‘ನನಗಲ್ಲ ನಿನಗೆ’ ಎನ್ನುವ ಸೇವಾ ಭಾವನೆಯೇ ದೇಶ ಸೇವೆಯ ಮೊದಲ ಹೆಜ್ಜೆ: ಡಾ.ನಂದೀಶ್ ವೈ.ಡಿ.
ಪುತ್ತೂರು: ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2023-24ನೇ ಸಾಲಿನ ಎನ್. ಎಸ್. ಎಸ್. ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ನಂದೀಶ್ ವೈ. ಡಿ.ಯವರು ‘ಭಾವನಾತ್ಮಕ ಬುದ್ಧಿವಂತಿಕೆ ಮತ್ತು ದೇಶ ಪ್ರೇಮ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಮ್ಮ ಮನಸ್ಸು ಯಾವ ರೀತಿ ಯೋಚನೆ ಮಾಡುತ್ತದೆಯೋ ಅದೇ ರೀತಿ ನಮ್ಮ ಎಲ್ಲಾ ವರ್ತನೆಗಳು ಇರುತ್ತದೆ. ಭಾವನಾತ್ಮಕ ಬುದ್ಧಿವಂತಿಕೆಯು ನಿಮ್ಮ ಭಾವನೆಗಳ ಸ್ವಯಂ ಅರಿವು ಮೂಡಿಸುವ ಆಲೋಚನೆಗಳನ್ನು ತರುವಂತಹ ಅಂಶವಾಗಿದ್ದು ನಿಮ್ಮ ಶಕ್ತಿ ಹಾಗೂ ದೌರ್ಬಲ್ಯದ ಅರಿವು ಮೂಡಿಸುತ್ತದೆ. ಸಮಾಜದ ಅವಶ್ಯಕತೆಗೆ ತಕ್ಕಂತೆ ಪ್ರಜ್ಞಾವಂತ ನಾಗರಿಕರಾಗಿ ನಾವು ಸ್ಪಂದಿಸಿದರೆ ಅದುವೇ ದೊಡ್ಡ ದೇಶ ಪ್ರೇಮ ಎಂದರು. ಕಾನೂನು ವಿದ್ಯಾರ್ಥಿಗಳಾಗಿ, ಎನ್.ಎಸ್. ಎಸ್. ಸ್ವಯಂಸೇವಕರಾಗಿ ನೀವು ದೇಶದ ಅವಶ್ಯಕತೆಗೆ ಅನುಸಾರ ಸ್ಪಂದಿಸುವ ಮನಸ್ಸನ್ನು ಮೊದಲು ರೂಪಿಸಿಕೊಳ್ಳಿ. ಎನ್. ಎಸ್.ಎಸ್ ನ ಧ್ಯೇಯ ವಾಕ್ಯ ‘ನನಗಲ್ಲ ನಿನಗೆ’ ಎನ್ನುವ ‘ಸೇವಾ ಭಾವನೆ’ಯೇ ದೇಶ ಸೇವೆಯ ಮೊದಲ ಹೆಜ್ಜೆ. ಅದನ್ನು ಜೀವನಪರ್ಯಂತ ಪಾಲಿಸುವುದೇ ದೇಶ ಪ್ರೇಮವಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ. ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಉನ್ನತಿಯೊಂದಿಗೆ ಭಾವನಾತ್ಮಕ ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸಿದಾಗ ಜೀವನದಲ್ಲಿ ಎದುರಿಸಬಹುದಾದಂತಹ ಸನ್ನಿವೇಶಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಯು ಸಮಾಜದೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು, ಈ ಮಹಾವಿದ್ಯಾಲಯದಲ್ಲಿ ಸಿಗುವ ಎನ್.ಎಸ್.ಎಸ್.ನಂತಹ ವೇದಿಕೆಗಳನ್ನು ಬಳಸಿಕೊಂಡು, ಭವಿಷ್ಯದಲ್ಲಿ ಉನ್ನತ ಹಂತಕ್ಕೆ ಏರುವ ಜೊತೆಗೆ, ಸೇವೆಯ ಮೂಲಕ ದೇಶ ಪ್ರೇಮವನ್ನು ಬೆಳೆಸಿಕೊಂಡು ಒಬ್ಬ ಪ್ರಜ್ಞಾವಂತ ನಾಗರಿಕನಾಗಿ ಬದುಕಿ ಎಂದು ಶುಭಹಾರೈಸಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಪ್ರಾಸ್ತವಿಕವಾಗಿ ಮಾತನಾಡಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಕು. ಶ್ರೀರಕ್ಷಾ ರವರ ನೇತೃತ್ವದಲ್ಲಿ ಎನ್.ಎಸ್.ಎಸ್ ಸ್ವಯಂಸೇವಕರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿ ನಾಯಕಿ ಕು. ಅಕ್ಷತಾ ವಾರ್ಷಿಕ ವರದಿಯನ್ನು ಮಂಡಿಸಿದರು. ಇನ್ನೊರ್ವ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿ ನಾಯಕಿ ಕು. ವರ್ಷ ಸ್ವಾಗತಿಸಿ, ಸ್ವಯಂಸೇವಕಿ ವಿದ್ಯಾಶ್ರೀ ವಂದಿಸಿದರು. ಕಾರ್ಯಕ್ರಮವನ್ನು ಸ್ವಯಂಸೇವಕಿ ತನು ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎನ್. ಎಸ್. ಎಸ್ ಸ್ವಯಂಸೇವಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.