ಪುತ್ತೂರು: ಜ.1ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿರುವ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ದಶಮಾನೋತ್ಸವ ಸಂಭ್ರಮದ ಸಮಾರೋಪ ಸಮಾರಂಭದ ಪೂರ್ವ ಸಿದ್ಧತೆಯಾಗಿ ಟ್ರಸ್ಟ್ ಮತ್ತು ದಶಮಾನೋತ್ಸವ ಸಮಿತಿಯ ಜಂಟಿ ಸಭೆಯು ಅ.30ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ನಡೆಯಿತು.
ದಶಮಾನೋತ್ಸವ ಸಂಭ್ರಮವನ್ನು ಪ್ರಾಂಜಲ ಮನಸ್ಸಿನಿಂದ ಯಶಸ್ವಿಗೊಳಿಸಿ:
ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೀಲ್ ಗೋಪಾಲಕೃಷ್ಣ ಗೌಡ ಚಾರ್ವಾಕ ಅವರು ಮಾತನಾಡಿ, ಒಕ್ಕಲಿಗ ಸ್ವಸಹಾಯ ಸಂಘ ಕೇವಲ ಒಂದು ತಾಲೂಕು, ಜಿಲ್ಲೆ, ರಾಜ್ಯಕ್ಕೆ ಸೀಮಿತವಾಗಿಲ್ಲ. ಇಂದೊಂದು ರಾಷ್ಟ್ರ ಮಟ್ಟದ ಒಕ್ಕೂಟವಾಗಿದೆ. ಯಾಕೆಂದರೆ ಕೇರಳದ ದೇಲಂಪಾಡಿಯಲ್ಲೂ ಒಕ್ಕಲಿಗ ಸ್ವಸಹಾಯ ಸಂಘವಿದೆ. ಹಾಗಾಗಿ ಒಕ್ಕೂಟದ ವ್ಯಾಪ್ತಿ ವಿಸ್ತಾರವಾಗಿದೆ. ಇಂತಹ ಒಕ್ಕೂಟದ ದಶಮಾನೋತ್ಸವ ಸಂಭ್ರಮವೂ ದೊಡ್ಡ ರೀತಿಯಲ್ಲಿ ನಡೆಯಲಿದೆ. ಇದನ್ನು ಎಲ್ಲರೂ ಪ್ರಾಂಜಲ ಮನಸ್ಸಿನಿಂದ ಯಶಸ್ವಿಗೊಳಿಸಬೇಕೆಂದರು. ಸಮಾರೋಪದಲ್ಲಿ ಸಾಂಕೇತಿಕವಾಗಿ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ರಾಷ್ಟ್ರಮಟ್ಟದ ಸಾಧಕರನ್ನು ಗುರುತಿಸುವುದು, ಆದರ್ಶ ದಂಪತಿಯನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ ಅವರು ಮುಂದೆ ವಿವಿಧ ಉಪಸಮಿತಿಗಳಾಗಬೇಕಾಗಿದೆ ಎಂದರು.
ದಶಮಾನೋತ್ಸವಕ್ಕೆ ಕಟ್ಟಡ ಸಮಾಜಕ್ಕೆ ಅರ್ಪಣೆ:
ಸಭಾಧ್ಯಕ್ಷತೆ ವಹಿಸಿದ ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ಡಿ.ವಿ.ಮನೋಹರ್ ಗೌಡ ಅವರು ಮಾತನಾಡಿ, ಸಂಘದ ಸ್ವಂತ ಕಟ್ಟಡಕ್ಕೆ ಸಂಘದ ಸ್ಥಾಪಕರು ಹಲವು ಶ್ರಮ ನೀಡಿದ್ದಾರೆ. ಈ ಹಿಂದೆ ನಿರ್ಣಯಿಸಿದಂತೆ ಸಂಘದ ಕಟ್ಟಡದಲ್ಲಿ ಮೀಟಿಂಗ್ ಹಾಲ್ ನಿರ್ಮಾಣ ಕಾಮಗಾರಿ ನ.8ಕ್ಕೆ ಆರಂಭಗೊಳ್ಳಲಿದೆ. ದಶಮಾನೋತ್ಸವಕ್ಕೆ ಕಟ್ಟಡ ಸಮಾಜಕ್ಕೆ ಅರ್ಪಣೆ ಮಾಡುವುದು ಖಚಿತ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಯಾ ಗ್ರಾಮದ ಹಿರಿಯರನ್ನು ಗುರುತಿಸುವ ನಿಟ್ಟಿನಲ್ಲಿ ಆಯಾ ಗ್ರಾಮದ ಪ್ರಮುಖರು ನ.15 ರೊಳಗೆ ಹೆಸರನ್ನು ತಲುಪಿಸಬೇಕು. ಪ್ರೇರಕರು, ಮೇಲ್ವಿಚಾರಕರು, ಗ್ರಾಮದ ಅಧ್ಯಕ್ಷರು ಸಂಪನ್ಮೂಲ ವ್ಯಕ್ತಿಯನ್ನು ಗುರುತಿಸಬೇಕು. ವಾರ ವಾರ ಸಮಿತಿ ಸಭೆ ನಡೆಸಬೇಕೆಂದ ಅವರು ಸ್ವಾಗತ, ಪ್ರಚಾರ, ಆಹಾರ ಸಹಿತ ಹಲವು ಸಮಿತಿಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಿದರು.
ಸಂಘಟನಾತ್ಮಕವಾಗಿ ಬೆಳೆಯುವ ಆಶಯದಂತೆ ಮುಂದೆ ಹೋಗಬೇಕು:
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ, ದಶಮಾನೋತ್ಸವ ಸಮಿತಿ ಸಂಪನ್ಮೂಲ ವ್ಯಕ್ತಿಯೂ ಆದ ಚಿದಾನಂದ ಬೈಲಾಡಿ ಅವರು ಮಾತನಾಡಿ, ಕೆಲವೊಂದು ವಿಚಾರದಲ್ಲಿ ನಮ್ಮ ಸಂಸ್ಕಾರ ತಪ್ಪಿದೆ. ಆದರೆ ಅದನ್ನು ತಿದ್ದುವ ಮೂಲಕ ಸಂಘಟನಾತ್ಮಕವಾಗಿ ಬೆಳೆಯುತ್ತಿರುವ ಆಶಯದಂತೆ ಹೋಗಬೇಕಾಗಿದೆ. ಅದಕ್ಕಾಗಿ ನಾವು ನಿಲ್ಲದೇ ಮುಂದೆ ಹೋಗಬೇಕು. ಹಾಗಾಗಿ ಸಂಘ ಮತ್ತು ಒಕ್ಕೂಟದ ಮೂಲಕ ಜಂಟಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕು. ತಾಲೂಕು ಸಂಘದಿಂದ ಅಂದು ವಾರ್ಷಿಕ ಪೂಜೆ, ನಂತರ ಸ್ವಾಮೀಜಿಯವರ ಆಗಮನ ಬಳಿಕ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಎಲ್ಲರ ಸಹಕಾರದಿಂದ ದಶಮಾನೋತ್ಸವ ಯಶಸ್ವಿಯಾಗಲಿ. ಸಂಘದ ಮೂಲಕ ಮತ್ತು ನನ್ನ ವೈಯುಕ್ತಿಕ ನೆಲೆಯಲ್ಲಿ ಸಹಕಾರ ನೀಡುತ್ತೇನೆಂದು ಭರವಸೆ ವ್ಯಕ್ತಪಡಿಸಿದರು.
ತ್ಯಾಗ ಮನೋಭಾವದಿಂದ ಸಂಘದ ಬೆಳವಣಿಗೆ:
ದಶಮಾನೋತ್ಸವ ಸಮಿತಿ ಸಂಪನ್ಮೂಲ ವ್ಯಕ್ತಿಯಾಗಿರುವ ಮೋಹನ್ ಗೌಡ ಇಡ್ಯಡ್ಕ ಅವರು ಮಾತನಾಡಿ, ಹಿರಿಯರಿಗಿದ್ದಷ್ಟು ಚಿಂತನೆ ಈಗಿನ ಯುವ ಸಮಾಜಕ್ಕಿಲ್ಲ. ಅದನ್ನು ಸರಿದೂಗಿಸುವ ಕೆಲಸ ಆಗಬೇಕು. ಸಮಾಜದ ಅನೇಕ ಕಾರ್ಯಕ್ರಮಗಳಿಗೆ ಸಮಾಜದ ಕೊಡುಗೆ ಅಗತ್ಯ. ತ್ಯಾಗ ಮನೋಭಾವ ಇಲ್ಲದಿದ್ದರೆ ಸಂಘ ಬೆಳೆಯುವುದಿಲ್ಲ. ಹಾಗಾಗಿ ಎಲ್ಲರ ತ್ಯಾಗ ಸಂಘಕ್ಕೆ ಬೇಕಾಗಿದೆ ಎಂದ ಅವರು ನ.15ರೊಳಗೆ ಕಾರ್ಯಕ್ರಮದ ಅಂತಿಮ ಪಟ್ಟಿ ಸಿದ್ದಪಡಿಸಬೇಕೆಂದು ಸಲಹೆ ನೀಡಿದರು.
ಟ್ರಸ್ಟ್‌ನ ಮೂಲಕ ಹಲವು ಸಮಾಜಮುಖಿ ಕಾರ್ಯ:
ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷರೂ, ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಎ.ವಿ.ನಾರಾಯಣ ಗೌಡ ಅವರು ಮಾತನಾಡಿ, ಈಗಾಗಲೇ ಟ್ರಸ್ಟ್‌ನ ಮೂಲಕ ಹಲವು ಸಮಾಜಮುಖಿ ಕಾರ್ಯ ನಡೆದಿದೆ. ದಶಮಾನೋತ್ಸವ ಕಾರ್ಯಕ್ರಮಕ್ಕೆ ಒಟ್ಟು ರೂ. 30ಲಕ್ಷ ಸಂಗ್ರಹದ ಗುರಿಯನ್ನು ಇಡಲಾಗಿದೆ. ಅದರಲ್ಲಿ ರೂ. 15ಲಕ್ಷ ಕಟ್ಟಡಕ್ಕೆ ವಿನಿಯೋಗಿಸಬೇಕು. ಕಾರ್ಯಕ್ರಮದಲ್ಲಿ ಉಳಿದ ಹಣವನ್ನು ಬಡವರ ಸಹಾಯಕ್ಕೆ ವಿನಿಯೋಗಿಸಲಾಗುವುದು ಎಂದರು.
ದಶಮಾನೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ಪೂವಪ್ಪ ಗೌಡ ಸೂರ್ಯ, ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ವಾರಿಜ ಕೆ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌಡ ಸಂಘದ ಮತ್ತು ಟ್ರಸ್ಟ್‌ನ ಪ್ರಮುಖರು ವಿವಿಧ ಸಲಹೆ ಸೂಚನೆ ನೀಡಿದರು. ಟ್ರಸ್ಟ್‌ನ ಕಾರ್ಯದರ್ಶಿ ದಿವ್ಯಪ್ರಸಾದ್ ಸ್ವಾಗತಿಸಿದರು. ದಶಮಾನೋತ್ಸವ ಸಮಿತಿ ಉಪಾಧ್ಯಕ್ಷ ಲೋಕನಾಥ ಗೌಡ ಕಾಡುಮನೆ ವಂದಿಸಿದರು. ಟ್ರಸ್ಟ್ ನ ಮೇಲ್ವಿಚಾರಕರಾದ ವಿಜಯ ಕುಮಾರ್, ಸುಮಲತಾ ಕಾರ್ಯಕ್ರಮ
ನಿರೂಪಿಸಿದರು.