ಸಂಸ್ಕೃತಿ,ಸಂಸ್ಕಾರ,ಸತ್ವಿದ್ಯೆಯಿದ್ದಾಗ ಉತ್ತಮ ನಾಗರಿಕ-ಸಚ್ಚಿದಾನಂದ ಭಾರತೀ ಸ್ವಾಮೀಜಿ
ಪುತ್ತೂರು:ಕೇವಲ ಪುಸ್ತಕದಲ್ಲಿನ ವಿದ್ಯೆಯನ್ನು ಕಲಿಯುವುದು ಮಾತ್ರವಲ್ಲ, ಪುಸ್ತಕದಲ್ಲಿನ ವಿದ್ಯೆಯೊಂದಿಗೆ ಸಂಸ್ಕೃತಿ, ಸಂಸ್ಕಾರ ಹಾಗೂ ಸತ್ವಿದ್ಯೆಯನ್ನು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಬೋಧಿಸಿದಾಗ ಆ ವಿದ್ಯಾರ್ಥಿಗಳು ಭಾರತದ ಉತ್ತಮ ನಾಗರಿಕರಾಗಬಲ್ಲರು ಜೊತೆಗೆ ರಾಷ್ಟ್ರಪ್ರೇಮವನ್ನು ಹೊಂದುವಂತಾಗುತ್ತಾರೆ ಎಂದು ಶ್ರೀ ಎಡನೀರು ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪಾದಂಗಳವರು ಹೇಳಿದರು.
ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ನಡಿಯಲ್ಲಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಅ.30 ರಂದು ಮೂರನೇ ವರ್ಷದ ಶ್ರದ್ಧಾಭಕ್ತಿಯ ಶಾರದ ಪೂಜೆ ಮತ್ತು ಆಯುಧ ಪೂಜೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಾದವನ್ನು ನೀಡುವ ಮೂಲಕ ಮಾತನಾಡಿದರು. ಧಾರ್ಮಿಕ ಪರಂಪರೆಯುಳ್ಳ ಸನಾತನ ಧರ್ಮದ ಕುರಿತು ವಿದ್ಯಾರ್ಥಿಗಳು ಅರಿತಾಗ ಪರಂಪರೆಯು ಉಳಿದುಕೊಳ್ಳುವುದು. ದೇವರ ಸ್ತುತಿಯ ಭಜನೆ ಹಾಗೂ ಕುಣಿತ ಭಜನೆ ಎಂಬುದು ಧಾರ್ಮಿಕತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ ಎಂದ ಅವರು ವೃತ್ತಿಪರ ಶಿಕ್ಷಣವನ್ನು ಬೋಧಿಸುವ ಈ ಕಾಲೇಜು ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಜೀವನವನ್ನು ಕಂಡುಕೊಳ್ಳುವಲ್ಲಿ ಹೆಜ್ಜೆಯಿಟ್ಟಿದೆ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಗುರುತಿಸುವ ಸಂಸ್ಥೆಯಾಗಿದೆ ಎಂದು ಅವರು ಹೇಳಿದರು.
ಕದಿಯಲಾಗದ ಸಂಪತ್ತು ಎಂದರೆ ಅದು ವಿದ್ಯೆ ಮಾತ್ರ-ಮಲ್ಲಿಕಾ ಪಕ್ಕಳ:
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಧಾರ್ಮಿಕ ಧತ್ತಿ ಇಲಾಖೆಯ ಸದಸ್ಯೆ ಮಲ್ಲಿಕಾ ಪಕ್ಕಳ ಮಲಾರಬೀಡುರವರು ಮಾತನಾಡಿ, ಕದಿಯಲಾಗದ ಸಂಪತ್ತು ಎಂದರೆ ಅದು ವಿದ್ಯೆ ಮಾತ್ರ. ಜೀವನದಲ್ಲಿ ಬದುಕಿರುವವರೆಗೆ ತಾನು ಕಲಿತ ವಿದ್ಯೆ ಅದು ಬದುಕಿಗೆ ದಾರಿ ಮಾಡಿಕೊಡುತ್ತದೆ. ಈ ವಿದ್ಯೆ ಎಂಬ ಸಂಪತ್ತನ್ನು ಉಳಿಸಿಕೊಳ್ಳಬೇಕಾದರೆ ಜ್ಞಾನ ದೇವತೆಯಾಗಿರುವ ಶಾರದಾ ಪೂಜೆಯನ್ನು ನಾವು ಮಾಡಬೇಕಾಗಿದೆ. ಐದು ವರ್ಷಗಳ ಹಿಂದೆ ಕೇವಲ ಹದಿನೈದು ಮಂದಿ ವಿದ್ಯಾರ್ಥಿಗಳಿಂದ ಹುಟ್ಟಿಕೊಂಡ ಈ ಸಂಸ್ಥೆ ಇದೀಗ 400ಕ್ಕೂ ಮಿಕ್ಕಿ ವಿದ್ಯಾರ್ಜನೆಗೈಯುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದರು.
ವಿದ್ಯೆಯ ಜೊತೆಗೆ ಧಾರ್ಮಿಕತೆಗೆ ,ಸಾಂಸ್ಕೃತಿಕತೆಗೆ ಒತ್ತು ನೀಡುತ್ತಿದ್ದೇವೆ-ಜಯಂತ್ ನಡುಬೈಲು:
ಅಧ್ಯಕ್ಷತೆ ವಹಿಸಿದ ಕಾಲೇಜಿನ ಚೇರ್ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ಎಲ್ಲರಿಗೂ ಉದ್ಯೋಗಾವಕಾಶ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಈ ಅಕ್ಷಯ ಕಾಲೇಜಿನಲ್ಲಿ ಪದವಿ ಶಿಕ್ಷಣದೊಂದಿಗೆ ವೃತ್ತಿಪರ ಶಿಕ್ಷಣವನ್ನು ಆರಂಭಿಸಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಪ್ರತಿಯೊಂದು ಹಬ್ಬಹರಿದಿನಗಳನ್ನು ಆಚರಿಸುವ ಮೂಲಕ ಹಾಗೂ ದೇವಸ್ಥಾನಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿದ್ಯೆಯ ಜೊತೆಗೆ ಧಾರ್ಮಿಕತೆಗೆ ಹಾಗೂ ಸಾಂಸ್ಕೃತಿಕತೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದೇವೆ. ಕಳೆದ ವರ್ಷ ನಮ್ಮ ಕಾಲೇಜಿನ ವಿದ್ಯಾರ್ಥಿನಿ ಪ್ರಣಮ್ಯ ಅಗಳಿರವರು ಯೋಗದಲ್ಲಿ ಅಂತರ್ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಸಂಸ್ಥೆಯ ಮತ್ತೊಂದು ಹೆಗ್ಗಳಿಕೆಯಾಗಿದೆ ಎಂದರು.
ಕಾಲೇಜು ಉಪನ್ಯಾಸಕ ಕಿಶನ್ರವರ ನೇತೃತ್ವದಲ್ಲಿ ಕಾಲೇಜು ಉಪನ್ಯಾಸಕರು, ಉಪನ್ಯಾಸಕಿಯರು, ವಿದ್ಯಾರ್ಥಿನಿಯರಿಂದ ಶಾರದಾ ಭಜನೆ ಸಂಕೀರ್ತನೆ ನೆರವೇರಲ್ಪಟ್ಟಿತು. ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಕುಣಿತ ಭಜನೆ ಜರಗಿತು. ಕಾಲೇಜು ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕು.ಪೂಜಿತಾ ವಂದಿಸಿದರು. ಉಪನ್ಯಾಸಕಿ ರಶ್ಮಿ ಕೆ. ಅತಿಥಿಗಳ ಪರಿಚಯ ಮಾಡಿದರು. ಉಪನ್ಯಾಸಕ ಹರಿಶ್ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಅಕ್ಷಯ ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಕಾಲೇಜು ಉಪನ್ಯಾಸಕರು, ಪುತ್ತಿಲ ಪರವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಮಾಜಿ ಪುರಸಭಾ ಸದಸ್ಯ ರಾಜೇಶ್ ಬನ್ನೂರು, ಮಾಜಿ ಪುರಸಭಾ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಹೊಟೇಲ್ ಅಶ್ವಿನಿ ಮಾಲಕ ಕರುಣಾಕರ್ ರೈ ದೇರ್ಲ ಸಹಿತ ಹಲವರು ಉಪಸ್ಥಿತರಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಸಿಡಿತ ಹಾಗೂ ಆಗಮಿಸಿದವರಿಗೆ ಮಧ್ಯಾಹ್ನದ ಭೋಜನ ಕಾರ್ಯಕ್ರಮ ಏರ್ಪಟ್ಟಿತ್ತು.
ಗೂಡುದೀಪ/ಕುಣಿತ ಭಜನೆ ಸ್ಪರ್ಧೆ ವಿಜೇತರು..
ಸಂಸ್ಥೆಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಗೂಡುದೀಪ ಸ್ಪರ್ಧೆಯಲ್ಲಿ ರಾಕೇಶ್, ಗಗನ್ರಾಜ್ ನೇತೃತ್ವದ ಅಶ್ವ ತಂಡ(ಪ್ರ), ನರೇಂದ್ರ, ಮೋಕ್ಷಿತ್, ಅಶ್ವಿನಿ ನೇತೃತ್ವದ ಕಲ್ಕಿ ತಂಡ(ದ್ವಿ), ಹರಿಪ್ರಸಾದ್, ತೇಜಸ್ ತೇತೃತ್ವದ ಗರುಡ ತಂಡ(ತೃ) ಹಾಗೂ ಎಂಟು ತಂಡ ಭಾಗವಹಿಸಿದ ಕುಣಿತ ಭಜನೆ ಸ್ಪರ್ಧೆಯಲ್ಲಿ ಗರುಡ ತಂಡ(ಪ್ರ), ಅಥರ್ವ ತಂಡ(ದ್ವಿ), ವಜ್ರ ತಂಡ(ತೃ) ಬಹುಮಾನಗಳನ್ನು ಪಡೆದಿದ್ದು ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು. ಕುಣಿತ ಭಜನೆ ಸ್ಪರ್ಧೆಯ ಎಂಟು ತಂಡಗಳೂ ಕೂಡ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು ಎಂಬುದು ವಿಶೇಷ.
ಪೂರ್ಣಕುಂಭ ಸ್ವಾಗತ..
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಎಡನೀರು ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪಾದಂಗಳವರನ್ನು ಮಹಿಳೆಯರು ಪೂರ್ಣಕುಂಭದ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಕಾಲೇಜು ಚೇರ್ಮ್ಯಾನ್ ಜಯಂತ್ ನಡುಬೈಲು ದಂಪತಿ ಸ್ವಾಮೀಜಿಗಳಿಗೆ ಹಾರಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಆಯುಧಪೂಜೆ..
ಶಾರದಾ ಪೂಜೆ ಮೊದಲಿಗೆ ಕಾಲೇಜಿನ ಉಪನ್ಯಾಸಕರ, ವಿದ್ಯಾರ್ಥಿಗಳ ವಾಹನಗಳಿಗೆ ಹಾಗೂ ಕಾಲೇಜಿನ ಯಂತ್ರೋಪಕರಣಗಳಿಗೆ ಮೂಡಬಿದ್ರೆ ಶಿವಾನಂದ ತಂತ್ರಿವರ್ಯರ ನೇತೃತ್ವದಲ್ಲಿ ಆಯುಧಪೂಜೆ ಬಳಿಕ ಶಾರದಾ ಪೂಜೆ ನೆರವೇರಿತು.