ಸ್ವಚ್ಚತೆಗೆ ಇಸ್ಲಾಂನಲ್ಲಿ ಮಹತ್ತರ ಸ್ಥಾನವನ್ನು ಕಲ್ಪಿಸಲಾಗಿದೆ ; ಅಝೀಝ್ ದಾರಿಮಿ ಪೊನ್ಮಳ
ಬಂಟ್ವಾಳ : ಸ್ವಚ್ಚತೆಗೆ ಇಸ್ಲಾಂನಲ್ಲಿ ಮಹತ್ತರವಾದ ಸ್ಥಾನವನ್ನು ಕಲ್ಪಿಸಲಾಗಿದ್ದು, ಪ್ರತಿಯೋರ್ವರು ತನ್ನ ಮನೆ, ವಠಾರ, ಪರಿಸರದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ವಿಶೇಷ ಗಮನ ಹರಿಸಬೇಕು ಎಂದು ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಕರೆ ನೀಡಿದರು.
ಐಕ್ಯ ವೇದಿಕೆ ಕೊಡಾಜೆ ಇದರ ವತಿಯಿಂದ ಕೊಡಾಜೆ ಖಬರಸ್ತಾನ್ ವಠಾರದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವ ಸಮೂಹವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಾಡಿನಲ್ಲಿ ಶಾಂತಿ, ಸಾಮರಸ್ಯ ಸೌಹಾರ್ದತೆಯ ಬದುಕಿಗೆ ಪ್ರೇರಣೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಐಕ್ಯ ವೇದಿಕೆಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕೊಡಾಜೆ ಬಿಜೆಎಂ ಅಧ್ಯಕ್ಷ ಹಾಜಿ ಇಬ್ರಾಹಿಂ ರಾಜ್ ಕಮಲ್, ಕೋಶಾಧಿಕಾರಿ ಹಾಜಿ ಮುಹಮ್ಮದ್ ರಫೀಕ್ ಸುಲ್ತಾನ್, ಕಾರ್ಯದರ್ಶಿ ನವಾಝ್ ಭಗವಂತ ಕೋಡಿ, ಕೊಡಾಜೆ ಮಸೀದಿ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಹಾಜಿ ಫಾರೂಕ್ ಸುಲ್ತಾನ್, ಕೋಶಾಧಿಕಾರಿ ಹಾಜಿ ಉಮ್ಮರ್ ರಾಜ್ ಕಮಲ್, ಕಾರ್ಯದರ್ಶಿ ಯೂಸುಫ್ ಸಹೀದ್ ಹಾಗೂ ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಜಿ ರಹೀಂ ಸುಲ್ತಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಐಕ್ಯ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ವೇದಿಕೆಯ ಉಪಾಧ್ಯಕ್ಷ ಅಶ್ರಫ್ ಭಾರತ್ ಕಾರ್ಸ್ ಸ್ವಾಗತಿಸಿ, ವಂದಿಸಿದರು. ಗೌರವಾಧ್ಯಕ್ಷ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.