, ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಉಪನ್ಯಾಸಕಿಯರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾದ ಅಂಕಿತ ಹಾಗೂ ಜಯಲಕ್ಷ್ಮೀ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ ವಂದಿಸಿದರು. ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಹಾಗೂ ರೋಟರಿ ಕ್ಲಬ್ ಪುತ್ತೂರು ಯೂತ್ ಸರ್ವಿಸ್ ನಿರ್ದೇಶಕಿ ಪ್ರೀತಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಭಾರತ ಪೋಲಿಯೋ ಮುಕ್ತ ದೇಶ..
ಪೋಲಿಯೋಮೈಲಿಟಿಸ್ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸಲು ಮೊದಲ ತಂಡವನ್ನು ಮುನ್ನೆಡೆಸಿದ್ದ ಜೋನಾಸ್ ಸಾಲ್ಕ್ರವರ ಜನ್ಮದಿನದ ನೆನಪಿಗಾಗಿ ರೋಟರಿ ಇಂಟರ್ನ್ಯಾಷನಲ್ನಿಂದ ಅಕ್ಟೋಬರ್ 24 ವಿಶ್ವ ಪೋಲಿಯೊ ದಿನವನ್ನು ಸ್ಥಾಪಿಸಲಾಯಿತು. ಆದ್ದರಿಂದ ಪೋಲಿಯೊ ಲಸಿಕೆ ಮತ್ತು ಪೋಲಿಯೊ ನಿರ್ಮೂಲನೆಗಾಗಿ ಜಾಗೃತಿ ಮೂಡಿಸಲು ಮತ್ತು ರೋಗದ ವಿರುದ್ಧದ ಹೋರಾಟದಲ್ಲಿ ಜಾಗರೂಕರಾಗಿರಲು ದೇಶಗಳಿಗೆ ಕರೆ ನೀಡಲು ಪ್ರತಿ ವರ್ಷ ಅ.೨೪ ರಂದು ವಿಶ್ವ ಪೋಲಿಯೊ ದಿನವನ್ನು ಆಚರಿಸಲಾಗುತ್ತದೆ. 2014ರಲ್ಲಿ ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿ ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದೆ.
ಮಾರ್ಚ್ 4ರಂದು ಪಲ್ಸ್ ಪೋಲಿಯೋ..
ದೇಶಕ್ಕೆ ಸದೃಢ, ಆರೋಗ್ಯವಂತ ಮಕ್ಕಳನ್ನು ರೂಪಿಸುವ ಉದ್ಧೇಶದಿಂದ ಪಲ್ಸ್ ಪೋಲಿಯೊ ಅಭಿಯಾನ ನಡೆಯಲಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗುತ್ತದೆ. ಪೋಲಿಯೋ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು ಇದು ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದ ಶಾಶ್ವತ ಅಂಗವೈಕಲ್ಯ ಉಂಟಾಗಬಹುದು. ಆದ್ದರಿಂದ ತಪ್ಪದೇ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಪೋಲಿಯೊ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಜನತೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಮಾರ್ಚ್ 4ರಂದು ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದೆ ಎಂದು ರೋಟರಿ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ರವರು ತಿಳಿಸಿದ್ದಾರೆ.