ಪುತ್ತೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದ್ದು, ಈ ಭಾರಿ 13 ಮಂದಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
1.ಡಾ. ತಾಳ್ತಾಜೆ ವಸಂತ ಕುಮಾರ (ಸಾಹಿತ್ಯ ಕ್ಷೇತ್ರ )
ದಿವಂಗತ ಕೃಷ್ಣ ಭಟ್ಟ ಹಾಗೂ ಲಕ್ಷ್ಮಿ ಅವರ ಸುಪುತ್ರನಾದ ಡಾ ತಾಳ್ತಾಜೆ ವಸಂತ ಕುಮಾರ ಇವರು ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ ಎಂಬ ವಿಷಯದಲ್ಲಿ ಪಿಎಚ್ ಡಿ ಪದವಿಯನ್ನು ಪಡೆದಿರುತ್ತಾರೆ. ಸುದೀರ್ಘ 37 ವರ್ಷಗಳ ಕಾಲ ಉಪನ್ಯಾಸಕ ವೃತ್ತಿಯನ್ನು ಮಾಡಿರುವ ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಹಾಗೂ ಮುಂಬೈ ವಿಶ್ವವಿದ್ಯಾನಿಲಯದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಇವರ ಮಾರ್ಗದರ್ಶನದಲ್ಲಿ 17 ಮಂದಿ ಪಿಎಚ್‌ಡಿ ಹಾಗೂ 18 ಮಂದಿ ಎಂಫಿಲ್ ಪಡೆಡಿರುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ 55 ವರ್ಷಗಳ ಸುದೀರ್ಘ ಸೇವೆಯನ್ನು ನೀಡಿದ ಇವರು ಈವರೆಗೆ ಒಟ್ಟು 24 ಕೃತಿಗಳನ್ನು ರಚಿಸಿದ್ದು, ಇವರು ರಚಿಸಿದ ಅನೇಕ ಲೇಖನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 1993 ರಲ್ಲಿ ಭಾರತ ಜರ್ಮನಿ ಸಾಂಸ್ಕೃತಿಕ ವಿನಿಮಯ ಯೋಜನೆಯ ಅನ್ವಯ ಜರ್ಮನ್ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಹಾಗೂ ಕರ್ನಾಟಕದ ವಿಷಯದಲ್ಲಿ ಉಪನ್ಯಾಸ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ರಾಜ್ಯ ಘಟಕದ ಸ್ಥಾಪಕ ಅಧ್ಯಕ್ಷರಾಗಿಯೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ.
2. ರಾಧಾಕೃಷ್ಣ ಶೆಟ್ಟಿ (ಪಿಲಿ ರಾಧಾ ).( ಜಾನಪದ/ ಕಲಾ ಕ್ಷೇತ್ರ )
ರಾಧಾಕೃಷ್ಣ ಶೆಟ್ಟಿ, ಪಿಲಿ ರಾಧಣ್ಣ ಎಂದು ಹೆಸರುವಾಸಿಯಾದ ಇವರು ಸಂಕಪ್ಪ ಶೆಟ್ಟಿ ಇವರ ಸುಪುತ್ರ. ಇವರು ಕಳೆದ 48 ವರ್ಷಗಳಿಂದ ತುಳುನಾಡಿನ ಜಾನಪದ ಹಾಗೂ ದೈವಿಕ ಹಿನ್ನೆಲೆ ಇರುವ ಹುಲಿ ವೇಷ ಕುಣಿತವನ್ನು ನವರಾತ್ರಿ ಸಂದರ್ಭದಲ್ಲಿ ಸೇವಾ ರೂಪದಲ್ಲಿ ಮಾಡುತ್ತಾ ಬಂದಿದ್ದು, ಹುಲಿವೇಷ ತಂಡದೊಂದಿಗೆ ಪ್ರದರ್ಶನ ನೀಡಿ ತುಳುನಾಡಿನ ಈ ಜಾನಪದ ಕಲೆಯನ್ನು ಉಳಿಸುವುದರ ಜೊತೆಗೆ ಸಂಸ್ಕೃತಿ ಉಳಿವಿಗಾಗಿ ಇವರ ಕೊಡುಗೆ ಅಪಾರ. ಮೈಸೂರು, ಬೆಂಗಳೂರು ಸೇರಿದಂತೆ ನಾಡಿನ ಹಲವು ಊರುಗಳಲ್ಲಿ ಪ್ರದರ್ಶನ ನೀಡಿರುತ್ತಾರೆ.
3.ಡಾ.ಯು ಪಿ ಶಿವಾನಂದ ( ಪತ್ರಿಕೋದ್ಯಮ ಕ್ಷೇತ್ರ )
73 ವರ್ಷ ವಯೋಮಾನದ ಡಾ. ಯುಪಿ ಶಿವಾನಂದ್ ಅವರು ಯು ಕೆ ಪುಟ್ಟಪ್ಪ ಹಾಗೂ ಪದ್ಮಾವತಿಯವರ ಸುಪುತ್ರ. ಎಂಬಿಬಿಎಸ್ ಪದವೀಧರರಾದ ಇವರು ಆಯ್ಕೆ ಮಾಡಿಕೊಂಡದ್ದು ಪತ್ರಿಕೋದ್ಯಮ ಕ್ಷೇತ್ರವನ್ನು. ಕಳೆದ 39 ವರ್ಷಗಳಿಂದ ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರಿನಲ್ಲಿ ಸುದ್ದಿ ಬಿಡುಗಡೆ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇದರ ಜೊತೆ ಸುದ್ದಿ ಯು ಟ್ಯೂಬ್ ಚಾನೆಲ್ ಕೂಡಾ ನಡೆಸುತ್ತಿದ್ದಾರೆ. ಲಂಚ ಭ್ರಷ್ಟಾಚಾರದ ವಿರುದ್ಧ, ಬಲತ್ಕಾರದ ಬಂದ್ ಮತ್ತು ಸಾಮಾಜಿಕ ಜಾಲತಾಣದ ದುರುಪಯೋಗದ ವಿರುದ್ಧ ದೊಡ್ಡ ಜನಾಂದೋಲನವನ್ನೇ ಪ್ರಾರಂಭಿಸಿ ಜನ ಮೆಚ್ಚುಗೆಗೆ ಪಾತ್ರರಾದವರು ಇವರು. ಸುದ್ದಿ ಮಾಹಿತಿ ಕೇಂದ್ರವನ್ನು ಪ್ರಾರಂಭಿಸಿ ಕೃಷಿಗೆ ಸಂಬಂಧಪಟ್ಟ, ನೀರು ಇಂಗಿಸುವಿಗೆ ಸಂಬಂಧಪಟ್ಟ, ಉದ್ಯೋಗಕ್ಕೆ ಸಂಬಂಧಪಟ್ಟ, ಶಿಕ್ಷಣಕ್ಕೆ ಸಂಬಂಧಪಟ್ಟ ಅನೇಕ ಮಾಹಿತಿಗಳನ್ನು ಉಚಿತವಾಗಿ ನೀಡುತ್ತಾ ಜನಸೇವೆ ಮಾಡುತ್ತಾ ಬಂದವರು.
4.ಅಬ್ದುಲ್ ರಜಾಕ್ ಬಪ್ಪಳಿಗೆ (ಸಮಾಜ ಸೇವೆ )
ಅಬ್ದುಲ್ ರಜಾಕ್ ಬಪ್ಪಳಿಗೆ ಇವರು ಬಿ.ಎಸ್. ಮಹಮ್ಮದ್ ಹಾಜಿ ಹಾಗೂ ಅವ್ವಮ್ಮ ಅವರ ದ್ವಿತೀಯ ಪುತ್ರ. ವೃತ್ತಿಯಲ್ಲಿ ಕೃಷಿ ಹಾಗೂ ತರಕಾರಿ ಉತ್ಪನ್ನಗಳ ಮಾರಾಟಗಾರರು. ಸಮಾಜದಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಮರ್ ಅಕ್ಬರ್ ಅಂತೋನಿ ಎಂಬ ಕ್ರಿಕೆಟ್ ಪಂದ್ಯಾಟವನ್ನು ಕಳೆದ 15 ವರ್ಷಗಳಿಂದ ನಡೆಸುತ್ತಾ ಸಾರ್ವಜನಿಕರಲ್ಲಿ ಪರಸ್ಪರ ಸ್ನೇಹ, ಶಾಂತಿ ಸೌಹಾರ್ದತೆಯನ್ನು ಬೆಳೆಸುತ್ತಾ ಪುತ್ತೂರಿನ ಎಲ್ಲಾ ಧರ್ಮದ ಜನರನ್ನು ಒಗ್ಗೂಡಿಸುತ್ತಾ ಮುನ್ನಡೆವ ವ್ಯಕ್ತಿತ್ವ. ಮರಣ ಹೊಂದಿದ ಅನಾಥ ಮೃತದೇಹವನ್ನು ತಮ್ಮದೇ ಖರ್ಚು ವೆಚ್ಚದಲ್ಲಿ ಅಂತಿಮ ಸಂಸ್ಕಾರ ಮಾಡಿದ್ದು, ಅನೇಕ ಬಾರಿ ಮಧ್ಯರಾತ್ರಿಯಲ್ಲು ಕರೆದಾಗ ಬಂದು ರಕ್ತದಾನ ಮಾಡಿ ಅನೇಕರ ಪ್ರಾಣ ಉಳಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಬೆನ್ನಿಗೆ ಸಾನಿಟೈಸರ್ ಕಟ್ಟಿ ಏಕಾಂಗಿಯಾಗಿ ಮಂದಿರ ಮಸೀದಿ, ಚರ್ಚ್, ಶಾಲಾ ಆವರಣ, ಪೇಟೆ ಆವರಣದಲ್ಲಿ ಸಾನಿಟೈಸರ್ ಸಿಂಪಡಿಸಿ ಜನರ ಆರೋಗ್ಯ ಕಾಪಾಡುವಲ್ಲಿ ಇವರ ಕೊಡುಗೆ ಅಪಾರ.
ಕೋರೋನಾ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಎಲ್ಲಾ ಪೊಲೀಸ್ ಇಲಾಖೆ ನಗರಸಭೆ ಹಾಗೂ ಸರಕಾರಿ ಆಸ್ಪತ್ರೆಗಳಿಗೆ ಹಾಗೂ ವಿವಿಧ ಇಲಾಖೆಗೆ ಸಾನಿಟೈಸರ್ ಕಿಟ್ಗಳನ್ನು ನೀಡುವುದರ ಜೊತೆಗೆ ಪ್ರಾಣಿಗಳ ಸಹಕಾರದಲ್ಲಿ 12೦೦ ಮನೆಗಳಿಗೆ ಆಹಾರದ ಕಿಟ್ ಅನ್ನು ನೀಡಿದ್ದಾರೆ. ತನ್ನ ಊರು ಬಪ್ಪಳಿಗೆ ಬಲ್ನಾಡು ರಸ್ತೆಯ ಉದ್ದಕ್ಕೂ ಪುತ್ತೂರು ನಗರಸಭೆ ಹಾಗೂ ಮೆಸ್ಕಾಂ ಇಲಾಖೆಯ ಸಹಕಾರದೊಂದಿಗೆ ನನ್ನ ಊರು ನಮ್ಮ ರಕ್ಷಣೆ ಎಂಬ ಸ್ವಚ್ಛತಾ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದವರು ಇವರು. ಮಾದಕ ವ್ಯಸನವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಅನೇಕ ಜನಜಾಗೃತಿಗಳನ್ನು ವಿವಿಧ ಸಂಘ ಸಂಸ್ಥೆಗಳೊಂದಿಗೆ ಸೇರಿ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಮಾದಕವೇಶನದ ಬಗ್ಗೆ ಜನಜಾಗೃತಿ ಮೂಡಿಸಿದ್ದಾರೆ.
5.ತಿಮ್ಮಪ್ಪ ಪೂಜಾರಿ( ರಂಗಭೂಮಿ/ ಸಾಹಿತ್ಯ )
59 ವರ್ಷ ವಯೋಮಾನದ ತಿಮ್ಮಪ್ಪ ಪೂಜಾರಿ ಇವರು ನಾಗಪ್ಪ ಪೂಜಾರಿ ಹಾಗೂ ಲಕ್ಷ್ಮೀ ಇವರು ಸುಪುತ್ರ. ಇವರು ಕಳೆದ 40 ವರ್ಷದಿಂದ ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ್ದು, ನೂರಾರು ಯುವ ಪ್ರತಿಭೆಗಳಿಗೆ ವೇದಿಕೆಯನ್ನು ನೀಡಿ ಕಲಾವಿದರನ್ನಾಗಿ ಮಾಡಿದ ಇವರು ಸುಮಾರು 51 ನಾಟಕಗಳನ್ನು ಬರೆದಿದ್ದು ಇವುಗಳಲ್ಲಿ 11 ಮುದ್ರಣವಾಗಿದೆ. ಈ ಪೈಕಿ ಧ್ರುವ ನಕ್ಷತ್ರ ಎಂಬ ನಾಟಕವು 5೦೦೦ಕ್ಕೂ ಅಧಿಕ ಪ್ರದರ್ಶನವನ್ನು ಕಂಡಿದೆ.
6.ಕೇಶವ ಮಚ್ಚಿ ಮಲೆ (ರಂಗಭೂಮಿ / ನಾಟಕ)
54 ವರ್ಷವಯೋಮಾನದ ಕೇಶವ ಮಚ್ಚಿಮಲೆ ಅವರು ಶ್ರೀಯುತ ಕೃಷ್ಣಪ್ಪ ಪೂಜಾರಿ ಹಾಗೂ ಕಮಲ ದಂಪತಿಗಳ ಸುಪುತ್ರ. ಇವರು ಕಳೆದ 29 ವರ್ಷಗಳಿಂದ ರಂಗಭೂಮಿ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದವರು. ಈವರೆಗೆ 9೦೦ಕ್ಕೂ ಅಧಿಕ ನಾಟಕಗಳಲ್ಲಿ ಪಾತ್ರವನ್ನು ಮಾಡಿದವರು, ಮಾತ್ರವಲ್ಲದೆ ಸಾವಿರಕ್ಕೂ ಅಧಿಕ ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿದ ಗೌರವ ಇವರಿಗೆ ಸಲ್ಲುತ್ತದೆ. ನಾಟಕಗಳಲ್ಲಿ ಪಾತ್ರ ಮಾಡುವ ಜೊತೆಗೆ ಸಂಗೀತ,ನಿರ್ದೇಶನ, ನಾಟಕ ರಚನೆ, ರಂಗ ವಿನ್ಯಾಸ ಹಾಡುಗಾರಿಕೆ ಇತ್ಯಾದಿ ಕಲೆಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ.
7.ಡಾ. ಸತೀಶ್ ಶೆಣೈ ಎಂ- ಮಕ್ಕಳ ತಜ್ಞರು ( ವೈದ್ಯಕೀಯ ಕ್ಷೇತ್ರ )
ಕೋರ್ಟ್ ರಸ್ತೆ ಯಲ್ಲಿ ವೈದ್ಯಕೀಯ ವೃತ್ತಿಯನ್ನು ಮಾಡುತ್ತಿರುವ ಡಾ. ಎಂ.ಎಸ್ ಶೆಣೈ ಎಂದು ಹೆಸರುವಾಸಿಯಾದ ಇವರು ದಿ.ದಯಾನಂದ ಶೆಣೈ ಹಾಗೂ ಕಲ್ಯಾಣಿ ಶೆಣೈ ಇವರ ಸುಪುತ್ರ. ಇವರು ಕಳೆದ 57 ವರ್ಷಗಳಿಂದ ಮಕ್ಕಳ ತಜ್ಞರಾಗಿ ಅತ್ಯಂತ ಸೇವಾ ಭಾವದಿಂದ ವೈದ್ಯಕೀಯ ಸೇವೆಯನ್ನು ಸಲ್ಲಿಸುವುದರ ಜೊತೆಗೆ ಆರ್ಥಿಕ ಸಂಕಷ್ಟದಲ್ಲಿ ಇರುವ ಸಾವಿರಾರು ಬಡ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಿ ಅಪಾರ ಜನಮನ್ನಣೆಯನ್ನು ಪಡೆದಿರುತ್ತಾರೆ.
8.ಡಾ ರಾಜಾರಾಮ್ ಕೆ ಬಿ ( ದಂತ ವೈದ್ಯಕೀಯ ಕ್ಷೇತ್ರ )
ಮೂಲತಃ ಕೃಷಿಕ ಕುಟುಂಬಕ್ಕೆ ಸೇರಿದ ಇವರು ದಿ.ಬಾಬು ಪೂಜಾರಿ ಮತ್ತು ಗಿರಿಜಾ ದಂಪತಿಗಳ ಸುಪುತ್ರ. 1995ರಲ್ಲಿ ಉಪ್ಪಿನಂಗಡಿಯಲ್ಲಿ ತನ್ನ ಮಾತೃ ಶ್ರೀಯವರ ನಾಮಾಂಕಿತದ ಗಿರಿಜಾ ದಂತ ಚಿಕಿತ್ಸಾಲಯವನ್ನು ತೆರೆದು ಸುದೀರ್ಘ 29 ವರ್ಷಗಳ ವೃತ್ತಿ ಜೀವನದಲ್ಲಿ ಸೇವಾಭಾವದಲ್ಲಿ ಸೇವೆಯನ್ನು ನೀಡಿದ್ದು ಹಲವಾರು ಬಡ ರೋಗಿಗಳಿಗೆ ಉಚಿತ ಸೇವೆಯನ್ನು ಕೂಡ ನೀಡಿ ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದಾರೆ. ತನ್ನ ಚಿಕಿತ್ಸಾಲಯದಲ್ಲಿ ಹಲವಾರು ಕಿರಿಯ ವೈದ್ಯರುಗಳಿಗೆ ಉದ್ಯೋಗಾವಕಾಶ ಕಲ್ಪಿಸಿ ಅವರಿಗೆ ತರಬೇತಿ ನೀಡಿರುತ್ತಾರೆ. ಸರಳ ಸಜ್ಜನಿಕೆ ವ್ಯಕ್ತಿತ್ವದ ಇವರು ವೈದ್ಯಕೀಯ ವೃತ್ತಿಯ ಜೊತೆಗೆ ಅನೇಕ ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಜನಸೇವಕನೆಂದು ಪ್ರಸಿದ್ಧಿಯನ್ನು ಪಡೆದಿದ್ದಾರೆ.
ಸಾಮಾಜಿಕವಾಗಿಯೂ ಹಲವಾರು ಸಂಘಸಂಸ್ಥೆಗಳ ಕೆಲಸ ಮಾಡಿದ್ದಾರೆ. ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಇದರ ಅಧ್ಯಕ್ಷರಾಗಿ, ಜೆಸಿಐ ಉಪ್ಪಿನಂಗಡಿ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷರಾಗಿ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಉಪ್ಪಿನಂಗಡಿಯ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
9.ಜಯ ಗುರು ಹಿಂದಾರು ( ಹೈನುಗಾರಿಕೆ-/ಕೃಷಿ )
29 ವರ್ಷ ವಯೋಮಾನದ ಜಯ ಗುರು ಹಿಂದಾರು ಇವರು ಭಾಸ್ಕರ್ ಆಚಾರ್ಯ ಹಿಂದಾರು ಹಾಗೂ ಸುಜಾತ ಆಚಾರ್ ಇವರ ಸುಪುತ್ರ. ಇವರು ಕಳೆದ ಏಳು ವರ್ಷಗಳಿಂದ ಹೈನುಗಾರಿಕಾ ಕ್ಷೇತ್ರದಲ್ಲಿ ಅಪಾರ ಕೃಷಿಯನ್ನು ಮಾಡಿದ್ದು,ಸುಮಾರು 130ಕ್ಕೂ ಅಧಿಕ ಗೋವುಗಳ ಸಾಕಾಣೆ ಮಾಡುತ್ತಿದ್ದಾರೆ. ಇವುಗಳಲ್ಲಿ ಅನೇಕ ದೇಶಿಯ ತಳಿಯ ಗೋವುಗಳ ಸಾಕಣೆ ಮಾಡಿರುತ್ತಾರೆ. ಹೈನುಗಾರಿಕೆಯಲ್ಲಿ ದೇಶ ವಿದೇಶಗಳಲ್ಲಿ ವಿಶೇಷ ಅಧ್ಯಯನ ಪ್ರವಾಸವನ್ನು ಮಾಡಿ ನೂತನ ತಂತ್ರಜ್ಞಾನವನ್ನೂ ಕೂಡ ಅಳವಡಿಸಿದ್ದಾರೆ.
10.ಡಾ ಎನ್ ಸುಕುಮಾರ ಗೌಡ ( ಶಿಕ್ಷಣ ಕ್ಷೇತ್ರ )
ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ ಇವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಬನಾರಸ್ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಇಡಿ ಪದವಿಯನ್ನು ಪಡೆದಿರುವ ಇವರು ಕೆನಡಾದ ಕ್ವೀನ್ಸ್ ವಿವಿಯಿಂದ ಎಂ.ಇಡಿ, ಟೊರೆಂಟೋ ವಿವಿಯಿಂದ ಪಿ.ಹೆಚ್.ಡಿ. ಪಡೆದಿದ್ದಾರೆ.ಅನೇಕ ಉಪಯುಕ್ತ ಹಾಗೂ ಮೌಲ್ಯಾಧಾರಿತ ಪುಸ್ತಕಗಳನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಬರೆದು ಪ್ರಕಟಿಸಿದ್ದಾರೆ. ಡಾ| ಸುಕುಮಾರ ಗೌಡ ಅವರು ಮೂಲತಃ ಸುಳ್ಯ ತಾಲೂಕಿನವರಾದರೂ ಪುತ್ತೂರಿನಲ್ಲಿಯೇ ನೆಲೆಸಿದ್ದರು. ಇವರ ಪ್ರಾಬ್ಲೆಮ್ಸ್ ಆ್ಯಂಡ್ ಪ್ರೋಸ್ಪೆಕ್ಟ್ ಆಫ್ ಅವರ್ ಎಜುಕೇಶನ್ ಎನ್ನುವ ಪುಸ್ತಕವನ್ನು ಡಾ| ಶಿವರಾಮ ಕಾರಂತ ಅವರು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಪ್ರಖ್ಯಾತ ಶಿಕ್ಷಣ ತಜ್ಞ ಡಾ| ಎ.ಎಸ್. ನೀಲ್ ಅವರ ಸಮ್ಮರ್ ಹೀಲ್ ಅನ್ನು ಡಾ| ಸುಕುಮಾರ ಗೌಡ ಅವರು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಈ ಎಲ್ಲ ಕಾರ್ಯಗಳು ನಡೆದದ್ದು ಮಕ್ಕಳ ಮಂಟಪದಲ್ಲಿ.
11. ವೇದಾವತಿ. ಎ ( ಕ್ರೀಡಾಕ್ಷೇತ್ರ )
62 ವರ್ಷ ವಯೋಮಾನದ ವೇದಾವತಿಯವರು ರಾಜೇಶ್ ಬಂಗೇರವರ ಧರ್ಮಪತ್ನಿಯಾಗಿದ್ದಾರೆ. ಕಳೆದ 29 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ನೀಡಿದ್ದು ಪ್ರಸ್ತುತ ನಿವೃತ್ತರಾಗಿದ್ದಾರೆ. ಸರಕಾರಿ ನೌಕರರ ಸಂಘದ ಮೂಲಕ ನಡೆಸಲ್ಪಡುವ ಕ್ರೀಡಾಕೂಟದಲ್ಲಿ ಜಾವಲಿನ್ ತ್ರೋ,ಡಿಸ್ಕಸ್ ತ್ರೋ, ಶಾಟ್ ಪುಟ್,41೦೦ ಮೀ ರಿಲೇಯಲ್ಲಿ 1996 ರಿಂದ 2022 ರ ತನಕ ಭಾಗವಹಿಸಿ ರಾಷ್ಟ್ರಮಟ್ಟದ ಸಾಧನೆಯನ್ನು ಮಾಡಿದ್ದಾರೆ. 2016ರಲ್ಲಿ ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಾವಲಿನ್ ತ್ರೋ, ಡಿಸ್ಕಸ್ ತ್ರೋ,ಶಾಟ್ ಪುಟ್ ನಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
12.ಹರೀಶ್ ರಾವ್, ಪಾಕ ತಜ್ಞರು (ಸಾಮಾಜಿಕ ಕ್ಷೇತ್ರ )
ಪಾಕತಜ್ಞ ದಿ.ಕೃಷ್ಣ ರಾವ್ ಹಾಗೂ ಭಾರತಿ ಅವರ ಸುಪುತ್ರನಾದ ಹರೀಶ್ ರಾವ್ ಅವರು ವೃತ್ತಿಯಲ್ಲಿ ಪಾಕ ತಜ್ಞರು, ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳ ಜಾತ್ರಾ ಮಹೋತ್ಸವ ಹಾಗೂ ಗಣೇಶೋತ್ಸವ ಇನ್ನಿತರ ಶುಭ ಕಾರ್ಯದಲ್ಲಿ ಶುಚಿರುಚಿಯಾದ ಆಹಾರ ತಯಾರಿಕೆಯನ್ನು ಅತ್ಯಂತ ಕಡಿಮೆ ಶುಲ್ಕದಲ್ಲಿ ಸೇವಾ ಭಾವದಲ್ಲಿ ಮಾಡಿರುತ್ತಾರೆ. ಕೇಪುಳುವಿನಲ್ಲಿ ತುಳಸಿ ಕ್ಯಾಟರಿಂಗ್ ನಡೆಸುತ್ತಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ ಸಂದರ್ಭದಲ್ಲಿ 12 ದಿನದಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಮಂದಿಗೆ ರುಚಿ ಶುಚಿಯಾದ ಊಟ ಹಾಗೂ ಉಪಹಾರದ ತಯಾರಿಯಲ್ಲಿ ತನ್ನ ವೈಯಕ್ತಿಕ ಸೇವೆಯನ್ನು ಸಂಪೂರ್ಣ ಸೇವಾ ರೂಪದಲ್ಲಿ ನೀಡಿ ಜನ ಮೆಚ್ಚುಗೆಗೆ ಪಾತ್ರರಾದವರು.
ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬಗಳ ಮನೆಯಲ್ಲಿ ನಡೆಯುವ ಶುಭ ಸಮಾರಂಭದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಹಾಗೂ ಇನ್ನು ಹಲವು ಕಡೆಗಳಲ್ಲಿ ಉಚಿತವಾಗಿ ಆಹಾರ ತಯಾರಿಸಿ ಮಾಡಿ ಆರ್ಥಿಕ ಸಂಕಷ್ಟದಲ್ಲಿರುವ ಜೊತೆ ಕೈಜೋಡಿಸಿ ಯಥಾನುಶಕ್ತಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.
13.ರೋಟರಿ ಕ್ಲಬ್ ಪುತ್ತೂರು ( ಸಂಘ ಸಂಸ್ಥೆ ವಿಭಾಗ )
1964ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಸಮಾಜ ಸೇವಾ ಕ್ಷೇತ್ರದಲ್ಲಿ 60 ವರ್ಷಗಳನ್ನು ಪೂರೈಸಿದೆ. ಈ 60 ವರ್ಷಗಳಲ್ಲಿ ಸಾವಿರಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಇವುಗಳಲ್ಲಿ ಮುಖ್ಯವಾಗಿ ರೋಟರಿ ಬ್ಲಡ್ ಬ್ಯಾಂಕ್, ರೋಟರಿ ಕಿಡ್ನಿ ಡಯಾಲಿಸಿ ಸೆಂಟರ್, ರೋಟರಿ ರಕ್ತಸಂಗ್ರಹಣ, ರೋಟರಿ ಕಣ್ಣಿನ ಆಸ್ಪತ್ರೆ ಇವುಗಳ ಜೊತೆಗೆ ರೋಟರಿ ಪುರ ಎಂಬಲ್ಲಿ ಬಡವರಿಗೆ ಅನೇಕ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟ ಗೌರವ ಈ ಸಂಸ್ಥೆಗೆ ಸಲ್ಲುತ್ತದೆ. ಸಾವಿರಾರು ಸಾರ್ವಜನಿಕರು ಈ ವ್ಯವಸ್ಥೆಗಳ ಸದುಪಯೋಗವನ್ನು ಪಡೆದು ಪುನರ್ಜೀವ ಪಡೆದುಕೊಂಡಿರುತ್ತಾರೆ. ನೂರಾರು ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳು, ಉಚಿತ ದಂತ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಉಚಿತ ಕಣ್ಣು ತಪಾಸಣಾ ಶಸ್ತ್ರ ಚಿಕಿತ್ಸಾ ಶಿಬಿರ, ಅನೇಕ ಶಾಲಾ ಕಾಲೇಜುಗಳಿಗೆ ಶಿಕ್ಷಣಕ್ಕೆ ಬೇಕಾದ ಸವಲತ್ತುಗಳ ಒದಗಿಸುವಿಕೆ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಹಸ್ತ, ಬಡ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯ ಹಸ್ತ, ಸಾರ್ವಜನಿಕರಿಗಾಗಿ ಬಸ್ಸು ತಂಗುದಾಣದ ನಿರ್ಮಾಣ, ಹೀಗೆ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜನಮನ್ನಣೆಗೆ ಪಾತ್ರವಾದ ಸಂಸ್ಥೆ ಇದು.