ಅಪಾಯ ಎದುರಾಗುವ ಮೊದಲೇ ಇಲಾಖೆ ಎಚ್ಚೆತ್ತು ಕೊಳ್ಳಲು ಸಾರ್ವಜನಿಕರ ಒತ್ತಾಯ
ನಿಡ್ಪಳ್ಳಿ: ರೆಂಜದಿಂದ ನಿಡ್ಪಳ್ಳಿ ಬಡಗನ್ನೂರು ಹೋಗುವ ಲೋಕೋಪಯೋಗಿ ರಸ್ತೆ ಬದಿ ನಿಡ್ಪಳ್ಳಿಯಲ್ಲಿ ಸ್ವಲ್ಪ ಕುಸಿದಿದ್ದು ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ.
ಈ ರಸ್ತೆಯಲ್ಲಿ ರೆಂಜದಿಂದ ಮುಂದೆ ವಿಜಯನಗರದ ನಡುಭಾಗದಲ್ಲಿ ತೋಟದ ಬದಿ ಈಗಾಗಲೇ ಸ್ವಲ್ಪ ಕುಸಿದಿದೆ.ರಸ್ತೆ ಬದಿ ನೀರು ಹರಿದು ಹೋಗಲು ಈ ಪರಿಸರದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ವಿಪರೀತ ಮಳೆಗೆ ನೀರು ರಸ್ತೆ ಮೇಲೆ ಹರಿದು ರಸ್ತೆಯ ಒಂದು ಬದಿಯಲ್ಲಿ ತೋಟಕ್ಕೆ ಹರಿದ ಪರಿಣಾಮ ರಸ್ತೆ ಬದಿ ಕುಸಿಯಲು ಕಾರಣವಾಗಿದೆ. ಇದರಿಂದ ಡಾಮಾರು ರಸ್ತೆ ಬದಿ ಒಡಕು ಉಂಟಾಗಿದೆ. ಇಲ್ಲಿ ಎರಡು ದೊಡ್ಡ ವಾಹನಗಳು ಎದುರಾದರೆ ಸೈಡ್ ಕೊಡಲು ಜಾಗವಿಲ್ಲವಿಲ್ಲದಿರುವುದರಿಂದ ರಸ್ತೆ ಬದಿಗೆ ಹೋದರೆ ಅದು ಇನ್ನಷ್ಟು ಕುಸಿಯಬಹುದು ಎಂಬ ಭೀತಿ ಎದುರಾಗಿದೆ. ಆದುದರಿಂದ ಇಲ್ಲಿ ಅಪಾಯ ಎದುರಾಗುವ ಮೊದಲೇ ಸಂಬಂಧಿಸಿದ ಇಲಾಖೆ ಇದರ ಬಗ್ಗೆ ಪರಿಶೀಲಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಮೋರಿಯು ಅಪಾಯದಲ್ಲಿ;
ರಸ್ತೆ ಬದಿ ಕುಸಿದ ಜಾಗದ ಹತ್ತಿರ ಒಂದು ಹಳೆಯ ಮೋರಿ ಇದೆ.ಮಣ್ಣು ಕುಸಿಯುತ್ತ ಹೋದರೆ ಆ ಮೋರಿಗೂ ಅಪಾಯವಾದೀತು. ರಸ್ತೆಯ ಬದಿ ಕೇವಲ ಎರಡು ಅಡಿ ಮಾತ್ರ ಇದ್ದು ಕೆಳಗೆ ದೊಡ್ಡ ಆಳ ಇದೆ. ಆದುದರಿಂದ ತಕ್ಷಣ ಇಲಾಖೆ ಸ್ಪಂದಿಸಿ ಇದರ ಬಗ್ಗೆ ಸೂಕ್ತ ವ್ಯವಸ್ಥೆ ಮಾಡ ಬೇಕಾಗಿದೆ. ರಸ್ತೆಯ ಉದ್ದಕ್ಕೂ ಹುಲ್ಲು ಬೆಳೆದು ರಸ್ತೆ ಅಂಚು ಮಾಯವಾಗಿದ್ದು ಎಲ್ಲಿ ಹೊಂಡ ಗುಂಡಿ ಇದೆ ಎಂಬುದು ಕಾಣದೆ ವಾಹನ ಸವಾರರಿಗೆ ಬಹಳ ಸಮಸ್ಯೆಯಾಗಿದೆ.