45 ಕೋ.ರೂ. ಬಿಡುಗಡೆ: ಅಶೋಕ್ ಕುಮಾರ್ ರೈ
ಉಪ್ಪಿನಂಗಡಿ: 34 ನೆಕ್ಕಿಲಾಡಿ – ಬೊಳುವಾರು ರಾಜ್ಯ ಹೆದ್ದಾರಿಯನ್ನು ಮಾದರಿ ರಸ್ತೆಯನ್ನಾಗಿ ರೂಪಿಸಬೇಕು ಎಂಬುದು ನನ್ನ ಕನಸಾಗಿದ್ದು, ಈ ರಸ್ತೆಯ ಅಭಿವೃದ್ಧಿಗೆ 45 ಕೋಟಿ ರೂ. ಮಂಜೂರಾಗಿದ್ದು, ಇನ್ನು ಹೆಚ್ಚುವರಿಯಾಗಿ 10 ಕೋಟಿ ರೂ.ಗೆ ಸರಕಾರಕ್ಕೆ ಶಿಫಾರಸ್ಸು ಸಲ್ಲಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ನೆಕ್ಕಿಲಾಡಿಯಿಂದ ಪುತ್ತೂರಿನ ಬೊಳುವಾರಿನವರೆಗೆ ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖಾಧಿಕಾರಿಗಳ ತಂಡದೊಂದಿಗೆ ಹೆದ್ದಾರಿಯನ್ನು ಪರಿಶೀಲಿಸಿ ಕಾಮಗಾರಿಯ ಬಗ್ಗೆ ಸೂಕ್ತ ನಿರ್ದೇಶನ ನೀಡಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಈ ರಸ್ತೆಯಲ್ಲಿ ಈಗಾಗಲೇ ಬೇರಿಕೆಯಿಂದ ಬೊಳಂತಿಲದವರೆಗೆ 10 ಕೋ.ರೂ.ನ ಕಾಮಗಾರಿ ನಡೆಯುತ್ತಾ ಇದೆ. 2023-24ರಲ್ಲಿ 20 ಕೋ.ರೂ. ಮಂಜೂರಾಗಿ, ಟೆಂಡರ್ ಪ್ರಕ್ರಿಯೆ ನಡೆದಿದ್ದು, ಇದರಲ್ಲಿ ಬೊಳುವಾರಿನಿಂದ ಪಡೀಲ್ವರೆಗೆ ಹಾಗೂ ಕೋಡಿಂಬಾಡಿಯಲ್ಲಿ ಚತುಷ್ಪಥ ರಾಜ್ಯ ಹೆದ್ದಾರಿಯ ಕಾಂಕ್ರೀಟ್ ಕಾಮಗಾರಿ ನಡೆಯಲಿದೆ. ಬೊಳಂತಿಲದಿಂದ ನೆಕ್ಕಿಲಾಡಿಯವರೆಗಿನ ಚತುಷ್ಪಥ ರಸ್ತೆ ಕಾಮಗಾರಿಗೆ 15 ಕೋ. ರೂ. ಬಿಡುಗಡೆಯಾಗಿದೆ. ಹೀಗೆ ಒಟ್ಟು ಈ ರಾಜ್ಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗೆ 45 ಕೋ.ರೂ. ಬಿಡುಗಡೆಯಾಗಿದೆ. ನೆಕ್ಕಿಲಾಡಿಯಲ್ಲಿ ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ಅಂಡರ್ಪಾಸಿಂಗ್ ಅವರ ನಕ್ಷೆ ಪ್ರಕಾರ ಮುಂದಕ್ಕೆ ಇತ್ತು. ಆಗ ಲೋಕೋಪಯೋಗಿ ಅಧಿಕಾರಿಗಳು ರಾಜ್ಯಹೆದ್ದಾರಿಯನ್ನು ನೆಕ್ಕಿಲಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಜೋಡಿಸುವ ಯೋಜನಾ ನಕ್ಷೆಯನ್ನು ರೂಪಿಸಿದ್ದರು. ಅದು 110 ಮೀ. ಇತ್ತು. ಆದರೆ ಈಗ ರಾಷ್ಟ್ರೀಯ ಹೆದ್ದಾರಿಯ ಅಂಡರ್ಪಾಸಿಂಗ್ ಹಿಂದಕ್ಕೆ ಹೋಗಿದ್ದು, ಲೋಕೋಪಯೋಗಿ ಇಲಾಖೆಯ ಮೊದಲಿನ ನಕ್ಷೆಯ ಪ್ರಕಾರ ಈ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಗೆ ಜೋಡಿಸಿದರೆ ನೆಕ್ಕಿಲಾಡಿ ಬಳಿ ಹೋಗಿ ವಾಪಸ್ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಮೂಲಕ ಹಿಂದಕ್ಕೆ ಬಂದು ಅಂಡರ್ಪಾಸಿಂಗ್ ಮೂಲಕ ಸಾಗಬೇಕಾಗಿದೆ. ಭವಿಷ್ಯತ್ನ ಚಿಂತನೆಯಿಟ್ಟು ನೋಡಿದಾಗ ಇದರಿಂದ ಮುಂದಕ್ಕೆ ಹಲವು ಸಮಸ್ಯೆಗಳು ಉದ್ಭವಿಸಬಹುದಾಗಿದೆ. ಆದ್ದರಿಂದ ಬೊಳಂತಿಲದ ಪೆಟ್ರೋಲ್ ಪಂಪ್ನಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿಯ ಅಂಡರ್ಪಾಸಿಂಗ್ಗೆ ರಾಜ್ಯ ಹೆದ್ದಾರಿಯನ್ನು ಜೋಡಿಸಲು ಮರು ಸರ್ವೇ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅವರ ಸರ್ವೇಯ ಪ್ರಕಾರ ಈ ನೇರವಾದ ರಸ್ತೆಯು 355 ಮೀ. ಉದ್ದ ಬರುತ್ತದೆ. ಅಲ್ಲಿ ಕೆಲವು ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಇದಕ್ಕೆ ಹೆಚ್ಚುವರಿಯಾಗಿ 10 ಕೋ.ರೂ. ಬೇಕಾಗಬಹುದು. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಹಸಿರೀಕರಣ, ಸೌಂದರ್ಯಕ್ಕೆ ಆದ್ಯತೆ:
ಬೊಳುವಾರು- ನೆಕ್ಕಿಲಾಡಿ ಚತುಷ್ಪಥ ರಾಜ್ಯ ಹೆದ್ದಾರಿಯುದ್ದಕ್ಕೂ ವಿದ್ಯುತ್ ದೀಪ ಅಳವಡಿಸಲು 5 ಕೋ.ರೂ. ಬಿಡುಗಡೆ ಮಾಡಲಾಗಿದೆ. ಅಲ್ಲದೇ, ರಸ್ತೆಯ ಮಧ್ಯದ ಡಿವೈಡರ್ನಲ್ಲಿ ಹೈದ್ರಾಬಾದ್ನಿಂದ ತಂದು ಬೋಗನ್ವಿಲ್ಲಾ ಹೂವಿನ ಗಿಡಗಳನ್ನು ನೆಡಲಾಗುವುದು. ಹೆದ್ದಾರಿಯ ಎರಡೂ ಬದಿಗಳಲ್ಲಿ ಹಣ್ಣಿನ ಮರಗಳ ನಾಟಿ ಮಾಡಲಾಗುವುದು. 250ರಿಂದ 350 ಗಿಡಗಳನ್ನು ಈಗಾಗಲೇ ನಾಟಿ ಮಾಡಲಾಗಿದೆ. ನಗರ ಸಭಾ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಗೆ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಗೆ ಇದರ ಜವಾಬ್ದಾರಿ ನೀಡಲಾಗಿದೆ. ಇದಕ್ಕಾಗಿ 10 ಲಕ್ಷ ರೂ.ಗಳನ್ನು ನೀಡಲಾಗಿದೆ. ಇದಕ್ಕೆ ಇನ್ನು ಹೆಚ್ಚಿನ ಅನುದಾನ ಬೇಕಿದ್ದರೆ ನೀಡಲಾಗುವುದು. ಬರೇ ಗಿಡಗಳನ್ನು ನಾಟಿ ಮಾಡಿದರೆ ಸಾಲದು ಅದನ್ನು ಪೋಷಣೆ ಮಾಡುವ ಕೆಲಸವೂ ಆಗಬೇಕಿದೆ. ಬೇಸಿಗೆಯಲ್ಲಿ ಇದಕ್ಕೆ ನೀರಿನ ವ್ಯವಸ್ಥೆ ಮಾಡಲು ಆಯಾಯ ಗ್ರಾ.ಪಂ.ಗೆ ಸೂಚಿಸಲಾಗುವುದು. ರಸ್ತೆಯ ಮಧ್ಯದಲ್ಲಿರುವ ಹೂವಿನ ಗಿಡಗಳು ಹಾಗೂ ರಸ್ತೆ ಬದಿಯ ಹಣ್ಣಿನ ಗಿಡಗಳಿಗೆ ಡ್ರಿಪ್ ಹಾಗೂ ಸ್ಪಿಂಕರ್ ಸಿಸ್ಟಮ್ ಮಾಡಿ, ಪೈಪ್ ಹಾಕಿ ಕೊಡುವ ಕೆಲಸವನ್ನು ನಾವು ಮಾಡುತ್ತೇವೆ. ಅದಕ್ಕೆ ಗೇಟ್ವಾಲ್ ಓನ್ ಮಾಡಿ ನೀರುಣಿಸುವ ಜವಾಬ್ದಾರಿ ಮಾತ್ರ ಆಯಾ ವ್ಯಾಪ್ತಿಯ ಗ್ರಾ.ಪಂ. ಮಾಡಬೇಕಿದೆ. ಅದಕ್ಕೆ ಕಾಲ ಕಾಲಕ್ಕೆ ತಕ್ಕ ಗೊಬ್ಬರ ಹಾಕುವ ವ್ಯವಸ್ಥೆ, ನಿರ್ವಹಣೆಯನ್ನು ಅರಣ್ಯ ಇಲಾಖೆಯವರು ಮಾಡುತ್ತಾರೆ. ಒಟ್ಟಿನಲ್ಲಿ ನೆಕ್ಕಿಲಾಡಿ- ಬೊಳುವಾರು ರಸ್ತೆಯು ಹಸೀರಿಕರಣ, ಸೌಂದರ್ಯದಿಂದ ಕೂಡಿ ಒಂದು ಮಾದರಿ ರಸ್ತೆಯಾಗಿ ರೂಪುಗೊಳ್ಳಬೇಕಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕರು, ಮಳೆ ಹಾಗೂ ಚುನಾವಣಾ ನೀತಿ ಸಂಹಿತೆಯಿಂದ ಕೆಲವು ಕಾಮಗಾರಿಗಳಿಗೆ ತಡೆಯಾಗಿತ್ತು. ಇನ್ನು ನಾಲ್ಕೈದು ದಿನಗಳಲ್ಲಿ ಎಲ್ಲಾ ರಸ್ತೆಗಳ ಹೊಂಡ ಮುಚ್ಚುವ ಕಾಮಗಾರಿಯೂ ನಡೆಯಲಿದ್ದು, ಇನ್ನುಳಿದ ರಸ್ತೆ ಕಾಮಗಾರಿಯೂ ನಡೆಯಲಿದೆ ಎಂದರು.
ಈ ಸಂದರ್ಭ ಲೋಕೋಪಯೋಗಿ ಇಲಾಖೆಯ ಎಇಇ ರಾಜಾರಾಮ್, ಎಇ ತೌಸೀಫ್, ವಲಯ ಅರಣ್ಯಾಧಿಕಾರಿ ಕಿರಣ್, ಸಾಮಾಜಿಕ ಅರಣ್ಯದ ವಲಯ ಅರಣ್ಯಾಧಿಕಾರಿ ಪಿ.ಕೆ. ವಿದ್ಯಾರಾಣಿ, ಉಪ ವಲಯ ಅರಣ್ಯಾಧಿಕಾರಿ ಯಶೋಧರ ಕೆ. ಹಾಗೂ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ರಹಿಮಾನ್ ಯುನಿಕ್, ವಿಕ್ರಂ ಶೆಟ್ಟಿ ಅಂತರ, ಪ್ರಹ್ಲಾದ್ ಬೆಳ್ಳಿಪ್ಪಾಡಿ ಮತ್ತಿತರರಿದ್ದರು.
ಗಿಡ-ಮರಗಳನ್ನು ಮುಟ್ಟಬೇಡಿ: ಶಾಸಕರ ಮನವಿ
ರಸ್ತೆ ಮಧ್ಯೆ ನೆಟ್ಟಿರುವ ಹೂವಿನ ಗಿಡಗಳನ್ನು ಹಾಗೂ ರಸ್ತೆ ಬದಿ ನೆಟ್ಟಿರುವ ಹಣ್ಣಿನ ಗಿಡಗಳನ್ನು, ಅದರ ರಕ್ಷಣೆಗೆಂದು ಅದಕ್ಕೆ ಸುತ್ತಿರುವ ಮ್ಯಾಟ್ ಅನ್ನು, ಅವುಗಳಿಗೆ ಜೋಡಿಸಿರುವ ನೀರಿನ ಪೈಪ್ಗಳನ್ನು ಕೆಲವರು ಕಿತ್ತುಕೊಂಡು ಹೋಗುತ್ತಾರೆ. ದಯಮಾಡಿ ಆ ಕೆಲಸ ಮಾಡಬೇಡಿ. ನಿಮಗೆ ಹೂವಿನ ಗಿಡಗಳು, ಹಣ್ಣಿನ ಗಿಡಗಳ ಅಗತ್ಯತೆ ಇದ್ದರೆ ನನ್ನ ಬಳಿ ಹೇಳಿ ನಾನು ಅದನ್ನು ವ್ಯವಸ್ಥೆ ಮಾಡಿಕೊಡುತ್ತೇನೆ. ಅದು ಬಿಟ್ಟು ಅವುಗಳನ್ನು ಕಿತ್ತುಕೊಂಡು ಹೋಗುವ ಕೆಲಸ ಮಾಡಬೇಡಿ. ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ಮಾಧ್ಯಮದೆದುರು ಕೈ ಮುಗಿದು ಮನವಿ ಮಾಡಿಕೊಂಡ ಶಾಸಕ ಅಶೋಕ್ ಕುಮಾರ್ ರೈಯವರು, ಒಂದು ವೇಳೆ ಆ ರೀತಿಯ ದುರ್ನಡತೆ ಯಾರಾದರೂ ಮಾಡಿದರೆ ಅದರ ಪೋಟೋ ತೆಗೆದು ನನಗೆ ಕಳುಹಿಸಿ. ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ವ್ಯವಸ್ಥೆ ನಾನು ಮಾಡುತ್ತೇನೆ ಎಂದರು.