‘ಡಾ.ಯು.ಪಿ ಶಿವಾನಂದ್ ಅವರೊಬ್ಬ ನಿಜಾರ್ಥದ ‘ಜಾದುಗಾರ’..’ – ಸುದ್ದಿ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಖ್ಯಾತ ವಕೀಲ ಮಹೇಶ್ ಕಜೆ ಅಭಿಮತ

0

ಪುತ್ತೂರು: ಸುದ್ದಿ ಬಿಡುಗಡೆ ಪುತ್ತೂರು ‘ದೀಪಾವಳಿ ವಿಶೇಷಾಂಕ’ ಮಾರುಕಟ್ಟೆಗೆ ಬಿಡುಗಡೆಗೊಂಡಿರುವ ಹಿನ್ನಲೆಯಲ್ಲಿ ನ.01ರಂದು ಇಲ್ಲಿನ ಅರಿವು ತರಬೇತಿ ಕೇಂದ್ರದಲ್ಲಿ ಸುದ್ದಿ ಬಳಗ ಮತ್ತು ದೀಪಾವಳಿ ವಿಶೇಷಾಂಕ ಸಂಚಿಕೆಯ ಲೇಖಕರ ಸ್ನೇಹಕೂಟ ಮತ್ತು ಸಹಭೋಜನ ಕಾರ್ಯಕ್ರಮ ನಡೆಯಿತು.


ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುತ್ತೂರಿನ ಖ್ಯಾತ ವಕೀಲರು ಹಾಗೂ ಹವ್ಯಾಸಿ ಬರಹಗಾರರರಾಗಿರುವ ಮಹೇಶ್ ಕಜೆ ಅವರು ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಜನಪರ ಆಂದೋಲನಗಳ ಮೂಲಕ ಡಾ.ಯು.ಪಿ ಶಿವಾನಂದ್ ಅವರು ಸಮಾಜದಲ್ಲಿ ಮಾಡಿರುವ ‘ಮ್ಯಾಜಿಕ್’ ಬಗ್ಗೆ ಮಾರ್ಮಿಕವಾಗಿ ಮಾತನಾಡಿ, ಡಾ.ಯು ಪಿ ಶಿವಾನಂದ್ ಅವರನ್ನು ಓರ್ವ ‘ಜಾದೂಗಾರ’ನೆಂದು ಬಣ್ಣಿಸಿದರು. ಹಾಗೂ ಈ ಬಾರಿಯ ದೀಪಾವಳಿ ವಿಶೇಷಾಂಕದ ಬರಹ-ವಿನ್ಯಾಸಗಳ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡಿದರು.


ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾಗಿರುವ ಡಾ.ಯ ಪಿ ಶಿವಾನಂದ್ ಅವರು ಮಾತನಾಡಿ, ‘ವೋಕಲ್ ಫಾರ್ ಲೋಕಲ್’ ಪರಿಕಲ್ಪನೆಯಡಿಯಲ್ಲಿ ಸುದ್ದಿ ಮಾಧ್ಯಮ ಪ್ರಾರಂಭದಿಂದಲೇ ಕಾರ್ಯಾಚರಿಸುತ್ತಿದ್ದು, ಇದೀಗ ‘ಅರಿವು’ ಎಂಬ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ನಮ್ಮೂರಿನ ಉತ್ಪಾದಕರಿಗೆ ಪ್ರೋತ್ಸಾಹವನ್ನು ನೀಡುವ ಮತ್ತು ಅವರ ಗುಣಮಟ್ಟದ ಉತ್ಪನ್ನಗಳಿಗೆ ರಾಜ್ಯ-ದೇಶ ಮತ್ತು ಜಾಗತಿಕ ಮಾರುಕಟ್ಟೆಯನ್ನು ಕಲ್ಪಿಸಿಕೊಡುವ ಮಹೋನ್ನತ ಯೋಜನೆಯನ್ನು ಹಾಕಿಕೊಂಡಿದೆ ಎಂದು ಹೇಳಿದರಲ್ಲದೇ, ಸುದ್ದಿ ಬಿಡುಗಡೆ ಮೂಲಕ ಮುಂದಿನ ದಿನಗಳಲ್ಲಿ ಪ್ರಕಟಿಸಲು ಉದ್ದೆಶಿಸಿರುವ ವಿಶೇಷ ಸಂಚಿಕೆಗಳ ಯೋಜನೆ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.


ಸುದ್ದಿ ಬಿಡುಗಡೆ ಪುತ್ತೂರು ಮತ್ತು ಸುದ್ದಿ ಮೀಡಿಯಾದ ಸಿ.ಇ.ಒ. ಸೃಜನ್ ಊರುಬೈಲು ಮಾತನಾಡಿ, ದೀಪಾವಳಿಯ ಶುಭಾಶಯಗಳನ್ನು ಎಲ್ಲರಿಗೂ ತಿಳಿಸಿ, ಮುಂಬರುವ ದಿನಗಳಲ್ಲಿ ಸುದ್ದಿ ಮಾಧ್ಯಮ ಹೊಸ ರೂಪ ಮತ್ತು ಹೊಸ ಕಾರ್ಯಕ್ರಮಗಳೊಂದಿಗೆ ನಿಮ್ಮ ಮುಂದೆ ಬರಲಿದೆ ಎಂದು ಹೇಳಿದರಲ್ಲದೇ. ದೀಪಾವಳಿಯಿಂದ ದೀಪಾವಳಿಗೆ ಹೊಸ ಲೆಕ್ಕ ಪ್ರಾರಂಭಗೊಳ್ಳುವಂತೆ ಈ ದೀಪಾವಳಿಯಿಂದ ನಾವೂ ಸಹ ಹೊಸತನದೊಂದಿಗೆ ಬರಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.


ಸುದ್ದಿ ಬಿಡುಗಡೆ ಪುತ್ತೂರು ದೀಪಾವಳಿ ವಿಶೇಷಾಂಕದ ಕಾರ್ಯನಿರ್ವಾಹಕ ಸಂಪಾದಕ ಹರಿಪ್ರಸಾದ್ ನೆಲ್ಯಾಡಿ ಅವರು, ವಿಶೇಷಾಂಕದಲ್ಲಿರುವ ವಿಶೇಷ ಲೇಖನಗಳು ಮತ್ತು ಲೇಖಕರು ಕುರಿತು ಸಭೆಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ಆಗಮಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸುದ್ದಿ ಬಿಡುಗಡೆಯ ವರದಿಗಾರರಾಗಿರುವ ಉಮೇಶ್ ಮಿತ್ತಡ್ಕ ಅವರು ಸುದ್ದಿಯ ಜನಾಂದೋಲನ, ಅರಿವು ಯೊಜನೆ ಮತ್ತು ವಿಶೇಷಾಂಕದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸುದ್ದಿ ಬಿಡುಗಡೆ ಬೆಳ್ತಂಗಡಿ ವಾರಪತ್ರಿಕೆಯ ಸಂಪಾದಕರಾಗಿರುವ ಸಂತೋಷ್ ಕುಮಾರ್ ಶಾಂತಿನಗರ ಅವರು ಮಹೇಶ್ ಕಜೆ ಅವರನ್ನು ಸಭೆಗೆ ವಿಶಿಷ್ಟ ರೀತಿಯಲ್ಲಿ ಪರಿಚಯ ಮಾಡಿಕೊಟ್ಟು ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ದೀಪಾವಳಿ ವಿಶೇಷಾಂಕಕ್ಕೆ ಲೇಖನಗಳನ್ನು ಕಳುಹಿಸಿಕೊಟ್ಟಿರುವ ನಾರಾಯಣ ರೈ ಕುಕ್ಕುವಳ್ಳಿ, ಪಿ ಜಿ ಚಂದ್ರಶೇಖರ್ ರಾವ್, ಪುತ್ತೂರು ಉಮೇಶ್ ನಾಯಕ್, ಶ್ರೀಪತಿ ಭಟ್ ಸುದ್ದಿ ಬಿಡುಗಡೆ ಪತ್ರಿಕೆಯ ಬಗ್ಗೆ ಮಾತನಾಡಿ, ವಿಶೇಷಾಂಕದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು. ಈ ಕಾರ್ಯಕ್ರಮದಲ್ಲಿ ಶೋಭಾ ಶಿವಾನಂದ್, ಸುದ್ದಿ ಬಿಡುಗಡೆ ಬೆಳ್ತಂಗಡಿ ಸಿ.ಇ.ಒ. ಸಿಂಚನಾ ಊರುಬೈಲು, ಕ್ರಿಸ್ಟೋಪರ್ ಕಾಂಪ್ಲೆಕ್ಸ್ ಮಾಲಕರಾಗಿರುವ ವಲೇರಿಯನ್‌ ಡಾಯಸ್, ಸುದ್ದಿ ಬಿಡುಗಡೆ ಪುತ್ತೂರು ಮತ್ತು ಸುದ್ದಿ ಮೀಡಿಯಾ, ಸುದ್ದಿ ಮಾಹಿತಿ ಸೆಂಟರ್ ಹಾಗೂ ಅರಿವು ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here