ಕೊೖಲದ ರಕ್ಷಿತಾ ಸಹಿತ ಹಲವರಿಗೆ ವಂಚನೆ – ಪೆರ್ಲದ ಸಚಿತಾ ರೈ ವಿದ್ಯಾನಗರ ಪೊಲೀಸರಿಂದ ಬಂಧನ

0

ಪುತ್ತೂರು: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೊೖಲದ ರಕ್ಷಿತಾ ಸಹಿತ 12ಕ್ಕೂ ಹೆಚ್ಚು ಮಂದಿಯಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಆರೋಪದಲ್ಲಿ ಶಾಲಾ ಶಿಕ್ಷಕಿ, ಪೆರ್ಲ ಶೇಣಿ ಬಳ್ತಕ್ಕಲ್ ನಿವಾಸಿ ಸಚಿತಾ ರೈ(27ವ.)ಎಂಬಾಕೆಯನ್ನು ಕಾಸರಗೋಡು ವಿದ್ಯಾನಗರ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.


ಬಂಧಿತ ಸಚಿತಾ ರೈ 12ಕ್ಕೂ ಹೆಚ್ಚು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಳೆ ಎಂದು ಹೇಳಲಾಗಿದ್ದು, ಈಕೆಯ ವಿರುದ್ಧ ಉಪ್ಪಿನಂಗಡಿ, ಬದಿಯಡ್ಕ, ಕುಂಬಳೆ, ಮಂಜೇಶ್ವರ, ಕಾಸರಗೋಡು, ಆದೂರು, ಮೇಲ್ಪರಂಬ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದ ಸಚಿತಾ ರೈ ಗುರುವಾರ ಸಂಜೆ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ ವೇಳೆ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಸಿಪಿಸಿಆರ್‌ಐ (ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್), ಕೇಂದ್ರೀಯ ವಿದ್ಯಾಲಯ, ಕರ್ನಾಟಕ ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಎಸ್‌ಬಿಐ ಮುಂತಾದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಲವರಿಂದ ಲಕ್ಷ ಲಕ್ಷ ರೂಪಾಯಿಗಳನ್ನು ಸಚಿತಾ ಸಂಗ್ರಹಿಸಿದ್ದರು. ಕುಂಬಳೆ ಕಿದೂರಿನ ನಿಶ್ಮಿತಾ ಶೆಟ್ಟಿ ಎಂಬವರು ಮೊದಲು ದೂರು ದಾಖಲಿಸಿ ಸಚಿತಾ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಇತರ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಸಿಪಿಸಿಆರ್‌ಐನಲ್ಲಿ ಕೆಲಸ ಕೊಡಿಸುವುದಾಗಿ ನಿಶ್ಮಿತಾ ಶೆಟ್ಟಿಗೆ ಸಚಿತಾ ಸುಮಾರು 15 ಲಕ್ಷ ರೂ. ವಂಚಿಸಿದ್ದಾರೆ. ಅಲ್ಲದೆ ಕೇಂದ್ರೀಯ ವಿದ್ಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ದೇಲಂಪಾಡಿಯ ಸುಚಿತ್ರಾ ರಾವ್ ಎಂಬವರಿಗೆ 7,31,5೦೦ ರೂ. ವಂಚಿಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು, ಇನ್ನಷ್ಟು ವಂಚನೆ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.


ರಕ್ಷಿತಾಗೆ 13.11 ಲಕ್ಷ ರೂ.ವಂಚನೆ:
ವಂಚಕಿ ಸಚಿತಾ ಕ್ಲಾಸ್‌ಮೇಟ್ ಆಗಿದ್ದ ಕೊಲದ ರಕ್ಷಿತಾ ಅವರಿಗೆ ಇರಿಗೇಶನ್ ಇಲಾಖೆಯಲ್ಲಿ ಕೆಲಸ ಕೊಡುವುದಾಗಿ ಹೇಳಿ ೨.೫೦ ಲಕ್ಷ ರೂ. ಹಾಗೂ ಆ ಬಳಿಕ ಪುತ್ತೂರು ಎಸ್‌ಬಿಐ ಬ್ಯಾಂಕ್‌ನಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಹಣ ಪಡೆದುಕೊಂಡಿದ್ದರು. 13-9-2024ರಿಂದ 23-9-2024ರ ನಡುವೆ 13.11 ಲಕ್ಷ ರೂ.ಪಡೆದು ವಂಚಿಸಿರುವ ಬಗ್ಗೆ ರಕ್ಷಿತಾ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸಚಿತಾ ವಿರುದ್ಧ ಕೇಸು ದಾಖಲಿಸಿದ್ದಾರೆ. ವಂಚಕಿ ಸಚಿತಾ ರೈ ಡಿವೈಎಫ್‌ಐ ಜಿಲ್ಲಾ ಸಮಿತಿಯ ಮಾಜಿ ಸದಸ್ಯೆಯಾಗಿದ್ದು ಬಾದೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಕಣ್ಣೂರು ಸೆಂಟ್ರಲ್ ಜೈಲಿಗೆ:
ಬಂಧಿತ ಸಚಿತಾ ರೈಯನ್ನು ಗುರುವಾರವೇ ಪೊಲೀಸರು ಕಾಸರಗೋಡು ಪ್ರಥಮ ದರ್ಜೆ ಮೆಜೆಸ್ಟ್ರೇಟ್‌ರವರ ಮುಂದೆ ಹಾಜರುಪಡಿಸಿದ್ದು, ಆರೋಪಿಗೆ ರಿಮಾಂಡ್ ವಿಧಿಸಿ ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸಲು ಮೆಜಿಸ್ಟ್ರೇಟ್ ಆದೇಶಿಸಿದ್ದರು. ಅದರಂತೆ ಆರೋಪಿಯನ್ನು ಕಣ್ಣೂರು ಮೆಜಿಸ್ಟ್ರೇಟ್ ಜೈಲಿಗೆ ಕಳುಹಿಸಲಾಗಿದೆ. ಹಲವರಿಂದ ಪಡೆದುಕೊಂಡಿರುವ 78 ಲಕ್ಷ ರೂಪಾಯಿಯನ್ನು ಕುಂಜಾರು ನಿವಾಸಿ ಚಂದ್ರಶೇಖರನಿಗೆ ಹಸ್ತಾಂತರಿಸಿದ್ದಾಗಿ ಸಚಿತಾ ರೈ ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

LEAVE A REPLY

Please enter your comment!
Please enter your name here