ಪುತ್ತೂರು: ದೀಪಾವಳಿ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಸುದ್ದಿ ಬಿಡುಗಡೆ ಪುತ್ತೂರು ಹೊರತಂದಿರುವ ದೀಪಾವಳಿ ವಿಶೇಷಾಂಕ 2024 – ‘ಬೆಳಕಿನ ಹಬ್ಬಕ್ಕೆ ಅಕ್ಷರಗಳ ಹಣತೆ’ಯನ್ನು ಅ.28ರಂದು ಖ್ಯಾತ ಸಾಹಿತಿ ಮತ್ತು ಸುದ್ದಿ ಬಿಡುಗಡೆಯ ಅಂಕಣಕಾರ ಪ್ರೊ| ವಿ.ಬಿ. ಅರ್ತಿಕಜೆ ಮತ್ತು ಖ್ಯಾತ ವಕೀಲ ಹಾಗೂ ಹವ್ಯಾಸಿ ಬರಹಗಾರ ಮಹೇಶ್ ಕಜೆ ಅವರು ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿ ಆವರಣದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾಗಿರುವ ಡಾ. ಯು.ಪಿ. ಶಿವಾನಂದ, ಸುದ್ದಿ ಬಿಡುಗಡೆ ಮತ್ತು ಸುದ್ದಿ ಮೀಡಿಯಾ ಸಿ.ಇ.ಒ. ಸೃಜನ್ ಊರುಬೈಲು, ಶೋಭಾ ಶಿವಾನಂದ ಮತ್ತು ಸುದ್ದಿ ಬಿಡುಗಡೆ ಮತ್ತು ಸುದ್ದಿ ಮೀಡಿಯಾ ಪುತ್ತೂರಿನ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
150 ಪುಟಗಳ ಈ ವಿಶೇಷಾಂಕದಲ್ಲಿ ನಾಡಿನ ಖ್ಯಾತ ಕಥೆಗಾರ ಜೋಗಿ, ಈ ನೆಲದ ಬರಹಗಾರ ಡಾ. ಪ್ರಭಾಕರ ಶಿಶಿಲ ಸೇರಿದಂತೆ ಹಲವು ಲೇಖಕರ ಬರಹಗಳು, ಪ್ರವಾಸಿ ಕಥನ, ಆರೋಗ್ಯ ಮಾಹಿತಿ, ಸೆಲ್ಫೀ ಕಾರ್ನರ್, ಮಕ್ಕಳ ಚಿತ್ರ, ಕವನಗಳು ಸೇರಿದಂತೆ ವೈವಿಧ್ಯಮಯ ವಿಷಯಗಳಿದ್ದು, 50 ರೂಪಾಯಿ ಬೆಲೆಯ ಈ ವಿಶೇಷಾಂಕ ಪುತ್ತೂರು ಹಾಗೂ ಕಡಬ ತಾಲೂಕಿನೆಲ್ಲೆಡೆ ಓದುಗರಿಗೆ ಲಭ್ಯವಿದೆ.